ಹೊಸದಿಲ್ಲಿ : ”ಜಿಎಸ್‌ಟಿ ನಿಮಯಗಳಿಗೆ ಬದಲಾವಣೆ ಮಾಡಲಾಗಿರುವುದರಿಂದ ಸಂಭ್ರಮದ ದೀಪಾವಳಿ ಹಬ್ಬ ಬೇಗನೆ ಬಂದಿದೆ; ಅಂತೆಯೇ ಸಣ್ಣ ವ್ಯಾಪಾರೋದ್ಯಮಿಗಳಿಗೆ ಮತ್ತು ರಫ್ತುದಾರರಿಗೆ ಇದೊಂದು ಹಬ್ಬದ ಕೊಡುಗೆಯಾಗಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಚುನಾವಣೆಯತ್ತ ಮುಖ ಮಾಡಿರುವ ಗುಜರಾತ್‌ಗೆ ಎರಡು ದಿನಗಳ ಭೇಟಿಯಲ್ಲಿರುವ ಪ್ರಧಾನಿ ಮೋದಿ ಅವರು ”ಈ ಹಿಂದೆಯೇ ನಾವು ಕೊಟ್ಟ ಭರವಸೆಯ ಪ್ರಕಾರ ವಾಸ್ತವಾಲೋಕನವನ್ನು ಅನುಸರಿಸಿ ಸರಕು ಮತ್ತು ಸೇವಾ ತೆರಿಗೆ ನಿಯಮಗಳಿಗೆ ಬದಲಾವಣೆ ಮಾಡಿದ್ದು ಅದರಿಂದ ಸಣ್ಣ ವ್ಯಾಪಾರಿಗಳು, ವರ್ತಕರು, ಉದ್ಯಮಿಗಳು ಹಾಗೂ ರಫ್ತುದಾರರಿಗೆ ಪ್ರಯೋಜನವಾಗಿದೆ” ಎಂದು ಹೇಳಿದರು.
“ನಾವು ಈ ಹಿಂದೆಯೇ ಅನುಷ್ಠಾನಗೊಂಡ 3 ತಿಂಗಳಲ್ಲಿ ಜಿಎಸ್‌ಟಿಯ ಸಾಧಕ ಬಾಧಕಗಳನ್ನು ಎಲ್ಲ ಕೋನಗಳಿಂದಲೂ ಅಧ್ಯಯನ ಮಾಡಿ ಅಗತ್ಯವೆಂದು ಕಂಡು ಬರುವ ಬದಲಾವಣೆಗಳನ್ನು ಮಾಡುವೆವೆಂಬ ಭರವಸೆಯನ್ನು ಕೊಟ್ಟಿದ್ದೆವು. ಆ ಪ್ರಕಾರ ಇದೀಗ ಜಿಎಸ್‌ಟಿ ನಿಯಮಗಳಲ್ಲಿ ಬದಲಾವಣೆ ತರಲು ಮಂಡಳಿಯೊಂದಿಗೆ ಸರ್ವಾನುಮತದ ನಿರ್ಧಾರವನ್ನು ಕೈಗೊಂಡಿದ್ದೇವೆ” ಎಂದು ಮೋದಿ ಹೇಳಿದರು.
ಇಂದು ಶನಿವಾರದಿಂದ ಆರಂಭಿಸಿರುವ ಎರಡು ದಿನಗಳ ಗುಜರಾತ್ ಭೇಟಿಯಲ್ಲಿ ಮೋದಿ ಅವರು ಇಂದು ಬೆಳಗ್ಗೆ ಪ್ರಸಿದ್ಧ ದ್ವಾರಕಾಧೀಶ ದೇವಸ್ಥಾನಕ್ಕೆ ತೆರಳಿ ಅಲ್ಲಿ ಪೂಜೆ ಸಲ್ಲಿಸಿದರು.
ಹಲವಾರು ಹೊಸ ಯೋಜನೆಗಳಿಗೆ ಶಿಲಾನ್ಯಾಸ, ಕೆಲವು ಯೋಜನೆಗಳ ಉದ್ಘಾಟನೆಯನ್ನು ನಡೆಸಿಕೊಡಲಿರುವ ಪ್ರಧಾನಿ ಮೋದಿ, ತಾವು ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ತಮ್ಮ ಹುಟ್ಟೂರಾದ ವದ್ನಗರ್‌ಗೆ ಭೇಟಿ ನೀಡಲಿದ್ದಾರೆ.