Advertisement

ಗೌಳಿ ಎಮ್ಮೆಗಳ ದೀಪಾವಳಿ

09:56 AM Oct 27, 2019 | Lakshmi GovindaRaju |

ಬಲಿಪಾಡ್ಯಮಿ ಸಮೀಪಿಸಿತು ಎಂದಾಗ, ಬೆಳಗಾವಿಯ ಗಲ್ಲಿಗಳಲ್ಲಿ ಗೌಳಿ ಎಮ್ಮೆಗಳ ಗತ್ತು- ಗೈರತ್ತು ಗರಿಗೆದರಿಕೊಳ್ಳುತ್ತೆ. ಕಾಲಿಗೆ ಗೆಜ್ಜೆ, ಕೊಂಬಿಗೆ ಬಣ್ಣ, ಶಿಳ್ಳೆ- ಚಪ್ಪಾಳೆಗಳ ನಡುವೆ ಅದು ಓಡುವುದೇ ಒಂದು ರೋಮಾಂಚಕ ಸಂದರ್ಭ…

Advertisement

ಬೆಳಗಾವಿಯ ಮಿಲ್ಟ್ರಿಕ್ಯಾಂಪ್‌ನ ರೇಸ್‌ಕೋರ್ಸ್‌ ಗ್ರೌಂಡ್‌ನ‌ಲ್ಲಿ ಅಂದು ಕುದುರೆಯ ಖುರಪುಟಗಳ ಸದ್ದಿರಲಿಲ್ಲ. ಯಾರೋ ಹಿಂದಿನಿಂದ ಓಡಿಬಂದಂತೆ ಭಾಸವಾಯಿತು. ಬಲಿಷ್ಠವಾದ, ಬಲು ಉದ್ದದ ಕೊಂಬಿನ ಎಮ್ಮೆ, ಒಬ್ಬ ವ್ಯಕ್ತಿಯನ್ನು ಬೆನ್ನಟ್ಟಿಕೊಂಡು ಬಂತು. ಮೈ ಜುಮ್ಮೆನ್ನುವಂಥ ದೃಶ್ಯ. ಇನ್ನೇನು ಎಮ್ಮೆ ಅವನಿಗೆ ತಿವಿದು, ಬೀಳಿಸಿತು ಎನ್ನುವಷ್ಟರಲ್ಲಿ ಆ ವ್ಯಕ್ತಿ ಥಟಕ್ಕನೆ ನಿಂತುಬಿಟ್ಟ. ತತ್‌ಕ್ಷಣ ಎಮ್ಮೆಯೂ ಓಟ ನಿಲ್ಲಿಸಿಬಿಟ್ಟಿತು.

ಆ ವ್ಯಕ್ತಿಯ ಮೊಗದಲ್ಲಿ ಭಯದ ಬದಲಿಗೆ ಕಿರುನಗೆ! ಅದೇ ಎಮ್ಮೆಯ ಮೈದಡವುತ್ತಾ ಆತ, “ನನ್ನ ದೌಲತ್‌… ಭೇಷ್‌ ಭೇಷ್‌…’ ಎನ್ನುತ್ತಾ ಮುತ್ತಿಕ್ಕುತ್ತಿದ್ದ. ಪ್ರತಿಯಾಗಿ, ಅದೂ ಅವನನ್ನು ಆಸೆ ಮಾಡುತ್ತಿತ್ತು. ಬಾಲ ಅಲುಗಾಡಿಸುತ್ತಾ, ಏನೋ ಹೇಳುತ್ತಿತ್ತು. ಇದೆಲ್ಲವನ್ನೂ ದೂರದಿಂದಲೇ ನೋಡುತ್ತಿದ್ದ ಒಂದಿಷ್ಟು ಮಂದಿ, ಶಿಳ್ಳೆ, ಚಪ್ಪಾಳೆ, ಕೇಕೆ ಹಾಕುತ್ತಾ, ಆ ಎಮ್ಮೆಗೆ ಬಹುಪರಾಕ್‌ ಹೇಳುತ್ತಿದ್ದರು.

ಬಲಿಪಾಡ್ಯಮಿ ಸಮೀಪಿಸಿತು ಎಂದಾಗ, ಬೆಳಗಾವಿಯ ಗಲ್ಲಿಗಳಲ್ಲಿ ಗೌಳಿ ಎಮ್ಮೆಗಳ ಗತ್ತು- ಗೈರತ್ತು ಗರಿಗೆದರಿಕೊಳ್ಳುವುದು ಹೀಗೆ. ಉತ್ತರ ಕರ್ನಾಟಕದಲ್ಲಿ ಅಧಿಕವಿರುವ, “ಗೌಳಿ’ ಸಮುದಾಯದವರು, ಸಾಕುವ ಈ ಎಮ್ಮೆಗಳು, ಮಾಮೂಲಿ ಎಮ್ಮೆಗಳಿಗಿಂತ ಭಿನ್ನ. ಮೂಲತಃ ಮಹಾರಾಷ್ಟ್ರದ ಈ ಮಂದಿಗೆ, ಪಶುಸಂಗೋಪನೆಯು ಪಾರಂಪರಿಕ ಕಸುಬು. ಬಲಿ ಪಾಡ್ಯಮಿಯಂದು, ಎಮ್ಮೆಗಳ ಓಟದ ಸ್ಪರ್ಧೆ, ಒಂದು ರೋಮಾಂಚಕಾರಿ ದೃಶ್ಯ.

ಕಾಲಿಗೆ ಗೆಜ್ಜೆ, ಕೊಂಬಿಗೆ ಬಣ್ಣ: ಬಲಿ ಪಾಡ್ಯಮಿಯ ದಿನ, ಎಮ್ಮೆ- ಕೋಣಗಳಿಗೆ ಸ್ನಾನ ಮಾಡಿಸಿ, ಕೊಂಬುಗಳಿಗೆ ಕೆಂಪು ಬಣ್ಣ ಹಚ್ಚಿ, ನವಿಲು ಗರಿಯನ್ನು ಅಲಂಕರಿಸುತ್ತಾರೆ. ಕಾಲಿಗೆ ಗೆಜ್ಜೆ, ಕೊರಳಿಗೆ ಘಂಟೆ, ಕವಡೆ ಸರ, ಬಣ್ಣದ ಹಾರ, ಕರಕುಶಲ ವಸ್ತುಗಳನ್ನು ಸಿಕ್ಕಿಸಿದಾಗ, ಎಮ್ಮೆಯ ರೂಪಸಿರಿಯ ವೈಭವವೇ ಬೇರೆ. ಸಾಕ್ಷಾತ್‌ ಮಹಾಲಕ್ಷ್ಮಿಯ ಸ್ವರೂಪವೆಂದು ಭಾವಿಸಿ, ಅದಕ್ಕೆ ಆರತಿ ಎತ್ತುತ್ತಾರೆ. ವಾದ್ಯ ಮೇಳದೊಂದಿಗೆ, ಎಮ್ಮೆಗಳ ಮೆರವಣಿಗೆ. ಬಂಧುಗಳ ಮನೆಗೆ ಕರೆದೊಯ್ದು, ಆಶೀರ್ವಾದ ಮಾಡಿಸುತ್ತಾರೆ. ಕುಲದೇವರಾದ ಸಿರಾಜಿ ಅಪ್ಪ, ಮಹಾಲಕ್ಷ್ಮಿಯ ಗುಡಿಗೆ ತೆರಳಿ ದರ್ಶನ ಮಾಡಿಸುವುದು; ಹಣ, ಬೆಳ್ಳಿ, ಬಟ್ಟೆಗಳನ್ನು ಉಡುಗೊರೆಯಾಗಿ ನೀಡುವ ಸಂಪ್ರದಾಯ ಇಲ್ಲಿದೆ.

Advertisement

ಎಮ್ಮೆ ಭಾಷೆ ಬಲ್ಲಿರಾ?: ಇಷ್ಟೆಲ್ಲ ಆದ ನಂತರ, ಎಮ್ಮೆ- ಕೋಣಗಳ ಸ್ಪರ್ಧೆಯ ರಂಗು. ಅಪಾರ ಜನಸ್ತೋಮದ ಮಧ್ಯೆ ಅಲಂಕೃತಗೊಂಡ ಸಾವಿರಕ್ಕೂ ಹೆಚ್ಚು ಎಮ್ಮೆಗಳು. ಅಲ್ಲಿ ಎಮ್ಮೆ ಭಾಷೆಯೂ ಒಂದು ವಿಶಿಷ್ಟ ಆಕರ್ಷಣೆ. ಮಾಲೀಕ “ನಮಸ್ಕರಿಸು’ ಎಂದಾಗ, ಅದು ಮಂಡಿಯೂರುತ್ತೆ. “ಕರೆದರೆ ಓಡಿಬರುವ, ನಿಲ್ಲು ಎಂದರೆ ನಿಲ್ಲುವ ಅದರ ತಾಲೀಮನ್ನು ನೋಡುವುದೇ ಒಂದು ಚೆಂದ. ಮಾಲೀಕ ಬೈಕ್‌ ಓಡಿಸಿದರೆ, ಅದರ ವೇಗಕ್ಕೆ ತಕ್ಕಂತೆ ಓಡುತ್ತೆ. ಬ್ಯಾಂಡ್‌ ಬಾರಿಸಿದಾಗ, ನರ್ತಿಸಲು ಶುರುಮಾಡುತ್ತೆ’ ಎನ್ನುತ್ತಾರೆ, ಲಕ್ಷ್ಮಣ ಗೌಳಿ. ಎಮ್ಮೆಗೂ ಬಹುಮಾನ, ಅದರ ಮಾಲೀಕನಿಗೂ ಬಹುಪರಾಕ್‌… ಒಟ್ಟಿನಲ್ಲಿ ಗೌಳಿ ಎಮ್ಮೆಗಳ ದೀಪಾವಳಿಯೇ ವಿಶಿಷ್ಟ.

ಗೌಳಿ ಎಮ್ಮೆಯ ಗತ್ತು ಗೊತ್ತೇನು?: ಎಮ್ಮೆ ಎಂದರೆ, ದಪ್ಪ ಚರ್ಮ, ಮಂದ, ಇದರ ಬುದ್ಧಿ ಸ್ವಲ್ಪ ನಿಧಾನ… ಇತ್ಯಾದಿ ಸಹಜ ನಂಬಿಕೆಗಳು ನಮಗೆ. ಗೌಳಿ ಎಮ್ಮೆಗಳು ಇದಕ್ಕೆ ಅಪವಾದ. ಮೇಲ್ನೋಟಕ್ಕೆ ದಷ್ಟಪುಷ್ಟ ಮತ್ತು ಒರಟಾಗಿ ಕಂಡರೂ ಅಸಲಿ ಮೃದು, ಸೂಕ್ಷ್ಮ ಸ್ವಭಾವದ್ದು. ತುಂಬಾ ಶಾಣ್ಯಾ ಮತ್ತು ಭಾವನಾತ್ಮಕ ಜೀವಿ. ಬೇಗನೆ ಮನುಷ್ಯಸ್ನೇಹಿಯಾಗುವ ಗುಣ. ಮಾಲೀಕನ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸುತ್ತೆ. ಮಾಲೀಕನ ದನಿಯನ್ನು ಬೇಗನೆ ಪತ್ತೆ ಹಚ್ಚುತ್ತೆ. ವಾಸನೆ ಹಿಡಿದು, ಮಾಲೀಕನತ್ತ ಬರುತ್ತೆ. ಈ ಕಾರಣಕ್ಕೆ, ಗೌಳಿ ಸಮುದಾಯದವರು, ಇವುಗಳನ್ನು ಕೇವಲ ಪ್ರಾಣಿಯೆಂದು ಭಾವಿಸುವುದೇ ಇಲ್ಲ.

ಗಡಿಭಾಗದ ಜಿಲ್ಲೆಯಲ್ಲಿ ಗೌಳಿ ಎಮ್ಮೆಗಳ ಓಟ ಸ್ಪರ್ಧೆ ಒಂದು ವಿಶಿಷ್ಟ ಸಂಭ್ರಮ. ನೆರೆಯ ರಾಜ್ಯದ ಗಡಿ ಗ್ರಾಮಗಳಿಂದಲೂ ಜನರು ಇಲ್ಲಿಗೆ ಬಂದು, ಈ ಓಟವನ್ನು ಆಸ್ವಾದಿಸುತ್ತಾರೆ.
-ಶರದ್‌ ಮುಜಂದಾರ್‌, ಬೆಳಗಾವಿ ನಿವಾಸಿ

* ಸ್ವರೂಪಾನಂದ ಎಂ. ಕೊಟ್ಟೂರು

Advertisement

Udayavani is now on Telegram. Click here to join our channel and stay updated with the latest news.

Next