ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರವಿವಾರ 7 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಇದೇ ವೇಳೆ 17 ಮಂದಿ ಗುಣಮುಖರಾಗಿ ವೆನ್ಲಾಕ್ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಕುವೈಟ್‌ನಿಂದ ಜೂ. 17ರಂದು ಆಗಮಿಸಿ ಕ್ವಾರಂಟೈನ್‌ನಲ್ಲಿದ್ದ 26, 32 ವರ್ಷದ ಮಹಿಳೆಯರು ಹಾಗೂ 59 ವರ್ಷದ ಪುರುಷ, ಈ ಹಿಂದೆ ಕೊರೊನಾ ದೃಢಪಟ್ಟ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ 30 ವರ್ಷದ ಮಹಿಳೆ, 38 ವರ್ಷದ ಪುರುಷ, ತೀವ್ರ ಉಸಿರಾಟ ತೊಂದರೆ(ಸಾರಿ)ಯಿಂದ ಬಳಲುತ್ತಿದ್ದ ಬೆಳ್ತಂಗಡಿಯ 56 ವರ್ಷದ ವ್ಯಕ್ತಿ ಹಾಗೂ ಶೀತ, ಸಣ್ಣ ಪ್ರಮಾಣದ ಜ್ವರ ಹಾಗೂ ಗಂಟಲು ನೋವಿನಿಂದ (ಐಎಲ್‌ಐ) ಬಳಲುತ್ತಿದ್ದ 70 ವರ್ಷದ ಪುತ್ತೂರಿನ ನಿವಾಸಿಯಲ್ಲಿ ರವಿವಾರ ಸೋಂಕು ದೃಢವಾಗಿದೆ. ಅವರನ್ನು ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. 132 ವರದಿ ಸ್ವೀಕೃತ ರವಿವಾರ ಒಟ್ಟು 132 ಮಂದಿಯ ಪರೀಕ್ಷಾ ವರದಿ ಸ್ವೀಕರಿಸಲಾಗಿದೆ. ಈ ಹಿಂದೆ ಕಳುಹಿಸಿರುವ 218 ಮಂದಿಯ ಪರೀಕ್ಷಾ ವರದಿ ಬರಬೇಕಾಗಿದೆ. ರವಿವಾರ ಹೊಸದಾಗಿ 294 ಮಂದಿಯ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
ಇಬ್ಬರ ಸ್ಥಿತಿ ಗಂಭೀರ
ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 70 ವರ್ಷದ ವೃದ್ಧ ಮಧುಮೇಹ ಹಾಗೂ ನ್ಯುಮೋನಿಯಾದಿಂದ ಬಳಲುತ್ತಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅವರಿಗೆ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 52 ವರ್ಷದ ವ್ಯಕ್ತಿ ಮಧುಮೇಹ ಮತ್ತು ಅರ್ಬುದ ರೋಗದಿಂದ ಬಳಲುತ್ತಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.