ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಗುರುವಾರ ನಡೆದ ಮತದಾನವು ಬಹಳ ಶಾಂತಿಯುವಾಗಿದ್ದು, ಸಣ್ಣ-ಪುಟ್ಟ ಕೆಲವು ಗೊಂದಲ ಹೊರತುಪಡಿಸಿದರೆ, ಎಲ್ಲಿಯೂ ಯಾವುದೇ ಅಹಿತಕರ ಘಟನೆ ನಡೆದ ಬಗ್ಗೆ ವರದಿಯಾಗಿಲ್ಲ.
ಭದ್ರತೆಗಾಗಿ 3,300 ಮಂದಿ ಪೊಲೀಸರನ್ನು ಹಾಗೂ ಸುಮಾರು 700 ಮಂದಿ ಕೆಎಸ್‌ಆರ್‌ಪಿ, ಸಿಆರ್‌ಪಿಎಫ್, ಸಿಪಿಎಂಎಫ್, ಸಿಎಆರ್ ಸಿಬಂದಿಯನ್ನು ನಿಯೋಜಿಸಲಾಗಿತ್ತು. 300 ಮಂದಿ ಮೈಕ್ರೋ ವೀಕ್ಷಕರಿದ್ದರು.
ಜಿಲ್ಲಾದ್ಯಂತ ಸೆ. 144 ಅನ್ವಯ ನಿಷೇಧಾಜ್ಞೆ ಹೇರಲಾಗಿದ್ದು, ಇದು ಶುಕ್ರವಾರ ಸಂಜೆ 6 ಗಂಟೆವರೆಗೆ ಜಾರಿಯಲ್ಲಿರುತ್ತದೆ.
ವೆಬ್ ಕಾಸ್ಟಿಂಗ್, ವೀಡಿಯೊ ರೆಕಾರ್ಡಿಂಗ್ ಮತ್ತು ಮೈಕ್ರೋ ವೀಕ್ಷಕರ ನಿಗಾ ಇದ್ದ ಕಾರಣ ಯಾವುದೇ ಸಮಸ್ಯೆಗಳು ಉಂಟಾಗಿಲ್ಲ. 1000ಕ್ಕಿಂತ ಹೆಚ್ಚು ಮತದಾರರಿದ್ದ ಕಡೆಗಳಲ್ಲಿ ಹೆಚ್ಚುವರಿ ಸಿಬಂದಿಯನ್ನು ಬಳಸಲಾಗಿತ್ತು. ಬಂಟ್ವಾಳ ಕ್ಷೇತ್ರದ ಪರ್ಲಿಯಾ ಮತ್ತು ಕಲ್ಲಡ್ಕ ಪೇಟೆಯ ಪಂಚಾಯತ್ ಕಟ್ಟಡದಲ್ಲಿರುವ ಮತಗಟ್ಟೆಯಲ್ಲಿ ನಕಲಿ ಮತದಾನಕ್ಕೆ (ಇನ್ನೊಬ್ಬರ ಹೆಸರಿನಲ್ಲಿ ಮತದಾನ) ಯತ್ನಿಸಿದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೂಡುಬಿದಿರೆ ಕ್ಷೇತ್ರ ವ್ಯಾಪ್ತಿಯ ಮೂಡು ಮಾರ್ನಾಡು ಗ್ರಾಮದ 2 ಮತಗಟ್ಟೆಗಳಲ್ಲಿ ಒಂದೇ ಪಕ್ಷದ ಕಾರ್ಯಕರ್ತರ ಎರಡು ತಂಡಗಳ ಮಧ್ಯೆ ಹೊಡೆದಾಟ ನಡೆದ ಘಟನೆ ಸಂಭವಿಸಿದೆ.