Advertisement

ಡಿ.ಜೆ ಹಳ್ಳಿ ಗಲಭೆ ಖಂಡನೀಯ, ದುಷ್ಕರ್ಮಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಸಿಎಂ ಬಿಎಸ್ ವೈ

09:48 AM Aug 12, 2020 | Mithun PG |

ಬೆಂಗಳೂರು: ಡಿ.ಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಿಡಿಗೇಡಿಗಳು ಶಾಸಕ ಅಖಂಡ ಶ್ರೀನಿವಾಸ ಅವರ ಮನೆ ಹಾಗೂ ಪೊಲೀಸ್ ಠಾಣೆ ಮೇಲೆ ದಾಳಿ‌, ಗಲಭೆ ನಡೆಸಿರುವುದು ಖಂಡನೀಯ. ಈಗಾಗಲೇ ದುಷ್ಕರ್ಮಿಗಳ ವಿರುದ್ದ ನಿರ್ದಾಕ್ಷಿಣ್ಯ ಕ್ರಮ‌ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದ್ದು ಸರ್ಕಾರ ದಾಂಧಲೆ ಹತ್ತಿಕ್ಕಲು ಎಲ್ಲ ರೀತಿಯ ಕ್ರಮ ಕೈಗೊಂಡಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

Advertisement

ನಿನ್ನೆ ರಾತ್ರಿ ನಡೆದ ಗಲಭೆಯಲ್ಲಿ ಪತ್ರಕರ್ತರು, ಪೊಲೀಸರು, ಸಾರ್ವಜನಿಕರ ‌ಮೇಲೆ ಹಲ್ಲೆ ಮಾಡಿರುವುದು ಅಕ್ಷಮ್ಯ. ಇಂತಹ ಪ್ರಚೋದನೆ, ಪುಂಡಾಟಗಳನ್ನು ಸರ್ಕಾರ ಕಿಂಚಿತ್ತೂ ಸಹಿಸುವುದಿಲ್ಲ. ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ನಿಶ್ಚಿತ. ಜನರು ಈ ಸಂದರ್ಭದಲ್ಲಿ ಆವೇಶಕ್ಕೆ ಒಳಗಾಗದೆ ಸಂಯಮದಿಂದ ವರ್ತಿಸಬೇಕೆಂದು ಮನವಿ ಮಾಡುತ್ತೇನೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.

ಡಿ.ಜೆ ಹಳ್ಳಿ ಗಲಭೆ ಪ್ರಕರಣ, ಕಾನೂನು ಕೈಗೆತ್ತಿಕೊಳ್ಳುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಕೆಲವರಿಗೆ ತಾವು ಕಾನೂನನ್ನು ಮೀರಿದವರು ಎಂಬ ಭಾವನೆಯಿದೆ . ಇದು ಏಳು ದಶಕಗಳ ಓಲೈಕೆ ರಾಜಕಾರಣದ ಪರಿಣಾಮ ಎಂದು ಸಚಿವ ಸಿಟಿ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಿ.ಜೆ ಹಳ್ಳಿ ಘಟನೆಗೆ ಸಂಬಂಧಿಸಿದಂತೆ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಆರೋಪಿ ನವೀನ್ ನನ್ನು ದಸ್ತಗಿರಿ ಮಾಡಲಾಗಿದೆ. ಜೊತೆಗೆ ಬೆಂಕಿ ಹಚ್ಚಿದ, ಕಲ್ಲು ತೂರಾಟ ನಡೆಸಿದ, ಪೊಲೀಸರ ಮೇಲೆ ಹಲ್ಲೆ ನಡೆಸಿದ ಇತರೆ 110 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ನಗರದಲ್ಲಿ ಶಾಂತಿ ಕಾಪಾಡಲು ಎಲ್ಲರೂ ಪೊಲೀಸರೊಂದಿಗೆ ಸಹಕರಿಸಬೇಕಾಗಿ ವಿನಂತಿ ಎಂದು ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂಥ್ ತಿಳಿಸಿದ್ದಾರೆ.

Advertisement

 

ಡಿ.ಜೆ ಹಳ್ಳಿಯ ಘಟನೆಯಲ್ಲಿ ಪೊಲೀಸ್ ಇಲಾಖೆ ಕೈಗೊಂಡ ಕ್ರಮವನ್ನು ಸ್ವಾಗತಿಸುತ್ತೇನೆ. ದೇಶದ ಕಾನೂನನ್ನು ಎಲ್ಲರೂ ಗೌರವಿಸಬೇಕು. ಗಲಭೆಯಿಂದ ಆದ ಸಾರ್ವಜನಿಕ ನಷ್ಟವನ್ನು ಗಲಭೆಕೋರರಿಂದಲೇ ಜಪ್ತಿ ಮಾಡುವಂತೆ ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ಕಾರ್ಕಳ  ಶಾಸಕ ಸುನೀಲ್ ಕುಮಾರ್  ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next