Advertisement

ದ.ಕ. ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ: 21,023 ಕೋ.ರೂ. ಸಾಲ ಯೋಜನೆ ಗುರಿ

02:40 AM Mar 23, 2022 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ 2022-23ನೇ ಸಾಲಿನಲ್ಲಿ ಒಟ್ಟು 21,023 ಕೋ.ರೂ. ಸಾಲ ಯೋಜನೆಯನ್ನು ಬಿಡುಗಡೆಗೊಳಿಸಲಾಗಿದೆ.

Advertisement

ದ.ಕ. ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಸಮಿತಿ ಅಧ್ಯಕ್ಷ, ಜಿ.ಪಂ. ಸಿಇಒ ಡಾ| ಕುಮಾರ್‌ ನೂತನ ಸಾಲ ಯೋಜನೆಯನ್ನು ಬಿಡುಗಡೆಗೊಳಿಸಿದರು.

ಆದ್ಯತ ವಲಯಕ್ಕೆ 14,223 ಕೋ.ರೂ. ನಿಗದಿಪಡಿಸಲಾಗಿದೆ. ಕೃಷಿ ಕ್ಷೇತ್ರಕ್ಕೆ 6651 ಕೋ.ರೂ., ಎಂಎಸ್‌ಎಂಇ ಕ್ಷೇತ್ರಕ್ಕೆ 5,213 ಕೋ. ರೂ., ವಸತಿ ಯೋಜನೆಗೆ 1,462 ಕೋ.ರೂ. ಮತ್ತು ಶಿಕ್ಷಣ ಕ್ಷೇತ್ರಕ್ಕೆ 107 ಕೋ.ರೂ. ಮೀಸಲಿರಿಸಲಾಗಿದೆ. ಈ ಗುರಿಯನ್ನು ಎಲ್ಲ ಬ್ಯಾಂಕ್‌ಗಳಿಗೆ ನಿರ್ವಹಣೆ ಮತ್ತು ಸಂಭಾವ್ಯತೆ ಆಧಾರ ಮೇಲೆ ಹಂಚಿಕೆ ಮಾಡಲಾಗಿದೆ.

90,766.07 ಕೋ.ರೂ. ವ್ಯವಹಾರ
2021ರ ಡಿಸೆಂಬರ್‌ ಅಂತ್ಯಕ್ಕೆ ಜಿಲ್ಲೆಯ ಬ್ಯಾಂಕ್‌ಗಳ ಒಟ್ಟು ವ್ಯವಹಾರ 90,766.07 ಕೋ.ರೂ. ಆಗಿದ್ದು, ವರ್ಷದಿಂದ ವರ್ಷಕ್ಕೆ ಶೇ. 9.86ರಷ್ಟು ಬೆಳವಣಿಗೆ ಸಾಧಿಸಿದೆ.

ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಜಿಲ್ಲಾ ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಪ್ರವೀಣ್‌ ಜಿಲ್ಲೆಯಲ್ಲಿ ಬ್ಯಾಂಕ್‌ಗಳ ವ್ಯವಹಾರ ಕುರಿತು ಮಾಹಿತಿ ನೀಡಿದರು. ಡಿಸೆಂಬರ್‌ ಅಂತ್ಯಕ್ಕೆ ಜಿಲ್ಲೆಯಲ್ಲಿ ವಿವಿಧ ಬ್ಯಾಂಕ್‌ಗಳ ಒಟ್ಟು 607 ಶಾಖೆಗಳಿವೆ. ಒಟ್ಟು ಠೇವಣಿ 55,772.72 ಕೋ.ರೂ. ಆಗಿದ್ದು, ವರ್ಷದಿಂದ ವರ್ಷಕ್ಕೆ ಶೇ. 8.96ರಷ್ಟು ಬೆಳವಣಿಗೆ ಸಾಧಿಸಲಾಗಿದೆ. ಒಟ್ಟು ಸಾಲ ಪ್ರಮಾಣ 34,993.35 ಕೋ.ರೂ. ಆಗಿದ್ದು, ಶೇ.11.34 ರಷ್ಟು ಅಭಿವೃದ್ಧಿ ಆಗಿದೆ. ಸಾಲ-ಠೇವಣಿ ಅನುಪಾತ ಶೇ. 62.74 ಆಗಿದ್ದು, 2020ರ ಡಿಸೆಂಬರ್‌ ಅಂತ್ಯಕ್ಕೆ ಹೋಲಿಸಿದಾಗ ಶೇ. 1.34 ಬೆಳವಣಿಗೆ ಸಾಧಿಸಲಾಗಿದೆ. ಆದ್ಯತೆ ಮತ್ತು ಆದ್ಯತೇತರ ವಲಯಗಳಲ್ಲಿ 16,742.09 ಕೋ.ರೂ. ಸಾಲ ವಿತರಿಸಲಾಗಿದ್ದು, ಶೇ. 86.59 ಪ್ರಗತಿ ಸಾಧಿಸಲಾಗಿದೆ ಎಂದರು.

Advertisement

ಕೃಷಿ ಕ್ಷೇತ್ರಕ್ಕೆ 3,931.45 ಕೋ.ರೂ. ವಿತರಣೆಯಾಗಿದ್ದು ಶೇ. 59.11 ನಿರ್ವಹಣೆ ಸಾಧಿಸಲಾಗಿದೆ. ಎಂಎಸ್‌ಎಂಇನಲ್ಲಿ 3,862.72 ಕೋ.ರೂ. ವಿತರಣೆಯಾಗಿದ್ದು, ಶೇ. 96.46 ಪ್ರಗತಿ ಸಾಧಿಸಲಾಗಿದೆ. ಶೈಕ್ಷಣಿಕ ಸಾಲ ಕ್ಷೇತ್ರದಲ್ಲಿ 60.46 ಕೋ.ರೂ. ವಿತರಣೆಯಾಗಿದ್ದು, ಶೇ. 56.77 ನಿರ್ವಹಣೆ ಸಾಧಿಸಲಾಗಿದೆ. ಗೃಹಸಾಲ ವಲಯದಲ್ಲಿ 391.27 ಕೋ.ರೂ. ಸಾಲ ವಿತರಣೆಯಾಗಿದ್ದು, ಶೇ. 39.12ರಷ್ಟು ನಿರ್ವಹಣೆಯಾಗಿದೆ. ಆದ್ಯತೆ ವಲಯದ ಒಟ್ಟು ಸಾಲ ವಿತರಣೆ 8,795.43 ಕೋ.ರೂ. ಆಗಿದ್ದು, ಶೇ. 70.17 ನಿರ್ವಹಣೆ ತೋರಿದೆ. ಮುದ್ರಾ ಯೋಜನೆಯಡಿ 28,146 ಖಾತೆಗಳಲ್ಲಿ 306.84 ಕೋ.ರೂ. ಸಾಲ ವಿತರಿಸಲಾಗಿದೆ. ಅಟಲ್‌ ಪಿಂಚಣಿ ಯೋಜನೆಯಡಿ 1,17,824 ಖಾತೆ ತೆರೆಯಲ್ಪಟ್ಟಿವೆ.

ಕೇಂದ್ರ ಸರಕಾರದ ಯೋಜನೆಗಳ ಅನುಷ್ಠಾನದಲ್ಲಿ ಕೆಲವು ಖಾಸಗಿ ಬ್ಯಾಂಕ್‌ಗಳು ನಿರ್ಲಕ್ಷ್ಯ ತೋರಿರುವುದು ಕಂಡುಬಂದಿದ್ದು, ನೋಟಿಸ್‌ ಜಾರಿ ಮಾಡಲಾಗುವುದು ಎಂದು ಸಮಿತಿ ಅಧ್ಯಕ್ಷ ಡಾ| ಕುಮಾರ್‌ ಹೇಳಿದರು.
ಆರ್‌ಬಿಐ ಸಹಾಯಕ ಮಹಾಪ್ರಬಂಧಕ ಪಿ. ವಿಶ್ವಾಸ್‌, ಕೆನರಾ ಬ್ಯಾಂಕ್‌ ಮಂಗಳೂರು ವೃತ್ತ ಕಚೇರಿಯ ಉಪಮಹಾ ಪ್ರಬಂಧಕ ಶ್ರೀಕಾಂತ್‌ ವಿ.ಕೆ. ಉಪಸ್ಥಿತರಿದ್ದರು.

ಗ್ರಾಮ ಪಂಚಾಯತ್‌ ಮಟ್ಟದಲ್ಲಿ ವಿಮಾ ಮೇಳ
ಜಿಲ್ಲೆಯನ್ನು ಸಂಪೂರ್ಣ ವಿಮಾ ಜಿಲ್ಲೆಯಾಗಿ ಮಾಡುವ ಗುರಿ ಇರಿಸಿಕೊಳ್ಳಲಾಗಿದೆ. ಪ್ರಸ್ತುತ ಪ್ರಧಾನಮಂತ್ರಿ ಜೀವನಜ್ಯೋತಿ ವಿಮಾ ಯೋಜನೆಯಲ್ಲಿ 2.16 ಲಕ್ಷ, ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆಯಲ್ಲಿ 5.30 ಲಕ್ಷ ಮತ್ತು ಅಟಲ್‌ ವಿಮಾ ಯೋಜನೆಯಲ್ಲಿ 1.17 ಲಕ್ಷ ಮಂದಿಯನ್ನು ವಿಮೆ ವ್ಯಾಪ್ತಿಗೆ ತರಲಾಗಿದೆ. ಗ್ರಾ.ಪಂ. ಮಟ್ಟದಲ್ಲಿ ವಿಮಾ ಮೇಳಗಳನ್ನು ಆಯೋಜಿಸಿ ಉಳಿದವರನ್ನು ವಿಮಾ ವ್ಯಾಪ್ತಿಗೆ ತರಬಹುದಾಗಿದ್ದು, ಈ ನಿಟ್ಟಿನಲ್ಲಿ ಪಿಡಿಒಗಳಿಗೆ ಸುತ್ತೋಲೆ ಹೊರಡಿಸಲಾಗುವುದು ಎಂದು ಡಾ| ಕುಮಾರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next