ಆನೇಕಲ್: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟಿರುವ ಆನೇಕಲ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಗೆಲುವಿನ ಸಂಭ್ರಮಾಚರಣೆಗೆ ಮಂಕು ಕವಿದಿದ್ದು, ಚಿತ್ರದುರ್ಗದಲ್ಲಿ ಬಿಜೆಪಿ ಯಿಂದ ಆಯ್ಕೆಯಾದ ಎ.ನಾರಾಯಣ ಸ್ವಾಮಿ ಗೆಲುವಿಗೆ ತಾಲೂಕಿನ ಬಿಜೆಪಿ ಕಾರ್ಯಕರ್ತರು ಕುಣಿದು ಕುಪ್ಪಳಿಸಿದ್ದಾರೆ.
ಉಸಿಯಾದ ನಿರೀಕ್ಷೆ: ಆನೇಕಲ್ ಕ್ಷೇತ್ರದಲ್ಲಿ ಹಾಲಿ ಕಾಂಗ್ರೆಸ್ ಶಾಸಕರಿದ್ದು, ಸ್ಥಳೀಯ ಸಂಸ್ಥೆಗಳಲ್ಲೂ ಕಾಂಗ್ರೆಸ್ ಪಕ್ಷದ ಜನಪ್ರತಿನಿ ಧಿಗಳೇ ಇದ್ದಾರೆ. ಅಲ್ಲದೇ ಡಿ.ಕೆ.ಸುರೇಶ್ ಆನೇಕಲ್ ಕ್ಷೇತ್ರವನ್ನು ಕಾಂಗ್ರೆಸ್‌ಮಯ ಮಾಡಲು ಕಳೆದ ಐದಾರು ವರ್ಷಗಳಿಂದ ಸತತವಾಗಿ ಪ್ರಯತ್ನಿಸಿದ್ದರು. ಮಾತ್ರವಲ್ಲ, ಒಂದಷ್ಟು ಬಿಜೆಪಿ, ಜೆಡಿಎಸ್ ನಾಯಕರನ್ನು ತಮ್ಮತ್ತ ಸೆಳೆಯಲು ಯತ್ನಿಸಿ ಯಶಸ್ವಿಯೂ ಆಗಿದ್ದರು. ಇದೇ ದೃಷ್ಟಿಯಿಂದ ಆನೇಕಲ್ ಕ್ಷೇತ್ರದಲ್ಲಿ ಭಾರೀ ಅಂತರದ ಗೆಲುವಿನ ನಿರೀಕ್ಷೆಯಲ್ಲಿದ್ದರು. ಆದರೆ, ಸಂಸದರಿಗೆ ಈ ನಿರೀಕ್ಷೆ ಹುಸಿಯಾಗಿದೆ.
ಮಾಯವಾದ ಸಂಭ್ರಮ: ಸಂಸದ ಡಿ.ಕೆ.ಸುರೇಶ್ ಹಿಂದೆ ಎರಡು ಬಾರಿ ಸಂಸದರಾದ ಬಳಿಕ ಆನೇಕಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಕಹಳೆ ಮೊಳಗಿಸಿ ಎರಡು ಬಾರಿಯೂ ಕಾಂಗ್ರೆಸ್ ಶಾಸಕರು ಆಯ್ಕೆಯಾಗುವಲ್ಲಿ ಶ್ರಮಿಸಿದ್ದರು. ಪ್ರತಿ ಗ್ರಾಮ ಪಂಚಾಯ್ತಿ ಮಟ್ಟದಲ್ಲೂ ತಮ್ಮದೇ ಆದ ಬೆಂಬಲಿಗರ ಪಡೆ ಕಟ್ಟಿಕೊಂಡು ಅಭಿವೃದ್ಧಿಗೆ ಹೆಚ್ಚು ಸ್ಪಂದಿಸಿದ್ದರೂ ಉಪಯೋಗಕ್ಕೆ ಬಾರದಾಗಿದೆ. ಆನೇಕಲ್ ಕ್ಷೇತ್ರದಲ್ಲಿ ಅವರಿಗೆ ನಿರೀಕ್ಷಿತ ಮಟ್ಟದಲ್ಲಿ ಮತಗಳು ಬಂದಿಲ್ಲ. ಹಾಗಾಗಿ, ಡಿ.ಕೆ.ಸುರೇಶ್ ಕ್ಷೇತ್ರದ ನಾಯಕರ ಮೇಲೆ ಗರಂ ಆಗಿದ್ದಾರೆ ಎಂದು ಕಾಂಗ್ರೆಸ್ ನಾಯಕರೇ ಹೇಳಿಕೊಳ್ಳುತ್ತಿದ್ದಾರೆ. ಇದೇ ಕಾರಣಕ್ಕೆ ತಾಲೂ ಕಿನಲ್ಲಿ ಎಲ್ಲೂ ಸಂಭ್ರಮ ಕಾಣದಾಗಿದೆ.
ಬಿಜೆಪಿಗೆ ಪ್ರಚಾರಕ್ಕಿಂತ ಮತಗಳೇ ಹೆಚ್ಚು: ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಬಿ ಜೆ ಪಿ ಅಭ್ಯರ್ಥಿ ಅಶ್ವಥನಾರಾಯಣ್ ಬಂದು ಪ್ರಚಾರ ಮಾಡಿದ್ದಕ್ಕಿಂತ ಡಿ.ಕೆ.ಸುರೇಶ್ ಪ್ರಚಾರ ಅದ್ದೂರಿಯಾಗಿತ್ತು. ಆದರೂ, ಬಿಜೆಪಿ ಅಭ್ಯರ್ಥಿ ಆನೇಕಲ್ ಕ್ಷೇತ್ರದಲ್ಲಿ ಪಡೆದಿರುವ ಮತಗಳಿಗಿಂತ ಕೇವಲ 1,818 ಮತಗಳು ಮಾತ್ರ ಹೆಚ್ಚುವರಿಯಾಗಿ ಡಿ.ಕೆ.ಸುರೇಶ್ ಪಡೆದಿದ್ದಾರೆ. ಹಾಗಾಗಿ, ಬಿಜೆಪಿ ಪ್ರಚಾರ ಮಾಡಿದ್ದಕ್ಕಿಂತ ಆ ಪಕ್ಷದ ಅಭ್ಯರ್ಥಿ ಪಡೆದಿರುವ ಮತಗಳೇ ಹೆಚ್ಚಾಗಿವೆ.
ಅಂಕಿ ಅಂಶಗಳು: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಸೇರಿದ ಆನೇಕಲ್ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,12,202 ಮತ ಚಲಾವಣೆಯಾಗಿತ್ತು. ಇದರಲ್ಲಿ ಕಾಂಗ್ರೆಸ್‌ನ ಡಿ.ಕೆ.ಸುರೇಶ್ 1,03,106 ಮತ ಪಡೆದರೆ, ಬಿಜೆಪಿಯ ಅಶ್ವತ್ಥನಾರಾಯಣ್ 1,01,288 ಮತ ಪಡೆದಿದ್ದಾರೆ. ಉಳಿದ ಮತಗಳನ್ನು 13 ಅಭ್ಯರ್ಥಿಗಳು 400 ರಿಂದ 2,000 ಸಾವಿರದವರೆಗೂ ಪಡೆದುಕೊಂಡಿ ದ್ದಾರೆ. ಈ ಚುನಾವಣೆಯಲ್ಲಿ 1,736 ಮತಗಳು ನೋಟಾ ಮತಗಳಾಗಿವೆ.
ಚಿತ್ರದುರ್ಗದಲ್ಲಿ ಬಿಜೆಪಿ ಗೆಲುವಿಗೆ ಸಂಭ್ರಮ: ಮಾಜಿ ಸಚಿವ ಆನೇಕಲ್ ಎ.ನಾರಾಯಣ ಸ್ವಾಮಿ ಚಿತ್ರದುರ್ಗದಲ್ಲಿ ಸಂಸದರಾಗಿ ಆಯ್ಕೆಯಾಗುತ್ತಿದ್ದಂತೆ ಆನೇಕಲ್ ಕ್ಷೇತ್ರದಲ್ಲಿ ಸಂಭ್ರಮ ಆಚರಣೆ ನಡೆಸಿದರು. ಕ್ಷೇತ್ರದ ಹಲವು ಕಡೆಗಳಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಖುಷಿ ವ್ಯಕ್ತಪಡಿಸಿದರು.