‘ದೀಪಾವಳಿ ಬಂದ್ರೆ ಏನೋ ಸಡಗರ ಸಂಭ್ರಮ ಖುಷಿಯ ವಾತಾವರಣ ಮನೆಯೆಲ್ಲ ದೀಪಗಳ ತಳಿರುತೋರಣ ಸ್ವರ್ಗವೇ ಧರೆಗೆ ಇಳಿದ ಅನುಭವ. ಮುಂಜಾನೆ ಎದ್ದು ಅಜ್ಜಿ ಕೈಯಲ್ಲಿ ಎಣ್ಣೆ ಮಾಲೀಸು, ಹೊಸಬಟ್ಟೆಗಳ ತೊಡುಗೆ, ಹಿರಿಯರ ಆಶೀರ್ವಾದ, ಅಮ್ಮ ಮಾಡಿದ ಅವಲಕ್ಕಿ ಬಾಯಲ್ಲಿ ಇನ್ನೂ ರುಚಿ ಬಿಟ್ಟಿಲ್ಲ . ನಾನು ಅಣ್ಣ ಸೇರಿ ಬಿಟ್ಟ ಪಟಾಕಿಗಳ ಸದ್ದು ಈಗಲೂ ಕಿವಿಯಲ್ಲಿದೆ. ಪಟಾಕಿ ವಿಷಯದಲ್ಲಿ ಅಣ್ಣ ಸ್ವಲ್ಪ ಹೆದರು ಪುಕ್ಕಲ, ದೂರದಲ್ಲಿ ಪಟಾಕಿ ಇಟ್ಟು ಓಡಿ ಬರುವನು. ಎಣ್ಣೆ ಸ್ನಾನ, ಬಲಿಂದ್ರ ಕರೆಯುದು ಹಾಗೂ ಇದರ ಒಟ್ಟಿಗೆ ಗೋ ಪೂಜೆ ಕೂಡ ಸುಂದರ ಸಮಯಕ್ಕೆ ಏನೋ ಖುಷಿ ಮನಸ್ಸಿಗೆ’ ಒಮ್ಮೆಲೇ ಮಂಚದಿಂದ ಕೆಳಗೆ ಬಿದ್ದೆ .
ಆ ನೆನಪುಗಳು ಕಣ್ಣ ಮುಂದೆ ಬಂದು ಹೋದ ಹಾಗೆ “ರೀ ಏನ್ ಆಯ್ತು” ಮಂಚದಲ್ಲಿ ಮೇಲೆ ಇದ್ದ ನನ್ನವಳ ಸದ್ದು ಕೇಳಿತು “ನನ್ನ ಫೋನ್ ಕೊಡು ಮೊದ್ಲು” ಮೊಬೈಲ್ ಹಿಡಿದು ಅಮ್ಮನಿಗೆ ಫೋನ್ ಮಾಡಿದೆ.
ಆಗ ಸಮಯ ರಾತ್ರಿ 11:30 ಹಿರಿ ಜೀವಗಳು ಮಲಗಿದ್ರು ಅಂತಾ ಅನಿಸಿತು ಎರಡನೆಯ ಕರೆಗೆ ರಿಸೀವ್ ಮಾಡಿದ್ರೂ “ಏನ್ ವಿಷ್ಯ ಮಗ ಇಷ್ಟೂ ಹೊತ್ತಲ್ಲಿ ಫೋನ್ ಮಾಡಿದ್ಯಾ. ಏನ್ ಇಲ್ಲ ಅಮ್ಮ ಮನೆ ನೆನಪಾಯಿತು ನಾಡಿದ್ದು ಹಬ್ಬ ಅಲ್ವಾ ನಿಮ್ಮ ನೆನಪಾಯಿತು ಅಷ್ಟೇ. ಆಯ್ತು ಮಗ ಬಾರೋ ಹಬ್ಬಕ್ಕೆ ಅಣ್ಣಾ ಕೂಡ ಬರ್ತಾನೆ ಮೊಮ್ಮಕ್ಕಳು ನೋಡೋ ಆಸೆ ಆಗ್ತಾ ಇದೆ ನಿನ್ನ ನೋಡದೆ ಸುಮಾರ್ ವರ್ಷ ಆಯ್ತು”. ಅಂತ ಹೇಳಿ ಕಾಲ್ ಕಟ್ ಮಾಡಿದ್ರು. ನನಗೂ ಒಳಒಳಗೆ ನಾಚಿಕೆ ಅವರ ಹಿರಿಸಮಯದಲ್ಲಿ ಮೊಮ್ಮಕ್ಕಳ ಜೊತೆ ಕಾಲ ಕಳೆಯುವ ಸಮಯ ಹೀಗೆ ಮಾಡೋದು ತಪ್ಪು ಎಂದು ಮನಸ್ಸಿನಲ್ಲೇ ಬೇಜಾರ್ ಮೂಡಿತು.
ನಾ ಇರೋದು ಬೆಂಗಳೂರು ಅವರು ಇರೋದು ದೂರದ ಮಂಗಳೂರು. ಬಾಕಿ ದಿನಕ್ಕಿಂತ ಹಬ್ಬದ ಸಮಯದಲ್ಲಿ ಹೋದ್ರೆ ತುಂಬಾ ಉತ್ತಮ ಮಕ್ಕಳಿಗೂ ಮೂರು ನಾಲ್ಕು ದಿನ ರಜೆ ಇದೆ.”ಬೇಗ ಟಿಕೇಟ್ ಬುಕ್ ಮಾಡುವ ಕಣೇ ನಾಳೆ ರೇಟ್ ಜಾಸ್ತಿ ಆಗಬಹುದು ” ಬಸ್ ಟಿಕೆಟ್ ಬುಕ್ ಮಾಡಿ ನಿದ್ದೆಗೆ ಜಾರಿ ಹೋದೆ .
*ಮಂಜು ಭಗತ್