ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಕೆಎಸ್‌ಆರ್‌ಟಿಸಿ ಸೇವೆಯನ್ನು ಇನ್ನಷ್ಟು ವಿಸ್ತರಿಸುವ ಕುರಿತಂತೆ ಸಾರ್ವಜನಿಕರಿಂದ ನಿರಂತರ ಬೇಡಿಕೆ ಬರುತ್ತಿದೆ. ಅದರಂತೆ ಇಲ್ಲಿನ 145 ಮಾರ್ಗಗಳಲ್ಲಿ 124 ಸರಕಾರಿ ಬಸ್‌ಗಳಿಗೆ ಪರವಾನಿಗೆ ಒದಗಿಸುವಂತೆ ಜಿಲ್ಲಾ ಸಾರಿಗೆ ಪ್ರಾಧಿಕಾರಕ್ಕೆ ಕೆಎಸ್‌ಆರ್‌ಟಿಸಿ ಅರ್ಜಿ ಸಲ್ಲಿಸಿದೆ. ಈ ಪೈಕಿ 7 ಬಸ್‌ಗಳಿಗೆ ಪರವಾನಿಗೆ ದೊರಕಿದ್ದು, ಉಳಿದ ಪರವಾನಿಗೆಯನ್ನು ಶೀಘ್ರದಲ್ಲಿ ಒದಗಿಸುವಂತೆ ಪ್ರಾಧಿಕಾರವನ್ನು ಮತ್ತೂಮ್ಮೆ ಕೋರಲಾಗುವುದು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಗೋಪಾಲ ಪೂಜಾರಿ ಹೇಳಿದರು.
ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರಿನಲ್ಲಿ ಈಗಾಗಲೇ ಮೂರು ಡಿಪೋಗಳು ಕಾರ್ಯಾಚರಿಸುತ್ತಿದ್ದು, ಇನ್ನೊಂದು ಡಿಪೋ ಆರಂಭಿಸಲು ನಿಗಮ ಉತ್ಸುಕವಾಗಿದೆ.
ಜತೆಗೆ ಸುಬ್ರಹ್ಮಣ್ಯದಲ್ಲೂ ಹೊಸ ಡಿಪೋ ನಿರ್ಮಿಸಲು ಚಿಂತಿಸಲಾಗಿದೆ. ಮಂಗಳೂರಿನಲ್ಲಿ ಸೂಕ್ತ ಸ್ಥಳಾವಕಾಶ ದೊರಕಿದರೆ ಡಿಪೋ ರಚನೆ ಮಾಡಲಾಗುವುದು. ಬಿ.ಸಿ.ರೋಡ್ ಸರಕಾರಿ ಬಸ್ ನಿಲ್ದಾಣವನ್ನು ಒಂದು ತಿಂಗಳಿನ ಒಳಗೆ ಉದ್ಘಾಟಿಸಲಾಗುವುದು ಎಂದರು.
ಮಂಗಳೂರು ನಗರದಲ್ಲಿ 21 ನರ್ಮ್ ಬಸ್‌ಗಳು ಓಡಾಡುತ್ತಿದ್ದು, 14 ನರ್ಮ್ ಬಸ್‌ಗಳ ವಿಚಾರ ನ್ಯಾಯಾಲಯದಲ್ಲಿದೆ. ಬಸ್‌ಗಳು ಸ್ಟೇಟ್‌ಬ್ಯಾಂಕ್ ಪ್ರವೇಶಿಸದಂತೆ ಇರುವ ಡಿಎಂ ನೋಟಿಫಿಕೇಶನ್‌ನಲ್ಲಿ ಕೆಎಸ್‌ಆರ್‌ಟಿಸಿಗೆ ರಿಯಾಯಿತಿ ನೀಡುವಂತೆ ಜಿಲ್ಲಾಡಳಿತದ ಗಮನಕ್ಕೆ ತರಲಾಗುವುದು ಎಂದರು.
ಕುಮಟಾಕ್ಕೆ 4 ಹೊಸ ವೊಲ್ವೋ ಮಂಗಳೂರಿನಿಂದ ಭಟ್ಕಳಕ್ಕೆ ವೋಲ್ವೋ ಸೇವೆ ಸದ್ಯ ಲಭ್ಯವಿದ್ದು, ಹೊಸದಾಗಿ ಕುಮಟಕ್ಕೆ ವೋಲ್ವೋ ಸೇವೆ ಒದಗಿಸಲು ನಿರ್ಧರಿಸಲಾಗಿದೆ. ಈಗಾಗಲೇ 4 ವೋಲ್ವೋ ಬಸ್‌ಗಳನ್ನು ಇದಕ್ಕಾಗಿ ನಿಗದಿಪಡಿಸಲಾಗಿದೆ. ಶೀಘ್ರದಲ್ಲಿ ಇದು ಸಂಚಾರ ನಡೆಸಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಜೆ.ಆರ್. ಲೋಬೋ, ಮೊದಿನ್ ಬಾವಾ, ಮಂಗಳೂರು ತಾ.ಪಂ. ಅಧ್ಯಕ್ಷ ಮೊಹಮ್ಮದ್ ಮೋನು, ಕೆಎಸ್‌ಆರ್‌ಟಿಸಿ ನಿರ್ದೇಶಕರಾದ ಟಿ.ಕೆ. ಸುಧೀರ್, ರಮೇಶ್ ಶೆಟ್ಟಿ, ಮಂಗಳೂರು ವಿಭಾಗೀಯ ನಿಯಂತ್ರಣಾ ಧಿಕಾರಿ ದೀಪಕ್ ಕುಮಾರ್ ಉಪಸ್ಥಿತರಿದ್ದರು.
ಸರಕಾರಿ ಬಸ್‌ಗಳಲ್ಲೂ ವೈ ಫೈ!
ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಇನ್ನಷ್ಟು ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ ವೈಫೈ ಸೌಲಭ್ಯವನ್ನು ಆರಂಭಿಸಲು ನಿರ್ಧರಿಸಲಾಗಿದೆ. ಇದರಂತೆ ಕೆಂಪು ಬಸ್, ಎಕ್ಸ್‌ಪ್ರೆಸ್ ಹಾಗೂ ಹವಾನಿಯಂತ್ರಿತ ಬಸ್‌ಗಳಲ್ಲಿ ವೈಫೈ ಸೌಲಭ್ಯಗಳನ್ನು ಪರಿಚಯಿಸಲಾಗುವುದು. ಕೆಲವೆಡೆ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದೆ. ಸದ್ಯದಲ್ಲೇ ಎಲ್ಲ ಬಸ್‌ಗಳಲ್ಲೂ ಜಾರಿಗೆ ತರಲಾಗುವುದು. ಈ ನಿಟ್ಟಿನಲ್ಲಿ ಟೆಂಡರ್ ಕರೆಯಲಾಗಿದೆ ಎಂದು ಗೋಪಾಲ ಪೂಜಾರಿ ಹೇಳಿದರು.
ಎಲ್ಲ ಟೋಲ್‌ಗಳಲ್ಲಿ ಕೆಎಸ್‌ಆರ್‌ಟಿಸಿ ಎಲೆಕ್ಟ್ರಾನಿಕ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು ಎಂದು ನಿಗಮದ ಎಂಡಿ ಉಮಾಶಂಕರ್ ಹೇಳಿದರು.