Advertisement

ದ.ಕ. ಕಾಂಗ್ರೆಸ್‌ ಅಭ್ಯರ್ಥಿ ಶೀಘ್ರ ಪ್ರಕಟ: ಯು.ಟಿ. ಖಾದರ್‌ 

04:52 AM Mar 18, 2019 | |

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯ ಆಯ್ಕೆ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲಿ ಹೈಕಮಾಂಡ್‌ ಹೆಸರು ಪ್ರಕಟಿಸಲಿದೆ. ರಮಾನಾಥ ರೈ, ವಿನಯ ಕುಮಾರ್‌ ಸೊರಕೆ, ಡಾ| ಎಂ.ಎನ್‌.ರಾಜೇಂದ್ರ ಕುಮಾರ್‌, ಮಿಥುನ್‌ ರೈ, ಕಣಚೂರು ಮೋನು ಸೇರಿದಂತೆ ಹಲವು ಮಂದಿಯ ಹೆಸರು ಆಕಾಂಕ್ಷಿಗಳ ಪಟ್ಟಿಯಲ್ಲಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ತಿಳಿಸಿದ್ದಾರೆ.

Advertisement

ದ.ಕ. ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ರವಿವಾರ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಬೆಂಬಲಿತ ಜೆಡಿಎಸ್‌ ಅಭ್ಯರ್ಥಿಗೆ ಟಿಕೆಟ್‌ ನೀಡುತ್ತಿರುವ ವಿಚಾರದಲ್ಲಿ ಹೈಕಮಾಂಡ್‌ ಹೇಳುವ ನಿರ್ಧಾರಕ್ಕೆ ನಾವು ಬದ್ಧ. ಟಿಕೆಟ್‌ ವಿಚಾರದ‌ಲ್ಲಿ ಕೆಲವು ನಾಯಕರು, ಕಾರ್ಯಕರ್ತರಲ್ಲಿ ಅಸಮಾಧಾನವಿರುವುದು ಸಹಜ. ಈ ಬಗ್ಗೆ ಪಕ್ಷದ ಸಭೆಯಲ್ಲಿ ಚರ್ಚೆ ನಡೆಸುವ ಸಂಬಂಧ ಹೈಕಮಾಂಡ್‌ಗೆ ಪತ್ರ ಬರೆಯಲಾಗಿದೆ ಎಂದರು.

ಪೂಜಾರಿ ಹೇಳಿರಲಾರರು
ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಅವರು ಮೋದಿ ಆಡಳಿತ ಪರವಾಗಿ ಮಾತನಾಡಿದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಖಾದರ್‌, “ಪೂಜಾರಿ ಅವರು ನನ್ನ ಗುರುಗಳು. ಅವರು ಆ ರೀತಿ ಹೇಳಿಕೆ ನೀಡಿದ್ದಾರೆ ಎನ್ನುವುದನ್ನು ನಂಬಲು ನನಗೆ ಆಗುತ್ತಿಲ್ಲ. ಯಾಕೆಂದರೆ ಮೋದಿ ಅವರ ಆಡಳಿತ ವ್ಯವಸ್ಥೆಯ ವಿರುದ್ಧ ಈ ಹಿಂದೆ ಪೂಜಾರಿ ಅವರೇ ನಮಗೆ ತಿಳಿಸಿಕೊಟ್ಟಿದ್ದಾರೆ. ಬಹುಶಃ ರಾಹುಲ್‌ ಗಾಂಧಿ ಹೆಸರು ಹೇಳುವ ಬದಲು ಮೋದಿ ಹೆಸರನ್ನು ತಪ್ಪಿ ಬಳಕೆ ಮಾಡಿರಬಹುದು. ಪೂಜಾರಿ ಅವರು ಚುನಾವಣೆಗೆ ನಿಂತಾಗ ಅತ್ಯಂತ ಕೆಟ್ಟದಾಗಿ ಹಾಗೂ ಹೀನಾಯವಾಗಿ ಬೈದಿದ್ದ ಬಿಜೆಪಿಯವರು ಈಗ ಅವರ ವೀಡಿಯೋವನ್ನು ಬಳಸಿ ಅಪಪ್ರಚಾರ ಮಾಡುತ್ತಿದ್ದಾರೆ. ಪೂಜಾರಿಯವರ ಬಗ್ಗೆ ನಿಜಕ್ಕೂ ಬಿಜೆಪಿಗೆ ಕಾಳಜಿಯಿದ್ದರೆ, ಅವರನ್ನು ಚುನಾವಣೆಗೆ ನಿಲ್ಲಿಸಿ, ಬೆಂಬಲಿಸಲಿ. ಒಂದು ವೇಳೆ ಜನಾರ್ದನ ಪೂಜಾರಿ ಅವರನ್ನು ಬಿಜೆಪಿ ಬೆಂಬಲಿಸಿದರೆ ನಾವು ಪೂಜಾರಿಯನ್ನು ಬೆಂಬಲಿಸುತ್ತೇವೆ ಎಂದರು.

ನಿಖೀಲ್‌ ಗೆಲುವು ನಿಚ್ಚಳ
ಮಂಡ್ಯದಲ್ಲಿ ಕಾಂಗ್ರೆಸ್‌ ಬೆಂಬಲಿತ ಜೆಡಿಎಸ್‌ ಅಭ್ಯರ್ಥಿ ನಿಖೀಲ್‌ ಗೌಡ ಅಭ್ಯರ್ಥಿಯಾಗುವುದು ಖಚಿತ. ಅವರ ಗೆಲುವು ಕಾಂಗ್ರೆಸ್‌ ಗೆಲುವು. ಈಗಾಗಲೇ ಕಾಂಗ್ರೆಸ್‌-ಜೆಡಿಎಸ್‌ ನಾಯಕರು ಸೀಟು ಹಂಚಿಕೆ ಮಾತುಕತೆ ನಡೆಸಿದ್ದಾರೆ. ಕೆಲವೊಂದು ಕಡೆ ಗೊಂದಲವಿದ್ದು, ಅದು ಒಂದೆರಡು ದಿನದಲ್ಲಿ ಸರಿಯಾಗಲಿದೆ. ರಾಜ್ಯದಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಜಂಟಿಯಾಗಿ ಪ್ರಚಾರ ಕಾರ್ಯ ನಡೆಸಲಿದ್ದಾವೆ ಎಂದರು.

ಕಾಸರಗೋಡಿಗೆ ಇಫ್ತಿಕಾರ್‌; ಗೊತ್ತಿಲ್ಲ!
ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಖಾದರ್‌ ಸಹೋದರ ಯು.ಟಿ. ಇಫ್ತಿಕಾರ್‌ ಸ್ಪರ್ಧಿಸುವ ವರದಿಯ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಖಾದರ್‌, ಅದನ್ನು ಆ ಜಿಲ್ಲೆಯ ಬ್ಲಾಕ್‌ ಮತ್ತು ಜಿಲ್ಲಾ ಕಾಂಗ್ರೆಸ್‌ ನಿರ್ಧರಿಸಬೇಕು. ಬೇರೆ ವಿಚಾರ ನನಗೆ ಗೊತ್ತಿಲ್ಲ ಎಂದರು.

Advertisement

ಲೋಕಸಭಾ ಚುನಾವಣೆ ಸಂಬಂಧ ಎಸ್‌ಡಿಪಿಐ ಸಭೆ ನಡೆಸುತ್ತಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಸಭೆ ನಡೆಸಲು ಅವರಿಗೆ ಪ್ರಜಾಪ್ರಭುತ್ವದಲ್ಲಿ ಅವಕಾಶವಿದೆ. ಹಾಗಾಗಿ ನಡೆಸಲಿ. ಆದರೆ ಇದೆಲ್ಲದರ ಪ್ರಯೋಜನ ಬಿಜೆಪಿಗೆ ಆಗುತ್ತದೆ ಎಂದು ಯು.ಟಿ. ಖಾದರ್‌ ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ, ಕಾಂಗ್ರೆಸ್‌ ಪಕ್ಷದ ಮುಖಂಡರಾದ ಕಣಚೂರು ಮೋನು, ಸಂತೋಷ್‌, ಸದಾಶಿವ ಉಳ್ಳಾಲ, ಪಿಯೂಷ್‌ ಮೊಂತೇರೋ, ಸಂತೋಷ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next