ಬಿ.ಸಿ. ರೋಡ್: ದ.ಕ. ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಕೇಂದ್ರ ರಸ್ತೆ ನಿಧಿ ಯೋಜನೆಯಡಿಯಲ್ಲಿ 122.79 ಕೋ. ರೂ. ಮೊತ್ತದ ಅನುದಾನವನ್ನು ಕೇಂದ್ರ ಸರಕಾರ ಈಗಾಗಲೇ ಮಂಜೂರುಗೊಳಿಸಿದೆ. ಈ ಪೈಕಿ ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ 60 ಕೋ. ರೂ.ಗೂ ಮಿಕ್ಕಿ ಮೊತ್ತದ ಅನುದಾನ ದೊರೆತಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.
ಅವರು ಬುಧವಾರ ಬಿ.ಸಿ.ರೋಡ್‌ನಲ್ಲಿ “ನವಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನೆ ಯಾತ್ರೆ’ ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದರು. ರಾಜ್ಯದ ಜನರು ಪರಿವರ್ತನೆ ಬಯಸುತ್ತಿದ್ದು ಬಿಜೆಪಿ ಆಡಳಿತದ ನಿರೀಕ್ಷೆಯಲ್ಲಿದ್ದಾರೆ. ಬಿಜೆಪಿ ಮಾತ್ರ ಸ್ವಜನಪಕ್ಷಪಾತ ರಹಿತ ಆಡಳಿತ ನೀಡಬಲ್ಲುದು ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ತುಮಕೂರಿನಿಂದ ನ. 2ರಂದು ಆರಂಭಗೊಳ್ಳಲಿರುವ “ನವಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನೆ ಯಾತ್ರೆ’ಗೆ ದ.ಕ. ಜಿಲ್ಲೆಯಿಂದ ಸುಮಾರು 2,000 ಮಂದಿ ಕಾರ್ಯಕರ್ತರು ಬೈಕ್ ರ್ಯಾಲಿಯಲ್ಲಿ ಭಾಗವಹಿಸುತ್ತಿದ್ದಾರೆ. ಯಾತ್ರೆ 73 ದಿನ ರಾಜ್ಯಾದ್ಯಂತ ನಡೆಯಲಿದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ರಾಜೇಶ್ ನಾೖಕ್ ಉಳಿಪಾಡಿಗುತ್ತು, ಮಾಜಿ ಶಾಸಕರಾದ ಎ. ರುಕ್ಮಯ್ಯ ಪೂಜಾರಿ, ಕೆ. ಪದ್ಮನಾಭ ಕೊಟ್ಟಾರಿ, ಕ್ಷೇತ್ರಾಧ್ಯಕ್ಷ ಬಿ. ದೇವದಾಸ್ ಶೆಟ್ಟಿ, ಪ್ರಮುಖರಾದ ಸುಲೋಚನಾ ಜಿ.ಕೆ. ಭಟ್, ಜಿ. ಆನಂದ, ಬೃಜೇಶ್ ಚೌಟ, ಉಮಾನಾಥ ಕೋಟ್ಯಾನ್, ಸತ್ಯಜಿತ್ ಸುರತ್ಕಲ್, ಬದ್ರಿನಾಥ ಕಾಮತ್, ಸತೀಶ್ ಕುಂಪಲ, ರಾಮದಾಸ್ ಬಂಟ್ವಾಳ, ದೇವಪ್ಪ ಪೂಜಾರಿ, ಮೋನಪ್ಪ ದೇವಸ್ಯ, ಬಿ. ದಿನೇಶ್ ಭಂಡಾರಿ ಸಹಿತ ಇತರ ಪ್ರಮುಖರು ಉಪಸ್ಥಿತರಿದ್ದರು.