Advertisement
ಗಣೇಶೋತ್ಸವ ಸಂದರ್ಭದಲ್ಲಿ ಸಾರ್ವಜನಿಕವಾಗಿ ಗ್ರಾಮ, ವಾರ್ಡು, ಗಲ್ಲಿ ಗಲ್ಲಿಗಳಲ್ಲಿ ಸಾರ್ವಜನಿಕವಾಗಿ ಗಣೇಶಮೂರ್ತಿಯನ್ನು ಪ್ರತಿಷ್ಠಾಪಿಸಿ ಮೆರವಣಿಗೆ ಮೂಲಕ ವಿಸರ್ಜನೆ ಮಾಡುವ ಸಂಪ್ರದಾಯ ಇರುತ್ತದೆ. ತಮಟೆ ಸದ್ದಿನೊಂದಿಗೆ ನಡೆಯುತ್ತಿದ್ದ ಮೂರ್ತಿ ವಿಸರ್ಜನಾ ಮೆರವಣಿಗೆಯು ಇತ್ತೀಚಿನ ದಿನಗಳಲ್ಲಿ ಡಿಜೆ ಸದ್ದಿನಲ್ಲಿ ನಡೆಯುವಂತಾಗಿತ್ತು.
Related Articles
Advertisement
ದಿಢೀರ್ ಅನುಮತಿ!: ಸೋಮವಾರ ಗಣೇಶ ಪ್ರತಿಷ್ಠಾಪನೆಯ ಮೂರನೇ ದಿನವಾಗಿತ್ತು. ಮೂರನೇ ದಿನ ಬಹುತೇಕ ಸಾರ್ವಜನಿಕ ಗಣೇಶೋತ್ಸವದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗಳನ್ನು ವಿಸರ್ಜನೆಗೆ ಸಜ್ಜುಗೊಳಿಸಿ, ಮೆರವಣಿಗೆಯ ಮೂಲಕ ಬಂದು ವಿಸರ್ಜನೆ ಮಾಡುವ ಪರಿಪಾಠವಿತ್ತು. ನಗರದಲ್ಲಿ ಸಾಮೂಹಿಕವಾಗಿ ಗಣೇಶ ವಿಸರ್ಜನಾ ಮೆರವಣಿಗೆಯನ್ನು ನಡೆಸುವ ಕಾರ್ಯಕ್ರಮ ಇತ್ತು. ಈ ಕಾರ್ಯಕ್ರಮದ ಹಿನ್ನೆಲೆ ಕೋಲಾರದ ಅನೇಕ ಡಿಜೆ ಮಾಲೀಕರು ಪೊಲೀಸ್ ಇಲಾಖೆಯನ್ನು ಭೇಟಿ ಮಾಡಿದ್ದರು. ಈ ಭೇಟಿಯ ನಂತರ ಇಲಾಖೆಯು ಡಿಜೆಗೆ ಅನುಮತಿ ನೀಡಿ ಅಚ್ಚರಿ ಮೂಡಿಸಿತ್ತು. ಕೋಲಾರದ ಸಾಮೂಹಿಕ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ತರಾತುರಿಯಲ್ಲಿ ಒಂದು ಡಿಜೆಯನ್ನು ಬಳಸಲು ಅವಕಾಶ ನೀಡಲಾಗಿತ್ತು. ಆದರೆ, ಈ ಮಾಹಿತಿ ಸಾರ್ವಜನಿಕವಾಗಿ ತಿಳಿಯದ ಕಾರಣದಿಂದ ಬಹುತೇಕ ಗಣೇಶ ಸಮಿತಿಗಳು ಡಿಜೆ ಇಲ್ಲದೆ ತಮಟೆ ಸದ್ದಿನಲ್ಲಿಯೇ ವಿಸರ್ಜನಾ ಮೆರವಣಿಗೆ ಶಾಸ್ತ್ರವನ್ನು ಮುಗಿಸಿದ್ದರು.
ಅನುಮಾನ ಉದ್ಭವ: ಡಿಜೆಗೆ ಅನುಮತಿ ನೀಡುವ ವಿಚಾರದಲ್ಲಿ ಜನಪ್ರತಿನಿಧಿಗಳ ಒತ್ತಡಕ್ಕೂ ಮಣಿಯದ ದಿಟ್ಟವಾಗಿದ್ದ ಪೊಲೀಸ್ ಇಲಾಖೆಯು ಕೇವಲ ಡಿಜೆ ಮಾಲೀಕರು ಮಾಡಿಕೊಂಡ ಮನವಿಗೆ ಕರಗಿ ಬಿಟ್ಟಿತೇ ಎಂಬ ಅನುಮಾನ ಇದೀಗ ಸಾರ್ವಜನಿಕರನ್ನು ಮಾತ್ರವಲ್ಲದೇ, ಸಂಸದ ಹಾಗೂ ಕೆಲವು ಶಾಸಕರನ್ನು ಕಾಡುವಂತಾಗಿದೆ. ಪೊಲೀಸ್ ಇಲಾಖೆ ಡಿಜೆಗೆ ನಿರ್ಬಂಧ ಹೇರಿದ್ದನ್ನು ಬಹುತೇಕ ತಾವು ಅರ್ಥ ಮಾಡಿಕೊಂಡು ಗಣೇಶೋತ್ಸವ ಸಮಿತಿಗೆ ಮನವರಿಕೆ ಮಾಡಿಕೊಟ್ಟಿದ್ದೆವು. ಆದರೆ, ದಿಢೀರ್ ಎಂದು ಪೊಲೀಸ್ ಇಲಾಖೆ ಡಿಜೆಗಳಿಗೆ ಅನುಮತಿ ನೀಡಿದ್ದಲ್ಲದೆ, ಈ ಕುರಿತು ಜನಪ್ರತಿನಿಧಿಗಳ ಗಮನಕ್ಕೆ ತಾರದಿರುವ ಕುರಿತು ಆಕ್ಷೇಪಗಳು ವ್ಯಕ್ತವಾಗುವಂತಾಗಿದೆ. ಇವೆಲ್ಲದರ ನಡುವೆ ಬುಧವಾರ ಗಣೇಶೋತ್ಸವ ಮೆರವಣಿಗೆಯಲ್ಲಿ ಡಿಜೆ ಸದ್ದು ಧಾರಾಳವಾಗಿ ಕೇಳಿ ಬರುವಂತಾಗಿತ್ತು. ಇದಕ್ಕಿಂತಲೂ ಹೆಚ್ಚು ಅಸಮಾಧಾನ ಜನಪ್ರತಿನಿಧಿಗಳ ವಲಯದಲ್ಲೂ ಸದ್ದು ಮಾಡುತ್ತಿತ್ತು. ಒಟ್ಟಾರೆ ಗಣೇಶೋತ್ಸವದ ಡಿಜೆ ಪೂರ್ತಿ ನಿರ್ಬಂಧಕ್ಕೂ ಒಳಗಾಗದೆ, ಅನುಮತಿಯೂ ಸಿಗದಂತಾಗಿ ಎಡಬಿಡಂಗಿ ನಿಲುವಿನಲ್ಲಿ ವಿವಾದಕ್ಕೆ ತುತ್ತಾಗುವಂತಾಯಿತು.
ದಿಶಾ ಸಮಿತಿ ಸಭೆಯಲ್ಲಿ ಡಿಜೆ ಸದ್ದು : ಮಂಗಳವಾರ ಜರುಗಿದ ದಿಶಾ ಸಮಿತಿ ಸಭೆ, ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆಗಿಂತಲೂ ಡಿಜೆ ನಿರ್ಬಂಧ ಮತ್ತು ಅನುಮತಿ ಕುರಿತಂತೆಯೇ ಹೆಚ್ಚು ಚರ್ಚೆ ಮಾಡಿತು. ಕರ್ನಾಟಕದ ಇತರೇ ಜಿಲ್ಲೆಗಳಲ್ಲಿ ಡಿಜೆ ಸದ್ದಿಗೆ ಅನುಮತಿ ಇರುವಾಗ, ಕೋಲಾರ ಜಿಲ್ಲೆಯಲ್ಲಿ ಮಾತ್ರ ಇಂತದ್ದೊಂದು ನಿರ್ಬಂಧ ಸರಿಯೇ ಎಂದು ಜನಪ್ರತಿನಿಧಿಗಳು ಪ್ರಶ್ನಿಸಿದ್ದರು. ಇದೇ ಸಭೆಯಲ್ಲಿ ಶಾಸಕರು ಡಿಜೆ ಅನುಮತಿಗಾಗಿ ತಮ್ಮ ಮೇಲಿದ್ದ ಒತ್ತಡದಿಂದ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದವರ ಬಗ್ಗೆಯೂ ಹೇಳಿಕೊಂಡಿದ್ದರು. ಇದಕ್ಕೆ ಉತ್ತರವಾಗಿ ಪೊಲೀಸ್ ವರಿಷ್ಠಾಧಿಕಾರಿ ನಿಖೀಲ್ ತಾವು ಡಿಜೆಗೆ ಅನುಮತಿ ನೀಡಿದ್ದು, ಗಣೇಶೋತ್ಸವ ವಿಸರ್ಜನಾ ಮೆರವಣಿಗೆ ಸಾಂಗವಾಗಿ ಜರುಗಿದೆ ಎಂದು ಡಿಜೆ ವಿವಾದಕ್ಕೆ ಸ್ಪಷ್ಟನೆ ನೀಡಿದ್ದರು. ಪೊಲೀಸ್ ಇಲಾಖೆ ಡಿಜೆ ಸದ್ದಿಗೆ ಅನುಮತಿ ನೀಡದಿರುವ ಕುರಿತು ಗಣೇ ಶೋತ್ಸವ ಸಮಿತಿಗಳಿಂದ ವಿರೋಧ ವ್ಯಕ್ತವಾದರೂ, ಸಾರ್ವಜನಿಕವಾಗಿ ಸರಿ ಯಾದ ನಿರ್ಧಾರ, ಇನ್ನು ಮುಂದೆ ತಾರತಮ್ಯ ಇಲ್ಲದೆ ಎಲ್ಲಾ ಮೆರವಣಿಗೆ ಗಳಲ್ಲಿಯೂ ಡಿಜೆ ನಿರ್ಬಂಧವಾಗಲಿ ಎಂಬ ಅಭಿಮತ ಕೇಳಿ ಬಂದಿತ್ತು. ಗಣೇಶೋತ್ಸವ ಮೆರವಣಿಗೆಯಲ್ಲಿ ಡಿಜೆ ಸದ್ದಿಗೆ ಪೊಲೀಸ್ ಇಲಾಖೆ ನಿರ್ಬಂಧ ಹೇರಿದ್ದು, ಅನುಮತಿಗಾಗಿ ಗಣೇಶೋತ್ಸವ ಸಮಿತಿಗಳಿಂದ ತಮ್ಮ ಮೇಲೆ ಒತ್ತಡ ಇದ್ದಿದ್ದು ನಿಜ. ಆದರೆ, ಪೊಲೀಸ್ ಇಲಾಖೆಯು ಏಕಾಏಕಿ ಡಿಜೆಗೆ ಅನುಮತಿ ನೀಡಿದ್ದು, ಅನುಮತಿ ನೀಡಿರುವ ಕುರಿತು ತಮ್ಮ ಗಮನಕ್ಕೆ ಯಾವುದೇ ವಿಚಾರ ತಾರದೇ ಇದ್ದಿದ್ದರಿಂದ ಸಾಕಷ್ಟು ಅನುಮಾನ ಮೂಡುವಂತಾಗಿದೆ.
ಇಲಾಖೆಯ ಈ ನಿಲುವಿನಿಂದ ಸಾರ್ವಜನಿಕ ವಲಯದಲ್ಲಿ ಜನಪ್ರತಿನಿಧಿಗಳು ಟೀಕೆಗೆ ಗುರಿಯಾಗಬೇಕಾಯಿತು. ಈ ವಿಚಾರದಲ್ಲಿ ಸರಿ-ತಪ್ಪುಗಳ ಕುರಿತು ಸಾರ್ವಜನಿಕರು ಮತ್ತು ಪೊಲೀಸ್ ಇಲಾಖೆಯೂ ಪರಾಮರ್ಶೆ ಮಾಡಿ ಕೊಳ್ಳಬೇಕಿದೆ. ಸತ್ಯಾಂಶ ಹೊರಬರಬೇಕಿದೆ. ●ಎಂ.ಮಲ್ಲೇಶ್‌ಬಾಬು, ಸಂಸದ, ಕೋಲಾರ
ಗಣೇಶೋತ್ಸವ ಮೆರವಣಿಗೆಯಲ್ಲಿ ಡಿಜೆ ಹಾಕಬೇಡಿ. ಪ್ರತಿಷ್ಠಾಪನೆ ಮಾಡಿದ್ದ ಸ್ಥಳದಲ್ಲೇ ಹಾಕಿಕೊಳ್ಳಿ ಎಂದು ತಿಳಿಸಿದ್ದೆವು. ಗಣೇಶ ಹಬ್ಬದ ಮಾರನೇ ದಿನ ಎಲ್ಲರೂ ಹಾಕಿಕೊಂಡಿದ್ದು, ಸಮಸ್ಯೆ ಬಗೆಹರಿದಿದೆ. ●ಬಿ. ನಿಖಿಲ್, ಪೊಲೀಸ್ ವರಿಷ್ಠಾಧಿಕಾರಿ, ಕೋಲಾರ (ದಿಶಾ ಸಮಿತಿ ಸಭೆಯಲ್ಲಿ ಹೇಳಿಕೆ
– ಕೆ.ಎಸ್.ಗಣೇಶ್