ಮಂಗಳೂರು/ಉಡುಪಿ: ನಾಲ್ಕು ವರ್ಷಗಳಿಗೊಮ್ಮೆ ಫೆಬ್ರವರಿ ತಿಂಗಳಲ್ಲಿ 29 ದಿನ ಇರುತ್ತದೆ. ಈ ದಿನ ಜನಿಸಿದವರಿಗೆ ನಾಲ್ಕು ವರ್ಷಗಳಿಗೊಮ್ಮೆ ಹುಟ್ಟುಹಬ್ಬ. ದ.ಕ. ಜಿಲ್ಲೆಯಲ್ಲಿ ಫೆ. 29ರಂದು 16ಕ್ಕೂ ಹೆಚ್ಚು ಶಿಶುಗಳ ಜನನವಾಗಿದೆ. ಉಡುಪಿಯಲ್ಲಿ 4 ಮಕ್ಕಳು ಜನಿಸಿದ್ದಾರೆ.
ಅಧಿಕ ಮಾಸದ ಫೆ. 29ರಂದು ಹುಟ್ಟಿದವರನ್ನು ಸಾಮಾನ್ಯವಾಗಿ ಲೀಪ್‌ಲಿಂಗ್ಸ್ ಎಂಬುದಾಗಿ ಕರೆಯಲಾಗುತ್ತದೆ. ಅಮೆರಿಕದ ಬರಹಗಾರ ಟೋನಿ ರಾಬಿನ್ಸ್, ಅಮೆರಿಕನ್ ರ್ಯಾಪರ್ ಜಾ ರೂಲ್ ಮುಂತಾದ ಖ್ಯಾತನಾಮರು ಫೆ. 29ರಂದೇ ಜನಿಸಿದ್ದರು.
ವಿಶೇಷವೆಂದರೆ ಫೆ. 29ರಂದು ದ.ಕ. ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಹುಟ್ಟಿದ ಮಕ್ಕಳ ಪೈಕಿ ಗಂಡು ಮಕ್ಕಳ ಸಂಖ್ಯೆ ಜಾಸ್ತಿ ಇದೆ. ಆದರೆ ಉಡುಪಿಯಲ್ಲಿ ಹೆಣ್ಣು ಮಕ್ಕಳು ಹೆಚ್ಚು. ಕೆಎಂಸಿಯಲ್ಲಿ ಎರಡು ಹೆಣ್ಣು, ಒಂದು ಗಂಡು ಮತ್ತು ಆದರ್ಶ ಆಸ್ಪತ್ರೆಯಲ್ಲಿ ಒಂದು ಹೆಣ್ಣು ಮಗುವಿನ ಜನನವಾಗಿದೆ. ದ.ಕ. ಜಿಲ್ಲೆಯ ಒಟ್ಟು 16 ಮಕ್ಕಳ ಜನನ ಸಂಖ್ಯೆಯ ಪೈಕಿ 12 ಗಂಡು ಮಕ್ಕಳಾದರೆ, 4 ಹೆಣ್ಣು ಮಕ್ಕಳ ಜನನವಾಗಿದೆ.
ಮಂಗಳೂರು ನರ್ಸಿಂಗ್ ಹೋಂನಲ್ಲಿ 1, ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ 5, ಅತ್ತಾವರ ಕೆಎಂಸಿಯಲ್ಲಿ 1, ಲೇಡಿಗೋಶನ್ ಆಸ್ಪತ್ರೆಯಲ್ಲಿ 7, ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ 1, ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ 1 ಶಿಶು ಜನನವಾಗಿದೆ. ಉಳಿದಂತೆ ಕೆಲವು ಆಸ್ಪತ್ರೆಗಳಲ್ಲಿ ಶನಿವಾರ ಯಾವುದೇ ಶಿಶುಗಳ ಜನನವಾಗಿಲ್ಲ. ಕೆಲವು ಆಸ್ಪತ್ರೆಗಳಲ್ಲಿನ ಜನನದ ಬಗ್ಗೆ ಮಾಹಿತಿ ದೊರೆತಿಲ್ಲ.
ಕೆ.ಪಿ. ರಾವ್ ಜನಿಸಿದ್ದು ಫೆ. 29ರಂದು
ಕರ್ನಾಟಕ ಸರಕಾರದ ಅಧಿಕೃತ ಕೀಲಿಮಣೆ ವಿನ್ಯಾಸ ರೂಪಿಸಿದ ಕಿನ್ನಿಕಂಬಳ ಪದ್ಮನಾಭ ರಾವ್ ಅವರು ಜನಿಸಿದ್ದು ಫೆ. 29ರಂದು. ಮಂಗಳೂರಿನ ಕಿನ್ನಿಕಂಬಳದಲ್ಲಿ 1940ರಲ್ಲಿ ಜನಿಸಿದ ಅವರು ಕೆ.ಪಿ. ರಾವ್ ಎಂದೇ ಪ್ರಸಿದ್ಧರು.
ಲೇಡಿಗೋಶನ್ ಆಸ್ಪತ್ರೆಯಲ್ಲಿ ಫೆ. 29ರಂದು 7 ಶಿಶುಗಳ ಜನನವಾಗಿದೆ. ಫೆ. 29ರಂದು ಹಲವು ಖ್ಯಾತ ನಾಮರೂ ಜನಿಸಿರುವ ಇತಿಹಾಸವಿದೆ. ಈ ದಿನಕ್ಕೆ ವಿಶೇಷ ಮಹತ್ವವಿದೆ.
– ಡಾ| ಸವಿತಾ, ವೈದ್ಯಕೀಯ ಅಧೀಕ್ಷಕಿ ಸರಕಾರಿ ಜಿಲ್ಲಾ ಲೇಡಿಗೋಶನ್ ಆಸ್ಪತ್ರೆ ಮಂಗಳೂರು