Advertisement

ದ.ಕ.: ಕೋವಿಡ್ ನಿಂದ ಮೃತಪಟ್ಟವರು 16 ಮಂದಿ!

11:36 PM Sep 04, 2020 | mahesh |

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಕೋವಿಡ್ ಆತಂಕ ಶುರುವಾದ ಬಳಿಕ ಮೃತಪಟ್ಟ 381 ಮಂದಿಯಲ್ಲಿ ಕೋವಿಡ್ ಇರುವುದು ಪತ್ತೆಯಾಗಿದೆ. ಆದರೆ, ಈ ಪೈಕಿ 16 ಮಂದಿ ಮಾತ್ರ ಕೋವಿಡ್ ನಿಂದಲೇ ಮೃತಪಟ್ಟಿರುವುದು ದ.ಕ. ಜಿಲ್ಲಾ ಆರೋಗ್ಯ ಇಲಾಖೆ ನೀಡಿದ ಅಂಕಿಅಂಶದಲ್ಲಿ ಲಭ್ಯವಾಗಿದೆ.

Advertisement

ಉಳಿದಂತೆ ಬೇರೆ ಕಾಯಿಲೆಗಳಿಂದ ಬಳಲುತ್ತಿದ್ದ 276 ಮಂದಿ ಕೋವಿಡ್ ದೃಢಪಟ್ಟು ಬಳಿಕ ಮೃತಪಟ್ಟಿದ್ದಾರೆ. 84 ಮಂದಿ ವಿವಿಧ ಕಾರಣಗಳಿಂದ ಮೃತಪಟ್ಟ ಬಳಿಕ ಕೋವಿಡ್ ಇರುವುದು ಗೊತ್ತಾಗಿದೆ. ಮೂವರು ಆಸ್ಪತ್ರೆಗೆ ಆಗಮಿಸುವಾಗಲೇ ಮೃತಪಟ್ಟಿದ್ದು, ಬಳಿಕ ಅವರಿಗೆ ಕೋವಿಡ್ ಇರುವುದು ಗೊತ್ತಾದರೆ, ಮೃತಪಟ್ಟ ಇನ್ನಿಬ್ಬರಿಗೆ ಕೋವಿಡ್ ಇರಲಿಲ್ಲ.

ಮಂಗಳೂರಿಗರೇ ಅಧಿಕ
ಮೃತಪಟ್ಟವರ ಪೈಕಿ ಮಂಗಳೂರಿಗರೇ ಅಧಿಕ (218) ಸಂಖ್ಯೆಯಲ್ಲಿದ್ದಾರೆ. ಬಂಟ್ವಾಳ (46), ಬೆಳ್ತಂಗಡಿ (11), 23 ಮಂದಿ ಪುತ್ತೂರು (23), ಸುಳ್ಯ (4) ಹಾಗೂ 79 ಮಂದಿ ಹೊರ ಜಿಲ್ಲೆಯವರು ಮೃತಪಟ್ಟಿದ್ದಾರೆ. ಮೃತಪಟ್ಟವರ ಪೈಕಿ 277 ಮಂದಿ ಪುರುಷರು ಹಾಗೂ 104 ಮಂದಿ ಮಹಿಳೆಯರು. ಮಂಗಳೂರಿನ 8,988, ಬಂಟ್ವಾಳದ 1,772, ಬೆಳ್ತಂಗಡಿಯ 856, ಪುತ್ತೂರಿನ 358, ಸುಳ್ಯದ 684, ಹೊರ ಜಿಲ್ಲೆಗಳ 821 ಸೇರಿ ಒಟ್ಟು 13,479 ಮಂದಿಗೆ ಈವರೆಗೆ ಕೊರೊನಾ ದೃಢಪಟ್ಟಿದೆ. ಒಟ್ಟು ಕೋವಿಡ್ ದೃಢಪಟ್ಟವರ ಪೈಕಿ ಕೇವಲ ಶೇ. 2.82 ಸಾವು ಸಂಭವಿಸಿದೆ. ಈ ಮೂಲಕ ಕೋವಿಡ್ ಮಾರಣಾಂತಿಕವಲ್ಲ ಎಂಬುದನ್ನು ಅರಿತುಕೊಳ್ಳಬೇಕು. ಆದರೆ, ಮುನ್ನೆಚ್ಚರಿಕೆಗಳನ್ನು ಜನ ಮರೆಯ ಬಾರದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

60-80 ವರ್ಷದವರೇ ಅಧಿಕ
ಕೊರೊನಾದಿಂದಾಗಿ ಮೃತಪಟ್ಟವರಲ್ಲಿ 60-80 ವರ್ಷದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 60-80 ವರ್ಷದ 188 ಮಂದಿ, 41-60 ವರ್ಷದ 132 ಮಂದಿ, 80 ಮೇಲ್ಪಟ್ಟ 27 ಮಂದಿ, 21-40 ವರ್ಷದ 30 ಮಂದಿ ಹಾಗೂ 0-20 ವರ್ಷದೊಳಗಿನ ನಾಲ್ವರು ಮೃತಪಟ್ಟಿದ್ದಾರೆ. ಇದರಲ್ಲಿ 364 ಮಂದಿ ಬಹು ವಿಧದ ಕಾಯಿಲೆ ಹಾಗೂ 17 ಮಂದಿ ಒಂದೇ ಮಾದರಿಯ ಕಾಯಿಲೆ ಹೊಂದಿದವರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next