Advertisement

ವಿಧಾನ ಮಂಡಲ ಕಲಾಪ: ದ.ಕ. ಜಿಲ್ಲೆ  ಶಾಸಕರ ರಿಪೋರ್ಟ್‌ ಕಾರ್ಡ್‌ 

05:11 AM Dec 29, 2018 | |

ನಮ್ಮ ಶಾಸಕರು ವಿಧಾನ ಮಂಡಲ ಕಲಾಪಗಳಲ್ಲಿ ಏನು ಮಾಡಿದ್ದಾರೆ? ಏನು ಪ್ರಶ್ನೆ ಕೇಳಿದ್ದಾರೆ? ಯಾವೆಲ್ಲಾ ಬಗ್ಗೆ ಪ್ರಸ್ತಾವಿಸಿದ್ದಾರೆ ಎಂಬುದಲ್ಲದೆ ಕಲಾಪಗಳಲ್ಲಿನ ಭಾಗೀದಾರಿಕೆ ಬಗ್ಗೆ ಜನರಿಗೆ ತಿಳಿಸುವ ಹೊಸ ಯತ್ನ ಉದಯವಾಣಿಯದ್ದು. ಪ್ರಶ್ನೆಗಳಿಗೆ ಸದನದಲ್ಲಿ ಉತ್ತರಿಸಿದರೆ, ಉಳಿದವುಗಳಿಗೆ ಸಂಬಂಧಪಟ್ಟ ಸಚಿವಾಲಯ ಶಾಸಕರಿಗೆ ಲಿಖೀತವಾಗಿ ಉತ್ತರಿಸುತ್ತದೆ. ಇತ್ತೀಚೆಗೆ ಬೆಳಗಾವಿಯಲ್ಲಿ 10 ದಿನ ನಡೆದ ವಿಧಾನಸಭೆ ಅಧಿವೇಶನದಲ್ಲಿ ದ.ಕ. ಜಿಲ್ಲೆಯ ಶಾಸಕರ ಪಾಲ್ಗೊಳ್ಳುವಿಕೆಯ ವಿವರ ಇಲ್ಲಿದೆ.

Advertisement

ವೇದವ್ಯಾಸ ಕಾಮತ್‌ – ಮಂಗಳೂರು ದಕ್ಷಿಣ
ಮಂಗಳೂರು ವಿಶ್ವವಿದ್ಯಾನಿಲಯದ ವಿವಿಧ ವಿಚಾರಗಳಲ್ಲಿ ಭಾರೀ ಅವ್ಯವಹಾರ ನಡೆದಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಹಾಗೂ ಅದರ ವರದಿಯನ್ನು ನೀಡುವಂತೆ ಆಗ್ರಹಿಸಿದ್ದರು. ಸ್ಪೀಕರ್‌ ರಮೇಶ್‌ ಕುಮಾರ್‌ ಕೂಡ ಈ ವಿಚಾರದಲ್ಲಿ ಧ್ವನಿಗೂಡಿಸಿದ್ದರು.


ಮರಳು ಸಮಸ್ಯೆ, ತುಳು ಭಾಷೆಗೆ ಸಾಂವಿಧಾನಿಕ ಮಾನ್ಯತೆ, ಮಳೆ ಹಾನಿಗೆ ಹೆಚ್ಚುವರಿ ಅನುದಾನ ನೀಡ ಬೇಕು, ಮನಪಾಕ್ಕೆ 100 ಕೋ.ರೂ. ಅನುದಾನ ನೀಡಬೇಕು ಸೇರಿದಂತೆ ವಿವಿಧ ವಿಷಯಗಳನ್ನು ಪ್ರಸ್ತಾಪಿಸಲು ಪೂರ್ವಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಚರ್ಚೆಗೆ ಅವಕಾಶ ದೊರೆತಿರಲಿಲ್ಲ. ಮಂಗಳೂರು ವಿ.ವಿ. ಹಗರಣಗಳ ಕುರಿತು ಮೂರು ತಿಂಗಳಲ್ಲಿ ವರದಿ ನೀಡುವುದಾಗಿ ಉನ್ನತ ಶಿಕ್ಷಣ ಸಚಿವರು ತಿಳಿಸಿದ್ದಾರೆ. ಚುಕ್ಕಿ ಗುರುತಿನ ಪ್ರಶ್ನೆ ಹಾಗೂ ಚುಕ್ಕಿ ಗುರುತಿಲ್ಲದ ಪ್ರಶ್ನೆಗಳಿಗೂ ಲಿಖೀತ ಉತ್ತರದ ಭರವಸೆಯನ್ನು ಸ್ಪೀಕರ್‌ ನೀಡಿದ್ದಾರೆ.

ಕೇಳಲಾದ ಪ್ರಶ್ನೆಗಳ ಸಂಖ್ಯೆ : 33    ಉತ್ತರ ಸಿಕ್ಕಿರುವುದು: ಬಹುತೇಕ

* ಭಾಗವಹಿಸಿದ ಪ್ರಮುಖ ಕಲಾಪ :ಮಂಗಳೂರು ವಿ.ವಿ.ಯಲ್ಲಿ ನಡೆದಿರುವ ಭಾರೀ ಅವ್ಯವಹಾರದ ಬಗ್ಗೆ ಚರ್ಚೆ.
*  ಪ್ರಸ್ತಾವಿಸಿದ ಕಾಮಗಾರಿ ಮತ್ತು ಸಿಕ್ಕಿದ ಭರವಸೆ-  ಮಂಗಳೂರು ವಿವಿ ಹಗರಣ ಕುರಿತು ವರದಿ, ವೆನ್ಲ್ಯಾಕ್  ಆಸ್ಪತ್ರೆ ಮೇಲ್ದರ್ಜೆಗೆ, ಇಂಟೆನ್ಸಿವ್‌ ಕೇರ್‌ ವಿಭಾಗ ಸ್ಥಾಪನೆಯ ಭರವಸೆ. 
* ಫಾಲೋಅಪ್‌ ಮಾಡಬೇಕಾದ ಅವಧಿ: ಮೂರು ತಿಂಗಳು (ವಿವಿ ಪ್ರಕರಣಕ್ಕೆ)
*  ಹಾಜರಾತಿ: ಶೇ. 100

ಡಾ| ವೈ. ಭರತ್‌ ಶೆಟ್ಟಿ,- ಮಂಗಳೂರು ಉತ್ತರ

Advertisement


ಹಲವು ವಿಚಾರಗಳಲ್ಲಿ ಮಾತನಾಡಲು ಅವಕಾಶ ನಿರೀಕ್ಷಿಸಿದ್ದರೂ ಅವಕಾಶ ಸಿಗಲಿಲ್ಲ ಎಂಬುದು ಶಾಸಕರ ಅಭಿಪ್ರಾಯ. ಕಂಬಳದ ವಿಚಾರವು ಪ್ರಸ್ತುತ ಸಂವಿಧಾನ ಪೀಠದಲ್ಲಿರುವುದರಿಂದ ಅಲ್ಲಿ ಕಂಬಳದ ವಿಚಾರದಲ್ಲಿ ಸಮರ್ಥವಾದ ಮಂಡಿಸಲು ಸೂಕ್ತ ವಕೀಲರನ್ನು ನೇಮಿಸಬೇಕು, ಮರಳು ಕೊರತೆಯಿಂದಾಗಿ ಜಿಲ್ಲೆಯ ಅಭಿವೃದ್ಧಿ  ಕಾಮಗಾರಿಗಳು ಕುಂಠಿತವಾಗಿರವುದು, 108 ಆ್ಯಂಬುಲೆನ್ಸ್‌ನ ಸಮಸ್ಯೆ, ಮಂಗಳೂರು ನಗರದ ವ್ಯಾಪ್ತಿಯಲ್ಲಿ ರಾಜ ಕಾಲುವೆ, ತೋಡು ಇನ್ನಿತರ ಸಾರ್ವಜನಿಕ ಸ್ಥಳ ಅತಿಕ್ರಮಣ ಮಾಡಿ ಕಟ್ಟಡ ನಿರ್ಮಾಣ ಮೊದಲಾದ ವಿಷಯಗಳನ್ನು ಲಿಖೀತವಾಗಿ ಸಲ್ಲಿಸಲಾಗಿದೆ. ಚುಕ್ಕಿ ಗುರುತಿನ ಪ್ರಶ್ನೆ ಹಾಗೂ ಚುಕ್ಕಿ ಗುರುತಿಲ್ಲದ ಪ್ರಶ್ನೆಗಳನ್ನೂ ಸಲ್ಲಿಸಲಾಗಿದ್ದು, ಲಿಖೀತ ಉತ್ತರದ ಭರವಸೆ ದೊರೆತಿದೆ. 

ಕೇಳಲಾದ ಪ್ರಶ್ನೆಗಳ ಸಂಖ್ಯೆ -25     ಉತ್ತರ ಸಿಕ್ಕಿರುವುದು- ಬಹುತೇಕ

*ಭಾಗವಹಿಸಿದ ಪ್ರಮುಖ ಕಲಾಪ : ಹಲವು ವಿಚಾರಗಳ ಬಗ್ಗೆ ಸಿದ್ಧತೆ ನಡೆಸಿದ್ದರೂ ಮಾತನಾಡಲು ಅವಕಾಶವೇ ಲಭಿಸಿಲ್ಲ.
*  ಪ್ರಸ್ತಾವಿಸಿದ ಕಾಮಗಾರಿ ಮತ್ತು ಸಿಕ್ಕಿದ ಭರವಸೆ- ಮರಳು ಅಲಭ್ಯ ಸಮಸ್ಯೆಯಿಂದಾಗಿ ಜನಸಾಮಾನ್ಯರಿಗೆ ಎದುರಾಗಿರುವ ಸಮಸ್ಯೆ; ಇತ್ಯರ್ಥಕ್ಕೆ ಶೀಘ್ರದಲ್ಲಿ ಉನ್ನತ ಮಟ್ಟದ ಸಭೆ
* ಫಾಲೋಅಪ್‌ ಮಾಡಬೇಕಾದ ಅವಧಿ: ನಿಗದಿತ ಅವಧಿ ಇಲ್ಲ.
* ಹಾಜರಾತಿ: ಶೇ. 100

ಸಂಜೀವ ಮಠಂದೂರು- ಪುತ್ತೂರು


ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಗರ್‌ ಹುಕುಂ ಸಾಗುವಳಿ ಸಮಸ್ಯೆ ಸಾಕಷ್ಟಿದೆ. ಜನಸಾಮಾನ್ಯರು ಎದುರಿಸುತ್ತಿರುವ ಮರಳು ಸಮಸ್ಯೆಯೂ ತೀವ್ರವಾಗಿದೆ. ಇದರಿಂದ ಸೃಷ್ಟಿಯಾಗುತ್ತಿರುವ ಇತರೆ ಸಮಸ್ಯೆಗಳ ಬಗ್ಗೆಯೂ ತೀವ್ರವವಾಗಿ ಪ್ರಸ್ತಾಪಿಸಲಾಯಿತು. ಅಲ್ಲದೇ ಅನುದಾನಿತ ಕನ್ನಡ ಮಾಧ್ಯಮದಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ, ರಸ್ತೆಗಳ ನಿರ್ವಹಣೆ ಗಾಗಿ ಅನುದಾನದ ಬಗ್ಗೆ ಪ್ರಶ್ನೆ ಕೇಳಲಾಗಿತ್ತು.  ಕಾಡುಪ್ರಾಣಿ ಹಾವಳಿ ಯಿಂದ ಬೆಳೆ ನಷ್ಟವಾದ ಬಗ್ಗೆ, ನಾನ್‌ ಸಿಆರ್‌ಝಡ್‌ ಬಗ್ಗೆಯೂ ಪ್ರಸ್ತಾಪಿಸಲಾಗಿದೆ.  ಜಲಧಾರೆ ಯೋಜನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವ ಗ್ರಾಮಗಳಿಗೆ ಅನ್ವಯ, ರಾಜ್ಯದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣದ ಬಗ್ಗೆ, ಆರ್‌ಒ ಪ್ಲಾಂಟ್‌ ನಿರ್ವಹಣೆ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗಿದೆ. 

ಕೇಳಲಾದ ಪ್ರಶ್ನೆಗಳ ಸಂಖ್ಯೆ 8  ಉತ್ತರ ಸಿಕ್ಕಿರುವುದು- 8
* ಭಾಗವಹಿಸಿದ ಪ್ರಮುಖ ಕಲಾಪ; ಬಗರ್‌ ಹುಕುಂ ಸಾಗುವಳಿ ಹಾಗೂ ಮರಳು ಸಮಸ್ಯೆ ಬಗ್ಗೆ
* ಪ್ರಸ್ತಾವಿಸಿದ ಕಾಮಗಾರಿ ಮತ್ತು ಸಿಕ್ಕಿದ ಭರವಸೆ-  ರಸ್ತೆಗಳ ನಿರ್ವಹಣೆಗಾಗಿ ಅನುದಾನದ ಬಗ್ಗೆ ಗಮನ ಸಳೆದಿದ್ದಾರೆ. ನಿರ್ದಿಷ್ಟ ಭರವಸೆಗಳೇನೂ ಲಭಿಸಿಲ್ಲ 
*  ಫಾಲೋಅಪ್‌ ಮಾಡಬೇಕಾದ ಅವಧಿ: ನಿಗದಿತ ಅವಧಿ ಇಲ್ಲ.
*  ಹಾಜರಾತಿ: ಶೇ. 100

ಶಾಸಕ ಹರೀಶ್‌ ಪೂಂಜ – ಬೆಳ್ತಂಗಡಿ


ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆ ಬೆಳೆ ಕೊಳೆರೋಗಕ್ಕೆ ತುತ್ತಾಗಿರುವ ಕುರಿತು ಪ್ರಧಾನವಾಗಿ ಬೆಳಗಾವಿ ಅಧಿವೇಶನದಲ್ಲಿ ಗಮನ ಸೆಳೆದಿದ್ದಾರೆ. ಕೊಳೆರೋಗದಿಂದಾಗಿ ಜಿಲ್ಲೆಗೆ  252 ಕೋ.ರೂ. ನಷ್ಟವಾಗಿದೆ ಎಂಬ ಉತ್ತರವೂ ತೋಟಗಾರಿಕಾ ಸಚಿವ ಎಂ.ಸಿ. ಮನಗೂಳಿ ಅವರಿಂದ ಲಭಿಸಿದೆ. ಅತಿವೃಷ್ಟಿಯಿಂದ ಹಾನಿಗೀಡಾದ ಅಡಿಕೆ ಸೇರಿದಂತೆ ತೋಟಗಾರಿಕಾ ಬೆಳೆಗಳಿಗೆ ಪರಿಹಾರಕ್ಕಾಗಿ ದ.ಕ. ಜಿಲ್ಲೆಗೆ 6,047.54 ಲಕ್ಷ ರೂ., ರಾಜ್ಯಕ್ಕೆ 17,527 ಲಕ್ಷ ರೂ. ನೀಡುವಂತೆ ಕಂದಾಯ ಇಲಾಖೆಯ ಮೂಲಕ ಕೇಂದ್ರಕ್ಕೆ ಆಗಸ್ಟ್‌ ನಲ್ಲಿ ಪ್ರಸ್ತಾವನೆ ಕಳುಹಿಸಲಾಗಿದ್ದು, 175.27 ಕೋ.ರೂ. ಮಾತ್ರ ಅನುದಾನ ಬಂದಿರುತ್ತದೆ ಎಂದು ಸಚಿವರು ತಿಳಿಸಿದ್ದರು. ಸರಕಾರಿ ಶಾಲೆಗಳ ಅಭಿವೃದ್ಧಿ ದೃಷ್ಟಿಯಿಂದ ಬಂಟ್ವಾಳದ ದಡ್ಡಲಕಾಡು ಶಾಲೆಯನ್ನು ಉದಾಹರಣೆ ನೀಡಿದ್ದರು.

ಕೇಳಲಾದ ಪ್ರಶ್ನೆಗಳ ಸಂಖ್ಯೆ- 54   ಉತ್ತರ ಸಿಕ್ಕಿರುವುದು – ಬಹುತೇಕ
*ಭಾಗವಹಿಸಿದ ಪ್ರಮುಖ ಕಲಾಪ- ಜಿಲ್ಲೆಯಲ್ಲಿ ಕಾಡುತ್ತಿರುವ ಅಡಿಕೆ ಕೊಳೆರೋಗದ ಬಗ್ಗೆ ಚರ್ಚೆ.
* ಪ್ರಸ್ತಾವಿಸಿದ ಕಾಮಗಾರಿ ಮತ್ತು ಸಿಕ್ಕಿದ ಭರವಸೆ- ಸರಕಾರಿ ಶಾಲೆಗಳ ಅಭಿವೃದ್ಧಿಗೆ ಆಗ್ರಹ; ಶಿಕ್ಷಣ ಸಚಿವರಿಂದ ಪೂರಕ ಸ್ಪಂದನೆ, ಮೂಲಸೌಕರ್ಯ ಒದಗಿಸುವ ಭರವಸೆ
* ಫಾಲೋಅಪ್‌ ಮಾಡಬೇಕಾದ ಅವಧಿ: ನಿಗದಿತ ಅವಧಿ ಇಲ್ಲ
*ಹಾಜರಾತಿ: ಶೇ. 100

ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು - ಬಂಟ್ವಾಳ


ಕ್ಷೇತ್ರದ ಸಂಪರ್ಕದ ಮೂಲರಪಟ್ನ ಸೇತುವೆ, ಪುಂಜಾಲಕಟ್ಟೆ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ ಮತ್ತು ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರಕ್ಕೆ ಅರಿವಳಿಕೆ ತಜ್ಞರ ನೇಮಕ, ಅಂಗನವಾಡಿ  ಕಟ್ಟಡ ದುರಸ್ತಿ, ಅಡಿಕೆ ಬೆಳೆಗೆ ಕೊಳೆ ರೋಗ ಪರಿಹಾರ,  ಪಿಲಾತಬೆಟ್ಟು ಪ.ಪೂ. ಕಾಲೇಜು ಉಪನ್ಯಾಸಕರ ನೇಮಕ, ಲೋವೊಲ್ಟೆàಜ್‌ ನಿವಾರಣೆ ಬಗ್ಗೆ ಪ್ರಶ್ನಿಸಿದ್ದರು. ಇಂದಿರಾ ಕ್ಯಾಂಟೀನ್‌ ಗಲಾಟೆಯಲ್ಲಿ ಬಂಟ್ವಾಳದಲ್ಲಿ ನಡೆಯುತ್ತಿರುವ ಗೂಂಡಾ ರಾಜಕೀಯ ಬಗ್ಗೆ ಮಾತನಾಡಿದ್ದರು. ಗರಿಷ್ಠ ಪ್ರಶ್ನೆಗಳಿಗೆ ಉತ್ತರ ಪಡೆಯುವಲ್ಲಿ ಪ್ರಯತ್ನಿಸಿದ್ದೇನೆ.  ಇನ್ನೂ ಕೆಲವು ಉತ್ತರ ಬರಬೇಕಿದೆ. ಬಂಟ್ವಾಳ ಪುರಸಭೆಯ ಅವ್ಯವಹಾರ, ಸಿಆರ್‌ಝಡ್‌ ರಸ್ತೆ ಅನುದಾನ, ತುಂಬೆ ವೆಂಟೆಡ್‌ ಡ್ಯಾಂ ಮುಳುಗಡೆ ಪ್ರದೇಶಕ್ಕೆ ಪರಿಹಾರ ಮಂಜೂರಾತಿ ವಿಷಯಗಳಿಗೆ ಉತ್ತರ ಲಭಿಸಿಲ್ಲ.

ಕೇಳಲಾದ ಪ್ರಶ್ನೆಗಳ ಸಂಖ್ಯೆ 21   ಉತ್ತರ ಸಿಕ್ಕಿರುವುದು- 13
*ಭಾಗವಹಿಸಿದ ಪ್ರಮುಖ ಕಲಾಪ- ಪ್ರಶ್ನೋತ್ತರ ವೇಳೆ ಮತ್ತು ಬರದ ಕುರಿತಾದ ಚರ್ಚೆ
* ಪ್ರಸ್ತಾವಿಸಿದ ಕಾಮಗಾರಿ ಮತ್ತು ಸಿಕ್ಕಿದ ಭರವಸೆ- ಮೂಲರಪಟ್ನ ಸೇತುವೆ ನಿರ್ಮಾಣ; ಡಿಸೆಂಬರ್‌ ಅಂತ್ಯದಲ್ಲಿ ಶಂಕುಸ್ಥಾಪನೆಯ ಭರವಸೆ ಲಭಿಸಿದೆ.
* ಫಾಲೋಅಪ್‌ ಮಾಡಬೇಕಾದ ಅವಧಿ: ನಿಗದಿತ ಅವಧಿ ಇಲ್ಲ.
* ಹಾಜರಾತಿ: ಶೇ. 100

Advertisement

Udayavani is now on Telegram. Click here to join our channel and stay updated with the latest news.

Next