Advertisement

ದ.ಕ.: ಕಾಂಗ್ರೆಸ್‌ ಅಭ್ಯರ್ಥಿ ಇಂದು ಘೋಷಣೆ?

12:30 AM Mar 23, 2019 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿಯ ಆಯ್ಕೆ ಸಂಬಂಧ ಶುಕ್ರವಾರ ಹೊಸದಿಲ್ಲಿಯಲ್ಲಿ ನಡೆದ ಪಕ್ಷದ ಕೇಂದ್ರ ಚುನಾವಣ ಸಮಿತಿಯ ಮಹತ್ವದ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಂಡಿದ್ದು, ಅಭ್ಯರ್ಥಿಯ ಹೆಸರು ಶನಿವಾರ ಘೋಷಣೆಯಾಗುವ ಸಾಧ್ಯತೆಯಿದೆ.
 
ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳು ಹೊಸದಿಲ್ಲಿಯಲ್ಲಿ ಎರಡು ದಿನಗಳಿಂದ ಬೀಡು ಬಿಟ್ಟಿದ್ದು, ಅಧಿಕೃತ ಘೋಷಣೆಗಾಗಿ ಕಾಯುತ್ತಿದ್ದಾರೆ. ಪಕ್ಷದ ವರಿಷ್ಠರು ಆಕಾಂಕ್ಷಿಗಳ ಜತೆ ಚರ್ಚೆ ನಡೆಸಿ ಅವರ ಅಭಿಪ್ರಾಯಗಳನ್ನು ಗುರುವಾರ ಆಲಿಸಿದ್ದರು. ಶುಕ್ರವಾರ ಕರ್ನಾಟಕ ರಾಜ್ಯದ ಅಭ್ಯರ್ಥಿಗಳ ಆಯ್ಕೆ ಕುರಿತು ಸಂಜೆ 3.30ರಿಂದ ಕೇಂದ್ರ ಚುನಾವಣ ಸಮಿತಿಯ ಸಭೆ ನಡೆದಿದ್ದು, ಸುಮಾರು ಒಂದೂವರೆ ತಾಸು ಚರ್ಚೆ ನಡೆದಿದೆ. ಇದರಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ| ಜಿ. ಪರಮೇಶ್ವರ್‌, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಮಾಜಿ ಮುಖ್ಯಮಂತ್ರಿ ಡಾ| ಎಂ. ವೀರಪ್ಪ ಮೊಲಿ, ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಹಾಗೂ ಪಕ್ಷದ ಮೈಸೂರು ವಿಭಾಗದ ಉಸ್ತುವಾರಿ ಹಾಗೂ ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥ್‌ ಉಪಸ್ಥಿತರಿದ್ದರು.

Advertisement

ಸಭೆಯಲ್ಲಿ ಜಾತಿ ಸಮೀಕರಣ, ಯುವ ಪ್ರಾತಿನಿಧ್ಯ ಸೇರಿದಂತೆ ಹಲವು ವಿಚಾರಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಅಂತಿಮವಾಗಿ ಬಿ.ಕೆ. ಹರಿಪ್ರಸಾದ್‌, ವಿನಯ ಕುಮಾರ್‌ ಸೊರಕೆ, ರಮಾನಾಥ ರೈ, ಮಿಥುನ್‌ ರೈ ಅವರ ಹೆಸರು ಮುನ್ನಲೆಗೆ ಬಂದಿತ್ತು. ಇದರ ಜತೆಗೆ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಹೆಸರು ಸಭೆಯಲ್ಲಿ ಚರ್ಚೆಗೆ ಬಂದಿದೆ ಎನ್ನುತ್ತವೆ ಮೂಲಗಳು.

ಕೇಂದ್ರ ಚುನಾವಣ ಸಮಿತಿ ಸಭೆಯ ಬಳಿಕವೂ ಅಭ್ಯರ್ಥಿ ಆಯ್ಕೆ ಕುರಿತ ಗಂಭೀರ ಚರ್ಚೆ ಮುಂದುವರಿದಿತ್ತು. ಕಾಂಗ್ರೆಸ್‌ನ ಮೂಲಗಳ ಪ್ರಕಾರ, ಸದ್ಯಕ್ಕೆ ಬಿ.ಕೆ. ಹರಿಪ್ರಸಾದ್‌ ಅವರ ಹೆಸರು ಮುಂಚೂಣಿಯಲ್ಲಿದೆ. ಅಂತಿಮವಾಗಿ ಯಾರು ಟಿಕೆಟ್‌ ಗಿಟ್ಟಿಸಿಕೊಳ್ಳುತ್ತಾರೆ ಎನ್ನುವ ಕುತೂಹಲ ಇನ್ನೂ ತಣಿದಿಲ್ಲ. 

ಸೋಮವಾರ ನಳಿನ್‌ ನಾಮಪತ್ರ ಸಲ್ಲಿಕೆ 
ಬಿಜೆಪಿ ಅಭ್ಯರ್ಥಿ ನಳಿನ್‌ ಕುಮಾರ್‌ ಕಟೀಲು ಅವರು ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ. ಆ ದಿನ ಬೆಳಗ್ಗೆ 9.30 ಗಂಟೆಗೆ ಬಂಟ್ಸ್‌ ಹಾಸ್ಟೆಲ್‌ನ ಬಿಜೆಪಿ ಚುನಾವಣ ಪ್ರಚಾರ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆ ಮೂಲಕ ಸಾಗಿ 11 ಗಂಟೆಗೆ ನಾಮಪತ್ರ ಸಲ್ಲಿಸುವರು. 

ಕಾಂಗ್ರೆಸ್‌ ಅಭ್ಯರ್ಥಿಯ ಘೋಷಣೆ ಶನಿವಾರ ಆಗುವ ಸಾಧ್ಯತೆಗಳಿದ್ದು, ಸೋಮವಾರ ನಾಮಪತ್ರ ಸಲ್ಲಿಕೆ ನಡೆಯುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಪಕ್ಷದ ವತಿಯಿಂದ ಯಾವ ರೀತಿ ಕಾರ್ಯಕ್ರಮ ಸಂಘಟಿತವಾಗಲಿದೆ ಎಂಬುದು ಇನ್ನೂ ಬಹಿರಂಗಗೊಳ್ಳಬೇಕಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next