ಲಂಡನ್: ಹಾಲಿ ಚಾಂಪಿ ಯನ್ ನೊವಾಕ್ ಜೊಕೋವಿಕ್ ಮತ್ತು ವಿಶ್ವದ ನಂ.1 ಆಟಗಾರ್ತಿ ಇಗಾ ಸ್ವಿಯಾಟೆಕ್ ವಿಂಬಲ್ಡನ್ ಪಂದ್ಯಾವಳಿಯ ಮೊದಲ ಸುತ್ತನ್ನು ಸುಲಭದಲ್ಲಿ ದಾಟಿದ್ದಾರೆ.
ಸ್ವಿಯಾಟೆಕ್ ಚೀನದ ಜು ಲಿನ್ ಅವರನ್ನು 6-1, 6-3 ಅಂತರದಿಂದ ಪರಾಭವಗೊಳಿಸಿದರು. 22 ವರ್ಷದ ಪೋಲೆಂಡ್ ಆಟಗಾರ್ತಿ ಸ್ವಿಯಾಟೆಕ್ ಕಳೆದ ತಿಂಗಳಷ್ಟೇ ಫ್ರೆಂಚ್ ಓಪನ್ ಪ್ರಶಸ್ತಿಯನ್ನು 3ನೇ ಸಲ ಗೆದ್ದ ಸಂಭ್ರಮದಲ್ಲಿದ್ದರು. ಆದರೆ ಅವರಿನ್ನೂ ವಿಂಬಲ್ಡನ್‌ನಲ್ಲಿ 4ನೇ ಸುತ್ತು ದಾಟಿಲ್ಲ. ಆದರೆ ಇಲ್ಲಿ ಜೂನಿಯರ್ ವಿಭಾಗದ ಪ್ರಶಸ್ತಿ ಜಯಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ದ್ವಿತೀಯ ಸುತ್ತಿನಲ್ಲಿ ಸ್ವಿಯಾಟೆಕ್ ಇಟಲಿಯ ಮಾರ್ಟಿನಾ ಟ್ರೆವಿಸನ್ ಅಥವಾ ಸ್ಪೇನ್‌ನ ಸಾರಾ ಸೊರಿಬೆಸ್ ಟೊರ್ಮೊ ವಿರುದ್ಧ ಆಡಲಿದ್ದಾರೆ.
ವಿಕ್ಟೋರಿಯಾ ಅಜರೆಂಕಾ ಕೂಡ ಚೀನ ಆಟಗಾರ್ತಿಯನ್ನು ಮಣಿಸಿ ಮುನ್ನಡೆದರು. ಯು ಯುವಾನ್ ವಿರುದ್ಧ 6-4, 5-7, 6-4ರಿಂದ ಗೆದ್ದು ಬಂದರು. ಅಮೆರಿಕಸ ಜೆಸ್ಸಿಕಾ ಪೆಗುಲಾ ತಮ್ಮದೇ ದೇಶದ ಲಾರೆನ್ ಡೇವಿಸ್ ವಿರುದ್ಧ ಕಠಿನ ಕ್ಷಣಗಳನ್ನು ಎದುರಿಸಿದರೂ 6-2, 6-7 (8-10), 6-3ರಿಂದ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದರು.
ಫ್ರಾನ್ಸ್‌ನ ಕ್ಯಾರೋಲಿನ್ ಗಾರ್ಸಿಯಾ, ರಷ್ಯಾದ ವೆರೋನಿಕಾ ಕುಡೆರ್ಮ ಟೋವಾ, ಪೋಲೆಂಡ್‌ನ ಮಾಗಾx ಲಿನೆಟ್ ದ್ವಿತೀಯ ಸುತ್ತು ಪ್ರವೇಶಿಸಿದ ಪ್ರಮುಖರು.
ನೊವಾಕ್ ಜೊಕೋವಿಕ್ ಆರ್ಜೆಂಟೀ ನಾದ ಪೆಡ್ರೊ ಕ್ಯಾಶಿನ್ ವಿರುದ್ಧ 6-3, 6-3, 7-6 (7-4) ಅಂತರದಿಂದ ಗೆದ್ದು ಬಂದರು. ಬೆಲ್ಜಿಯಂನ ಡೇವಿಡ್ ಗೋಫಿನ್, ರಷ್ಯಾದ ಆ್ಯಂಡ್ರೆ ರುಬ್ಲೇವ್, ಪೋಲೆಂಡ್‌ನ ಹ್ಯೂಬರ್ಟ್ ಹುರ್ಕಾಜ್ ಮೊದಲ ಸುತ್ತಿನ ಪಂದ್ಯವನ್ನು ಜಯಿಸಿದ್ದಾರೆ.