Advertisement
14 ಗ್ರ್ಯಾನ್‌ಸ್ಲಾಮ್ ವಿಜೇತ ಜೊಕೋವಿಕ್ ಕೆನಡಾದ ಯುವ ಆಟಗಾರ ಡೆನ್ನಿಸ್ ಶಪೊವೊಲೋವ್ ಅವರನ್ನು 4 ಸೆಟ್‌ಗಳ ಕಾದಾಟದ ಬಳಿಕ 6-3, 6-4, 4-6, 6-0 ಅಂತರದಿಂದ ಹಿಮ್ಮೆಟ್ಟಿಸಿದರು. ಜೊಕೋ ಅವರ ಮುಂದಿನ ಎದುರಾಳಿ ರಶ್ಯದ 15ನೇ ಶ್ರೇಯಾಂಕಿತ ಆಟಗಾರ ಡ್ಯಾನಿಲ್ ಮೆಡ್ವೆಡೇವ್. ಅವರು ಬೆಲ್ಜಿಯಂನ ಡೇವಿಡ್ ಗೊಫಿನ್ ವಿರುದ್ಧ 6-2, 7-6 (3), 6-3 ನೇರ ಸೆಟ್‌ಗಳ ಜಯ ಸಾಧಿಸಿದರು. ಮೆಡ್ವೆಡೇವ್ ಗ್ರ್ಯಾನ್‌ಸ್ಲಾಮ್ 4ನೇ ಸುತ್ತು ಪ್ರವೇಶಿಸುತ್ತಿರುವುದು ಇದೇ ಮೊದಲು.
ಜಪಾನಿನ ಇನ್‌ಫಾರ್ಮ್ ಆಟಗಾರ ಕೀ ನಿಶಿಕೊರಿ ಪೋರ್ಚುಗಲ್‌ನ ಜೋ ಸೂಸ ಅವರನ್ನು 7-6 (8-6), 6-1, 6-2 ಅಂತರದಿಂದ ಪರಾಭವಗೊಳಿಸಿದರು. ಇವರಿನ್ನು ಸ್ಪೇನಿನ ಪಾಬ್ಲೊ ಕರೆನೊ ಬುಸ್ಟ ವಿರುದ್ಧ ಆಡಲಿಳಿಯಲಿದ್ದಾರೆ. ಬುಸ್ಟ ಇಟಲಿಯ ಫ್ಯಾಬಿಯೊ ಫೊಗಿನಿ ಅವರನ್ನು 6-2, 6-4, 2-6, 6-4 ಅಂತರದಿಂದ ಹಿಮ್ಮೆಟ್ಟಿಸಿದರು. 21ರ ಹರೆಯದ ಅಲೆಕ್ಸಾಂಡರ್ ಜ್ವೆರೇವ್ ಆಸ್ಟ್ರೇಲಿಯದ ವೈಲ್ಡ್‌ಕಾರ್ಡ್ ಪ್ರವೇಶಿಗ ಅಲೆಕ್ಸ್ ಬೋಲ್ಟ್ ಅವರಿಗೆ 6-3, 6-3, 6-2ರಿಂದ ಬಿಸಿ ಮುಟ್ಟಿಸಿದರು. ಆಸ್ಟ್ರೇಲಿಯನ್ ಓಪನ್‌ನಲ್ಲಿ ಜ್ವೆರೇವ್ 4ನೇ ಸುತ್ತಿಗೆ ಏರಿದ್ದು ಇದೇ ಮೊದಲು. ಜ್ವೆರೇವ್ ಇನ್ನು ಕೆನಡಾದ ಮಿಲೋಸ್ ರಾನಿಕ್ ಸವಾಲನ್ನು ಎದುರಿಸಲಿದ್ದಾರೆ. ರಾನಿಕ್ ಫ್ರಾನ್ಸ್‌ನ ಪಿಯರೆ ರಾಬರ್ಟ್ ಹ್ಯೂಸ್ ಅವರನ್ನು 6-4, 6-4, 7-6 (8-6) ಅಂತರದಿಂದ ಮಣಿಸಿದರು.