ಮಂಗಳೂರು: ಕೋವಿಡ್- 19 ಲಾಕ್‌ಡೌನ್‌ನಿಂದಾಗಿ ಮೀನುಗಾರಿಕಾ ಕ್ಷೇತ್ರಕ್ಕೆ ಪೆಟ್ಟು ಬಿದ್ದಿದ್ದು, ಮೀನುಗಾರರನ್ನು ಉತ್ತೇಜಿಸುವ ನಿಟ್ಟಿನಲ್ಲಿ ದ.ಕ. ಜಿಲ್ಲೆಯೊಳಗೆ 110 ಅಶ್ವಶಕ್ತಿ ಸಾಮರ್ಥ್ಯದ ಸಣ್ಣ ಯಾಂತ್ರೀಕೃತ ಮೀನುಗಾರಿಕೆ ನಡೆಸಬಹುದು ಎಂದು ಮೀನುಗಾರಿಕಾ ಇಲಾಖೆಯು ಕೆಲವೊಂದು ಷರತ್ತುಗಳೊಂದಿಗೆ ಬುಧವಾರ ಆದೇಶಿಸಿದೆ.
ಮೀನುಗಾರಿಕಾ ಇಲಾಖೆ ಹೊರಡಿಸಿದ ಆದೇಶದಂತೆ, ತೋಟ ಬೆಂಗ್ರೆ, ಉಳ್ಳಾಲ ಕೋಡಿಯಲ್ಲಿ ನಿಗದಿತ ದಿನ ಬೆಳಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆಯ ಒಳಗೆ ಮೀನುಗಾರಿಕಾ ಬೋಟುಗಳು ಬಂದು ತಲುಪಬೇಕು. ನಿಗದಿತ ಮೀನುಗಾರಿಕಾ ಇಳಿದಾಣಗಳಿಗೆ ಹಂತ ಹಂತವಾಗಿ 5 ಬೋಟುಗಳು ಮೀರದಂತೆ ಹಿಂದಿರುಗಬೇಕು. ಬೇರೆ ರಾಜ್ಯದ ಮೀನುಗಾರಿಕಾ ಬಂದರು/ಇಳಿದಾಣ ಕೇಂದ್ರಗಳಿಗೆ ಪ್ರವೇಶಿಸಬಾರದು. ಜೂನ್ 1ರಿಂದ ಜುಲೈ 31ರ ವರೆಗೆ ಮೀನುಗಾರಿಕಾ ನಿಷೇಧ ಅವಧಿ ಇರುವುದರಿಂದ ಎಲ್ಲ ಯಾಂತ್ರೀಕೃತ ಬೋಟ್‌ಗಳು ಮೇ 31ರೊಳಗೆ ಬಂದರು/ಇಳಿದಾಣಗಳಿಗೆ ಮರಳಬೇಕು ಎಂದು ಆದೇಶ ನೀಡಿದೆ.
ಮೀನುಗಾರಿಕೆ ಬಂದರು/ಇಳಿದಾಣ ಕೇಂದ್ರಗಳಲ್ಲಿ ಮೀನು ಹಿಡುವಳಿಯ ಹರಾಜು ಪ್ರಕ್ರಿಯೆಯನ್ನು ತಡೆಹಿಡಿಯಲಾಗಿದೆ. ಮೀನುಗಳ ಚಿಲ್ಲರೆ ಮಾರಾಟಕ್ಕೆ ಅವಕಾಶವಿಲ್ಲ. ಇಳಿಸಲಾದ ಮೀನುಗಳನ್ನು ಸಾಗಾಟ ವಾಹನಗಳಿಗೆ ತುಂಬಿಸಿ ಬಂದರು/ಇಳಿದಾಣ ಕೇಂದ್ರಗಳಿಂದ ಆದಷ್ಟು ಬೇಗ ಹೊರಸಾಗಿಸಬೇಕು. ಮೀನುಗಾರಿಕಾ ದೋಣಿ ಮಾಲಕರು ಸ್ಥಳೀಯವಾಗಿ ಮೀನು ಮಾರಾಟ ಮಾಡಿ ಬಾಕಿ ಉಳಿದಿರುವ ಮೀನನ್ನು ರಾಜ್ಯದಲ್ಲಿರುವ, ಹೊರ ರಾಜ್ಯದಲ್ಲಿರುವ ಸಂಸ್ಕರಣಾ ಘಟಕಗಳಿಗೆ ಸಾಗಿಸಬಹುದಾಗಿದೆ.
ಪ್ರತೀ ದೋಣಿಯ ಮಾಲಕರು ಎಲ್ಲ ಕಾರ್ಮಿಕರಿಗೆ ಮಾಸ್ಕ್, ಸ್ಯಾನಿಟೈಸರ್, ಸೋಪ್, ಹ್ಯಾಂಡ್‌ವಾಶ್ ವ್ಯವಸ್ಥೆ ಮಾಡಿಕೊಳ್ಳ ಬೇಕು. ಮೀನುಗಾರಿಕಾ ಬಂದರು ಇಳಿದಾಣಗಳಲ್ಲಿ ಸಾಮಾಜಿಕ ಅಂತರ, ಶುಚಿತ್ವ ಕಾಪಾಡಿಕೊಳ್ಳಬೇಕು. ಒಂದು ಬೋಟಿನ ಕಾರ್ಮಿಕರು ಸಮುದ್ರದ ಇನ್ನೊಂದು ಬೋಟಿನ ಕಾರ್ಮಿಕರೊಂದಿಗೆ ಸಂಪರ್ಕ/ವಸ್ತುಗಳ ಬದಲಾವಣೆ ಮಾಡಬಾರದು.
ಮೀನುಗಾರಿಕೆಯಲ್ಲಿ ತೊಡಗಿದಾಗ ಕೆಮ್ಮು, ತಲೆನೋವು, ಕ್ವರ, ಮೈ-ಕೈನೋವು, ಉಸಿರಾಟದ ಸಮಸ್ಯೆ ಇತ್ಯಾದಿ ಕಂಡುಬಂದಲ್ಲಿ ಕೂಡಲೇ ಸ್ಥಳೀಯ ಮೀನುಗಾರಿಕಾ ಅಧಿಕಾರಿಗೆ/ವೈದ್ಯಾಧಿಕಾರಿಗಳಿಗೆ ತಿಳಿಸಿ ಕೂಡಲೇ ಬೋಟುಗಳು ಹಿಂದಿರುಗಬೇಕು. ಇಂತಹ ಸಂದರ್ಭದಲ್ಲಿ ಹಿಡಿದ ಮೀನು ಸಮುದ್ರಕ್ಕೆ ಎಸೆಯಬಾರದು.
ಸಣ್ಣ ಯಾಂತ್ರೀಕೃತ ಮೀನುಗಾರಿಕೆಗೆ ಅವಕಾಶ ನೀಡಬೇಕು ಎನ್ನುವುದು ಮೀನುಗಾರರ ಬೇಡಿಕೆಯಾಗಿತ್ತು. ಈ ಬಗ್ಗೆ ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿ, ಅವಕಾಶ ನೀಡಲಾಗಿದೆ.
– ಹರೀಶ್ ಕುಮಾರ್, ಮೀನುಗಾರಿಕಾ ಉಪ ನಿರ್ದೇಶಕರು, ದ.ಕ.
ದ.ಕ. ಜಿಲ್ಲೆಯಲ್ಲಿ ಸುಮಾರು 150 ಸಣ್ಣ ಯಾಂತ್ರೀಕೃತ ಬೋಟ್‌ಗಳಿಗೆ.ಮೀನು ಗಾರಿಕಾ ಇಲಾಖೆಯ ಈ ನಿರ್ಧಾರದಿಂದ ನೂರಾರು ಮೀನುಗಾರರಿಗೆ ಅನುಕೂಲವಾಗಲಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ನಿರ್ವಹಿಸಬೇಕು.
– ನಿತಿನ್ ಕುಮಾರ್, ಮೀನುಗಾರರ ಮುಖಂಡರು