ಬೆಂಗಳೂರು : ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಗಲಭೆಗೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.
ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಹಾಗೂ ಗಲಭೆ ಪ್ರಕರಣದ ಹಾನಿ ಅಂದಾಜಿಸಿ ನಷ್ಟದ ಹೊಣೆಗಾರಿಕೆಯನ್ನು ನಿಗದಿಪಡಿಸಲು ಕ್ಲೇಮು ಕಮಿಷನರ್ ನೇಮಕ ಮಾಡಬೇಕು ಎಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸೋಮವಾರ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ, ಅರ್ಜಿಗಳ ಸಂಬಂಧ ಹೆಚ್ಚಿನ ವಿಚಾರಣೆ ಅಗತ್ಯ ಕಂಡುಬರುತ್ತಿಲ್ಲ ಎಂದು ತಿಳಿಸಿತಲ್ಲದೇ, ತೀರ್ಪು ಕಾಯ್ದಿರಿಸಿರುವುದಾಗಿ ತಿಳಿಸಿತು.ಇದೇ ವೇಳೆ ಕೇಂದ್ರ ಸರ್ಕಾರದ ಪರ ಸಹಾಯಕ ಸಾಲಿಸಿಟಿರ್ ಜನರಲ್ ಶಾಂತಿಭೂಷಣ್, ಗಲಭೆಗೆ ಸಂಬಂಧಿಸಿದ ವರದಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. ವರದಿ ಪರಿಶೀಲಿಸಿದ ನ್ಯಾಯಪೀಠ, ಸರ್ಕಾರಕ್ಕೆ ಕೆಲ ನಿರ್ದೇಶನಗಳನ್ನು ನೀಡಿ ಎಲ್ಲ ಅರ್ಜಿಗಳನ್ನು ಇತ್ಯರ್ಥಪಡಿಸುವುದಾಗಿ ತಿಳಿಸಿತು.
ಇದನ್ನೂ ಓದಿ : ಬಂಟ್ವಾಳ : ವಿದ್ಯಾರ್ಥಿಗಳಿಗೆ ಢಿಕ್ಕಿ ಹೊಡೆದು ಪ್ರಪಾತಕ್ಕೆ ಉರುಳಿದ ಕಾರು, ಇಬ್ಬರು ಗಂಭೀರ
ಇದಕ್ಕೂ ಮುನ್ನ ಅರ್ಜಿ ಇತ್ಯರ್ಥಪಡಿಸುವ ಕ್ರಮಕ್ಕೆ ಅರ್ಜಿದಾರರ ಪರ ವಕೀಲರು ಆಕ್ಷೇಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಸಾರ್ವಜನಿಕ ಆಸ್ತಿಗೆ ನಷ್ಟ ಉಂಟುಮಾಡಿದ ಕುರಿತು ನಷ್ಟ ಅಂದಾಜಿಸಿ ಅದಕ್ಕೆ ಹೊಣೆ ನಿಗದಿ ಮಾಡಲು ಕ್ಲೇಮ್ ಕಮಿಷನರ್ ನೇಮಕ ಮಾಡಲಾಗಿದೆ.
ಕ್ಲೇಮು ಕಮಿಷನರ್ ಈಗಾಗಲೇ ತಮ್ಮ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅರ್ಜಿಗಳನ್ನು ಮತ್ತಷ್ಟು ಕಾಲ ಉಳಿಸಿಕೊಳ್ಳುವ ಅಗತ್ಯವೇನಿದೆ ಎಂದಿತು. ಅಲ್ಲದೇ, ಕ್ಲೇಮು ಕಮಿಷನರ್ ವರದಿ ಅನುಸಾರ ರಾಜ್ಯ ಸರ್ಕಾರ ಗಲಭೆಯಲ್ಲಿ ನಷ್ಟ ಅನುಭವಿಸಿದವರಿಗೆ ತುರ್ತಾಗಿ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ಮೌಖೀಕವಾಗಿ ಸೂಚಿಸಿತು.