Advertisement
Related Articles
Advertisement
ಬೆಂಗಳೂರು ನೋಡಲು ಬಲು ಚೆಂದ. ಇಲ್ಲಿ ಗಗನಚುಂಬಿ ಕಟ್ಟಡಗಳ ಗತ್ತಿದೆ. ಲಕ್ಷುರಿ ಅಪಾರ್ಟ್‌ಮೆಂಟುಗಳು, ಚಿತ್ತಾಕರ್ಷಕ ಮನೆಗಳ ಚರಿಷ್ಮಾವಿದೆ. ಆದರೆ, ಬೆಂಗಳೂರಿನ ರೂಪಸಿರಿಯನ್ನು ಹೀಗೆಲ್ಲ ಬದಲಿಸಿದ, ಕಟ್ಟಡ ಕಾರ್ಮಿಕರ ಅಲೆಮಾರಿ ಬದುಕಿಗೆ ಚೆಂದದ ರೂಪವೇ ಸಿಕ್ಕಿಲ್ಲ. ಹಾಗೆ ವಲಸೆ ಬರುವವರಲ್ಲಿ ಅನೇಕರು ಉತ್ತರ ಕರ್ನಾಟಕದ ಕೂಲಿ ಕಾರ್ಮಿಕರೇ ಹೆಚ್ಚು. ಇಲ್ಲಿ ಅವರಿಗೊಂದು ವಿಳಾಸವಿಲ್ಲ. ಗುಡಿಸಲೋ, ಕಟ್ಟಲ್ಪಡುತ್ತಿರುವ ಕಟ್ಟಡಗಳಲ್ಲೋ ತಾತ್ಕಾಲಿಕ ನೆಲೆಯಷ್ಟೇ. ಬೆಳಗ್ಗೆ ಆರಾದರೆ, ಮೇಸ್ತ್ರಿ ಬಂದು ಎಬ್ಬಿಸುತ್ತಾನೆ. ಮಕ್ಕಳನ್ನು ಉಪವಾಸ ಉಳಿಸಿಯೋ, ಜತೆಗೇ ಕಟ್ಟಿಕೊಂಡೋ ಹೊರಟರೆ, ಮತ್ತೆ ಗುಡಿಸಲಿಗೆ ಬರುವುದು ಕೆಂಪುದೀಪಗಳು ಉರಿಯುವ ಹೊತ್ತಿಗೆ. ಮುಂದೆ ಅಕ್ಷರ ಕಲಿಯದ ಆ ಮಕ್ಕಳೂ ತಮ್ಮ ಕುಲಕಸುಬಿಗೇ ಜೋತು ಬೀಳುತ್ತವೆ. ಈ ಅಪಾಯವನ್ನು ತಪ್ಪಿಸಲೆಂದೇ, ಅವರನ್ನು ಅಕ್ಷರಸ್ಥರನ್ನಾಗಿಸಲೆಂದೇ “ದಿಯಾ ಘರ್’ ಶಾಲೆ ಹುಟ್ಟಿಕೊಂಡಿದೆ. ಇದು ಸರಸ್ವತಿ ಪದ್ಮನಾಭನ್ ಮತ್ತು ಅವರ ಪತಿ ಶ್ಯಾಮಲ್ ಕುಮಾರ್ ಅವರ ಸೃಷ್ಟಿ.
ಆ ಮೂವರು ಪುಟಾಣಿಗಳೇ ಪ್ರೇರಣೆಅದು ರಾಮಮೂರ್ತಿ ನಗರದಲ್ಲಿ ಕಂಡಂಥ ರಾಯಚೂರಿನಿಂದ ವಲಸೆ ಬಂದಂಥ ಅಲೆಮಾರಿ ಮಕ್ಕಳ ದೃಶ್ಯ. ಅಲ್ಲಿ ಅಪ್ಪ- ಅಮ್ಮ ಇದ್ದಿರಲಿಲ್ಲ. ಶ್ವೇತಾ, ವೀರೇಶ್ ಮತ್ತು ಗಾಯತ್ರಿ ಮೂವರು ಪುಟಾಣಿಗಳು ಮರಳಿನ ರಾಶಿ ಮೇಲೆ ಉರುಳಾಡುತ್ತಿದ್ದರು. ಅಲ್ಲಿ ತಮ್ಮ ಮತ್ತು ತಂಗಿಯನ್ನು ಜತನದಿಂದ ಕಾಯುತ್ತಿದ್ದವಳು ಶ್ವೇತಾ ಎಂಬ ನಾಲ್ಕೂವರೆ ವರುಷದ ಬಾಲೆ. ವೀರೇಶನಿಗೆ 3 ವರುಷ, ಗಾಯತ್ರಿಗೆ ಇನ್ನೂ ಒಂದೇ ವರುಷ. ಮುದ್ದುಮುದ್ದಾಗಿ, ನೋಡಲೂ ಆರೋಗ್ಯವಾಗಿಯೇ ಕಾಣಿಸುತ್ತಿದ್ದ ಈ ಮೂವರು ಪುಟಾಣಿಗಳೆದುರು, ಕಾನ್ವೆಂಟಿಗೆ ಹೊರಟಿದ್ದಂಥ ಸಿರಿವಂತರ ಮಕ್ಕಳು ವ್ಯಾನ್‌ಗಾಗಿ ಕಾಯುತ್ತಿದ್ದರು… ಈ ದೃಶ್ಯವನ್ನು ಕಂಡ ಸರಸ್ವತಿ ದಂಪತಿಯ ಮನ ಕರಗಿತಂತೆ. ತಡಮಾಡಲಿಲ್ಲ. ಆ ಮೂವರು ಮಕ್ಕಳನ್ನು ಇಟ್ಟುಕೊಂಡೇ “ದಿಯಾ ಘರ್’ ಶಾಲೆ ಆರಂಭಿಸಿದರು, ಸರಸ್ವತಿ. 3 ವರ್ಷದಿಂದ ನಡೆಯುತ್ತಿರುವ ಈ ಶಾಲೆಯಲ್ಲಿ ಕಲಿಯುತ್ತಿರುವುದು 60 ಮಕ್ಕಳು. ಅವೆಲ್ಲವೂ 6 ವರುಷದೊಳಗಿನ ಪುಟಾಣಿಗಳು. ಬೀದಿಯಲ್ಲಿದ್ದಾರೆ, 4 ಲಕ್ಷ ಮಕ್ಕಳು!
“ಬೇರೆ ಊರಿನಿಂದ ಬಂದು, ಇಲ್ಲಿ ಕಟ್ಟಡ ಕಟ್ಟುವ ಕೆಲಸದಲ್ಲಿ ನಿರತರಾದವರ ಮಕ್ಕಳ ಸಂಖ್ಯೆಯೇ ಬರೋಬ್ಬರಿ 4 ಲಕ್ಷ ಇದೆ. ಇದರಲ್ಲಿ ರಾಯಚೂರು, ಗುಲ್ಬರ್ಗ, ಬೀದರ್‌ನಿಂದ ವಲಸೆ ಬಂದಂಥ ಕಂದಮ್ಮಗಳೇ ಬಹುಪಾಲು. ಇವರೆಲ್ಲರ ಭವಿಷ್ಯ ಚಿಂತಾಜನಕವಾಗಿದೆ’ ಎನ್ನುವುದು ಸರಸ್ವತಿ ಅವರ ಕಳವಳ. ಈ ಮಕ್ಕಳು ಆಡುವುದನ್ನು ಹಾದಿಬೀದಿಯಲ್ಲಿ ಹೋಗುವ ರಾಜಕಾರಣಿಗಳು, ಧನಿಕರು ನೋಡುತ್ತಿರುತ್ತಾರೆ. ಎಷ್ಟೋ ಸಲ ಆ ಕಟ್ಟಡಗಳ ಗೃಹಪ್ರವೇಶವಿದ್ದಾಗಲೂ, ಅದಕ್ಕಾಗಿ ದುಡಿದ ಕಾರ್ಮಿಕರಿಗೆ, ಅವರ ಮಕ್ಕಳಿಗೆ ಕರೆದು ಊಟ ಹಾಕುವ ಮಾನವೀಯತೆಯನ್ನು ಶ್ರೀಮಂತರು ತೋರುವುದಿಲ್ಲ ಎನ್ನುವ ಬೇಸರವೂ ಇವರದ್ದು. ಈ ಶಾಲೆಯಲ್ಲಿ ಅಕ್ಷರಾಭ್ಯಾಸ ನಡೆಯುತ್ತೆ. ಮಾಂಟೆಸೊÕರಿ ಕಲಿಸುವಂಥ ಆಟಗಳು, ಚಟುವಟಿಕೆಗಳನ್ನೂ ಇಲ್ಲೂ ಹೇಳಿಕೊಡುತ್ತಾರೆ. ಚೆಂದದ ಕತೆಗಳು ಮಕ್ಕಳ ಮನಸ್ಸನ್ನು ಅರಳಿಸುತ್ತವೆ. ಹೊತ್ತು ಹೊತ್ತಿಗೆ ಹಣ್ಣು- ಹಂಪಲು ಕೊಡುತ್ತಾರೆ. ಮಧ್ಯಾಹ್ನದ ವೇಳೆಗೆ ಯುವಲೋಕ ಫೌಂಡೇಶನ್ ಎಂಬ ಎನ್‌ಜಿಒದಿಂದ ಈ ಮಕ್ಕಳಿಗೆ ಬಿಸಿಯೂಟ ಹಾಕುತ್ತಾರೆ. ಸಂಜೆ ಇವರೆಲ್ಲರೂ ಹೊರಡುವಾಗ, ಹಾಲು- ಬಿಸ್ಕತ್ತನ್ನು ಕೊಡುತ್ತಾರೆ.
ಅಪ್ಪ- ಅಮ್ಮ ಕಲ್ಲು- ಮಣ್ಣು ಹೊತ್ತು ಸುಸ್ತಾಗಿ, ಬರುವ ಹೊತ್ತಿಗೆ ಈ ಮಕ್ಕಳು ನಗುತ್ತಾ, “ಅಮ್ಮಾ ಟಿಂಕಲ್ ಟಿಂಕಲ್ ಹೇಳ್ಲಾ ?’ ಅಂತ ಕೇಳುತ್ತಾರೆ. ಹಾಗೆಂದರೇನೆಂದು ಅಪ್ಪ- ಅಮ್ಮನಿಗೆ ಅರ್ಥವಾಗುವುದಿಲ್ಲ. ಆಗ ಆ ಮಕ್ಕಳು, ಮೇಲಿನ ಆಗಸದಲ್ಲಿ ಹೊಳೆಯುವ ನಕ್ಷತ್ರಗಳತ್ತ ಬೆರಳು ತೋರುತ್ತವೆ..! ಆ ಬೆಳಕೇ “ದಿಯಾ ಘರ್’ನ ಸಾರ್ಥಕತೆ. ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ನೀಡಲೆಂದೇ ದಿಯಾ ಘರ್ ಹುಟ್ಟಿಕೊಂಡಿತು. ಇಲ್ಲಿ ನಾಲ್ವರು ಶಿಕ್ಷಕರು, ಪಾಠ ಹೇಳುತ್ತಾರೆ.
– ಸರಸ್ವತಿ ಪದ್ಮನಾಭನ್, “ದಿಯಾ ಘರ್’ ಸ್ಥಾಪಕಿ //www.diyaghar.org – ಕೀರ್ತಿ