ನವಿ ಮುಂಬಯಿ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ದಕ್ಷಿಣ ಕನ್ನಡ ಜಿಲ್ಲೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ಪ್ರತಿಭಾನ್ವಿತ ಮಕ್ಕಳಿಗೆ ಕೊಡಮಾಡುವ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರತಿಭಾ ಪುರಸ್ಕಾರವನ್ನು ನ. 1ರಂದು ಮಂಗಳೂರಿನ ಪುರಭವನದಲ್ಲಿ ಪ್ರದಾನಿಸಲಾಯಿತು.
ಪದ್ಮಭೂಷಣ ಡಾ| ಬಿ. ಎಂ. ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಂಬಯಿ ಚಿಣ್ಣರ ಬಿಂಬದ ತುಳು-ಕನ್ನಡಿಗ ಬಹುಮುಖ ಪ್ರತಿಭೆಯ ನೆರೂಲ್ ನಿವಾಸಿ, ಶ್ರಾವ್ಯಾ ಬಿ. ಶೆಟ್ಟಿ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಸಾಧಕ ಪುರಸ್ಕಾರವನ್ನು ಪ್ರದಾನಿಸಿ ಗೌರವಿಸಲಾಯಿತು.
ಸಮಾರಂಭದ ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ತುಳು ಅಕಾಡೆಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ, ಪೊಳಲಿ ನಿತ್ಯಾನಂದ ಕಾರಂತ್, ವಿಜಯಲಕ್ಷ್ಮೀ ಶೆಟ್ಟಿ, ಸಾಹಿತ್ಯ ಬಳಗ ಮುಂಬಯಿ ಅಧ್ಯಕ್ಷ, ಮುಂಬಯಿ ಸಾಹಿತಿ ಎಚ್. ಬಿ. ಎಲ್. ರಾವ್, ಶ್ರೀಧರ್ ಹಂದೆ, ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟÅ ಘಟಕದ ಅಧ್ಯಕ್ಷ ಸುರೇಶ್ ಶೆಟ್ಟಿ ಯೆಯ್ನಾಡಿ ಮೊದಲಾದರು ಉಪಸ್ಥಿತರಿದ್ದು ಪ್ರತಿಭಾ ಪುರಸ್ಕಾರ ಪಡೆದ ಮಕ್ಕಳನ್ನು ಅಭಿನಂದಿಸಿ ಶುಭ ಹಾರೈಸಿದರು.
ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿರುವ ಶ್ರಾವ್ಯಾ ಬಿ. ಶೆಟ್ಟಿ ಅವರು ನೆರೂಲ್‌ನ ವಿದ್ಯಾ ಭವಾನ್ ಇಂಗ್ಲಿಷ್ ಹೈಸ್ಕೂಲ್‌ನ ಹತ್ತನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು, ಕಾರ್ಯಕ್ರಮ ನಿರೂಪಕಿಯಾಗಿ, ಭರತನಾಟ್ಯ, ಜಾನಪದ ನೃತ್ಯಗಾರ್ತಿಯಾಗಿ, ಸಂಗೀತ, ಭಜನೆ, ಚಿತ್ರಕಲೆ, ಭಾಷಣ, ಚರ್ಚಾಸ್ಪರ್ಧೆ, ಕರಾಟೆ ಕ್ಷೇತ್ರಗಳಲ್ಲೂ ವಿಶೇಷ ಸಾಧನೆ ಮಾಡಿದ್ದಾರೆ.
ಅವರು ನೆರೂಲ್ ನಿವಾಸಿಗಳಾದ ಮೂಲತಃ ಮೂಡುಬೆಳ್ಳೆ ನೆಲ್ಲಿಬೆಟ್ಟು ಮನೆಯ ಭಾಸ್ಕರ ಶೆಟ್ಟಿ ಮತ್ತು ಶಿರ್ಲಾಲು ರಾಧಾ ನಿವಾಸ ಆಶಾ ಬಿ. ಶೆಟ್ಟಿ ದಂಪತಿಯ ಪುತ್ರಿ. ಹಲವಾರು ಶಾಲಾ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.