Advertisement

ವಿಶ್ವದೆಲ್ಲೆಡೆ ದೀಪಾವಳಿ ಸಂಭ್ರಮ

12:12 PM Nov 28, 2020 | Adarsha |

ವಿಶ್ವದೆಲ್ಲೆಡೆ ಬಹಳ ಅದ್ಧೂರಿಯಾಗಿ ಐದು ದಿನಗಳ ಕಾಲ ಆಚರಿಸಲ್ಪಡುವ ಹಬ್ಬಗಳಲ್ಲಿ  ದೀಪಾವಳಿಯೂ ಒಂದು. ಆದರೆ ಕೊರೊನಾ ಸಂಕಷ್ಟದ ಮಧ್ಯೆ ಈ ಬಾರಿ ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಸರಳವಾಗಿ ದೀಪಾವಳಿ ಆಚರಣೆ ನಡೆಯಿತು.

Advertisement

ಅಮೆರಿಕ, ಇಂಗ್ಲೆಂಡ್‌, ಆಸ್ಟ್ರೇಲಿಯಾ, ಚೀನ, ಶ್ರೀಲಂಕಾ ಸೇರಿದಂತೆ ವಿವಿಧ ದೇಶಗಳಲ್ಲಿ ನೆಲೆಸಿರುವ ಹಿಂದೂ, ಜೈನ, ಸಿಕ್ಖ್  ಸಮುದಾಯದವರು ದೀಪಾವಳಿಯನ್ನು ಬಹಳ ಸರಳವಾಗಿ ಆಚರಿಸಿದರು.

ಅಮೆರಿಕ

ಶ್ವೇತಭವನ, ನ್ಯೂಯಾರ್ಕ್‌ ಮತ್ತು ಸ್ಯಾನ್‌ ಆಂಟೋನಿಯೊ ಸಹಿತ ಇನ್ನು ಹಲವು ಭಾಗಗಳಲ್ಲಿ ಪ್ರತಿ ವರ್ಷ ದೀಪಾವಳಿಯನ್ನು ಹೆಚ್ಚು ಸಂಭ್ರಮದಿಂದ ಆಚರಿಸಲಾಗುತ್ತದೆ. ಆದರೆ ಈ ವರ್ಷ ಇದು ಸಾಧ್ಯವಾಗಿಲ್ಲ. ಹೆಚ್ಚು ಜನ ಒಂದೆಡೆ ಸೇರುವುದು ನಿಷೇಧವಾಗಿರುವುದರಿಂದ ಆನ್‌ಲೈನ್‌ ಮೂಲಕ ಸೃಜನಶೀಲ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ದೇವಾಲಯಗಳಲ್ಲಿ ಆನ್‌ಲೈನ್‌ ಮೂಲಕ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಯಿತು. ವಾರಾಂತ್ಯವಾದ್ದರಿಂದ ಹೆಚ್ಚಿನವರು ಮನೆಮಂದಿಯೊಂದಿಗೆ ದೀಪಾವಳಿ ಆಚರಿಸಿದರು. ಜತೆಗೆ ತಮ್ಮ ಸ್ನೇಹಿತರು, ಬಂಧುಗಳಿಗೆ ಆನ್‌ಲೈನ್‌ ಮೂಲಕ ಆಹಾರ, ಊಡುಗೊರೆಗಳನ್ನು ವಿನಿಮಯ ಮಾಡಿಕೊಂಡರು. ವಿವಿಧ ಸಂಘಸಂಸ್ಥೆಗಳು ನಡೆಸುವ ದೊಡ್ಡ ಮಟ್ಟದ ಕಾರ್ಯಕ್ರಮಗಳು ರದ್ದಾಗಿದ್ದವು.

ಟೈಮ್‌ ಸ್ಕ್ವೇರ್‌ನಲ್ಲಿ  ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ 25 ಮಂದಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶ ನೀಡಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅತಿಥಿಗಳಿಂದ ದೀಪ ಬೆಳಗಿಸಲಾಯಿತು. ನ್ಯೂಯಾರ್ಕ್‌ ಸ್ಟೇಟ್‌ನ ಸೆನೆಟರ್‌ ಜಾನ್‌ ಲಿಯು, ನ್ಯೂಯಾರ್ಕ್‌ನ ಭಾರತದ ಕಾನ್ಸುಲ್‌ ಜನರಲ್‌ ರಣಧೀರ್‌ ಜೈಸ್ವಾಲ್‌, ಅಮೆರಿಕ ಭಾರತೀಯರ ಸಂಘದ ಅಧ್ಯಕ್ಷ ಹರೀಶ್‌ ಠಕ್ಕರ್‌  ಮತ್ತಿತರರು ಪಾಲ್ಗೊಂಡಿದ್ದರು.

Advertisement

ಇದನ್ನೂ ಓದಿ:ಗ್ರಾಮೀಣ ಜನರಿಗೆ ಪಿಕಾರ್ಡ್‌ ಬ್ಯಾಂಕ್‌ನಿಂದ ಸಾಲ

ಸ್ಯಾನ್‌ ಆಂಟೋನಿಯಾದಲ್ಲಿ  ಯೋಗ, ಅಡುಗೆ ತರಬೇತಿ, ದಿಯಾ ಲೈಟಿಂಗ್‌, ನೃತ್ಯ ಕಾರ್ಯಕ್ರಮ ಆಯೋಜಿಸಿದ್ದು ಆನ್‌ಲೈನ್‌ ಮೂಲಕ ನೇರಪ್ರಸಾರ ಮಾಡಲಾಯಿತು.

ನ್ಯೂಜೆರ್ಸಿ, ಇಲಿನಾಯ್ಸ, ಕ್ಯಾಲಿಫೋರ್ನಿಯಾದಲ್ಲಿರುವ ಕನ್ನಡಪರ ಸಂಘಟನೆಗಳು ಆನ್‌ಲೈನ್‌ ಮೂಲಕ ವಿವಿಧ ಮನೋರಂಜನ ಕಾರ್ಯಕ್ರಮಗಳನ್ನು ಆಯೋಜಿಸಿದ್ದವು.

ಸಿಂಗಾಪುರ

ದೀಪಾವಳಿ ಸಂಭ್ರಮಾಚರಣೆಯು ಅಕ್ಟೋಬರ್‌ 3ರಿಂದ ಆರಂಭಗೊಂಡಿದ್ದು ಡಿಸೆಂಬರ್‌ 6ವರೆಗೆ ನಡೆಯಲಿದೆ. ಇಲ್ಲಿನ ಲಿಟ್ಲ ಇಂಡಿಯಾದಲ್ಲಿ ನ. 14ರಿಂದ ವಿವಿಧ ಕಾರ್ಯಕ್ರಮಗಳು ಆರಂಭಗೊಂಡಿವೆ.

2020ರ ದೀಪಾವಳಿಯ ಲೈಟ್‌ ಅಪ್‌ ಮುಖ್ಯ ಕಮಾನು ಸೆರಂಗೂನ್‌ ಮತ್ತು ಸುಂಗೇ ರಸ್ತೆಯ ಜಂಕ್ಷನ್‌ನಲ್ಲಿ ಅಳವಡಿಸಲಾಗಿದೆ. ಇದರ ವೀಕ್ಷಣೆಗೆ ಬರುವವರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹಾಗೂ ಹೆಚ್ಚು ಜನ ಸೇರದಂತೆ ಮಾಡಲು ಸುರಕ್ಷಿತ ಕ್ರಮಕೈಗೊಳ್ಳಲಾಗಿದೆ.

ಹಿಂದೂ ರಸ್ತೆಯಲ್ಲಿ  ರಂಗೋಲಿ ಚಿತ್ರ ಕಲಾವಿದ ವಿಜಯ ಮೋಹನ್‌ ನೇತೃತ್ವದಲ್ಲಿ  ಬಣ್ಣಬಣ್ಣದ ರಂಗೋಲಿಗಳನ್ನು ಬಿಡಿಸಲಾಗಿತ್ತು. ಉಳಿದ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆನ್‌ಲೈನ್‌ ಮೂಲಕವೇ ನಡೆಸಲಾಯಿತು. ನ. 7ರಂದು ಸಂಜೆ ದೀಪಾವಳಿ ಕಥೆಯನ್ನು ಸಾರುವ ನೃತ್ಯರೂಪಕವನ್ನು ಇಂಗ್ಲಿಷ್‌ನಲ್ಲಿ ಲಿಟಲ್‌ ಇಂಡಿಯಾದಲ್ಲಿ  ವರ್ಚುವಲ್‌ ಪ್ರದರ್ಶನ ಮಾಡಲಾಯಿತು.

ನ. 13ರಂದು ಕೌಂಟೌxನ್‌ ಸಂಗೀತ ಕಛೇರಿ, ನ. 14ರಂದು ಮೇಘಾ ದೀಪಾವಳಿ ಆನ್‌ಲೈನ್‌ ಶೋ ಪ್ರದರ್ಶನ ನಡೆಯಿತು. ಇದರಲ್ಲಿ ಹಲವು ತಂಡಗಳು ಪಾಲ್ಗೊಂಡು ಸಂಗೀತ, ನೃತ್ಯ, ಪ್ರಹಸನವನ್ನು ಪ್ರದರ್ಶಿಸಿದರು. ಇದನ್ನು ಯುಎಸ್‌ಎ, ಯುಕೆ, ಅಸ್ಟ್ರೇಲಿಯಾ, ಫ್ರಾನ್ಸ್‌, ಟೋಕಿಯೋ, ಮನಿಲಾ, ಮಲೇಷ್ಯಾ, ಯುಎಸಿ ಮತ್ತು ಇಂಡಿಯಾದ ಡಿಜಿಟಲ್‌ ಚಾನೆಲ್‌ ಮೂಲಕ ಪ್ರಸಾರ ಮಾಡಲಾಯಿತು.

ಆಸ್ಟ್ರೇಲಿಯಾ

ಕೋವಿಡ್‌ ಕಾರಣದಿಂದಾಗಿ ಆಸ್ಟ್ರೇಲಿಯಾದಲ್ಲಿ  ದೀಪಾವಳಿ ಆಚರಣೆಗೆ ಹೆಚ್ಚು ಕಠಿನ ಕ್ರಮಗಳನ್ನು ಜಾರಿಗೊಳಿಸಲಾಗಿತ್ತು. ಮುಖ್ಯವಾಗಿ ಮನೆಯಲ್ಲಿ  ಹಬ್ಬಗಳ ಆಚರಣೆಗಾಗಿ ದಿನದಲ್ಲಿ  ಯಾರ ಮನೆಗೂ 20ಕ್ಕಿಂತ ಹೆಚ್ಚಿನ ಜನರು ಭೇಟಿ ನೀಡುವಂತಿಲ್ಲ ಎಂಬ ನಿಯಮ ಜಾರಿಗೆ ತರಲಾಗಿತ್ತು.

ಫೇಡರೇಶನ್‌ ಸ್ಕ್ವೇರ್‌ನಲ್ಲಿ ಪ್ರತಿ ವರ್ಷ ನಡೆಯುತ್ತಿದ್ದ ದೀಪಾವಳಿ ಕಾರ್ಯಕ್ರಮಗಳನ್ನು ಈ ಬಾರಿ ಆನ್‌ಲೈನ್‌ ಮೂಲಕ ಪ್ರದರ್ಶಿಸಲಾಯಿತು. ದೀಪಾವಳಿಯ ಅಂಗವಾಗಿ ಸಿಡ್ನಿ ಒಪೇರಾ ಹೌಸ್‌ ಅನ್ನು ಚಿನ್ನದ ಬಣ್ಣದ ಬೆಳಕಿನಿಂದ ಅಲಂಕರಿಸಲಾಗಿತ್ತು.

ಕೆನಡಾ

ಹೆಚ್ಚಿನವರ  ತಮ್ಮ  ಮನೆಗಳಲ್ಲೇ ಉಳಿದು ದೀಪಾವಳಿಯನ್ನು  ಆಚರಿಸಿದರು.  ವಿವಿಧ ಸಂಘಟನೆಗಳು ವರ್ಚುವಲ್‌ ಮೂಲಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದವು. ಸಾರ್ವಜನಿಕ ಸ್ಥಳಗಳಲ್ಲಿ  ಜನ ಸೇರುವುದು, ದೇವಸ್ಥಾನಗಳಲ್ಲಿ ಸೇವೆ ಸಲ್ಲಿಸುವುದನ್ನು ನಿಷೇಧಿಸಲಾಗಿತ್ತು.

ಯುಕೆ

ಬಹುತೇಕ ಭಾಗಗಳಲ್ಲಿ ಜನರು ಮನೆಯಲ್ಲೇ ಉಳಿದು ದೀಪಾವಳಿ ಆಚರಿಸಿದರು. ಆನ್‌ಲೈನ್‌ ಮೂಲಕ ವಿವಿಧ ಕಾರ್ಯಕ್ರಮಗಳಲ್ಲಿ  ಪಾಲ್ಗೊಂಡರು. ಬಹುತೇಕ ಎಲ್ಲ ದೊಡ್ಡ ಮಟ್ಟದ ಕಾರ್ಯಕ್ರಮಗಳು ರದ್ದುಗೊಂಡಿದ್ದವು.

ಶ್ರೀಲಂಕಾ

ದೀಪಾವಳಿಯನ್ನು ಸರಳವಾಗಿ ಆಚರಿಸಲಾಯಿತು. ಜನರು ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ದೇವಾಲಯಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ನೇಪಾಲ

ರಾಜಧಾನಿ ಕಾಠ್ಮಂಡುವಿನ ಅನೇಕ ಮನೆಗಳನ್ನು ದೀಪಾವಳಿಯ ಅಂಗವಾಗಿ ಬಣ್ಣದ ದೀಪಗಳಿಂದ ಸಿಂಗರಿಸಲಾಗಿತ್ತು.

ಮಲೇಷ್ಯಾ

ಇಲ್ಲಿನ ಕೌಲಾಲಂಪುರದ ಹಿಂದೂ ದೇವಾಲಯದಲ್ಲಿ ಅರ್ಚಕರು  ಮಾಸ್ಕ್ ಧರಿಸಿದ್ದರು ಮತ್ತು ದೇವಾಲಯಕ್ಕೆ ಬರುವ ಎಲ್ಲರಿಗೂ ಥರ್ಮಲ್‌ ಸ್ಕ್ರೀನಿಂಗ್‌ ನಡೆಸಲಾಯಿತು.

ಯುಎಇ

ಇಲ್ಲಿ ಫೆಸ್ಟಿವಲ್‌ ಆಫ್ ಲೈಟ್ಸ್‌ ಎಂದೇ ಕರೆಯಲ್ಪಡುವ ದೀಪಾವಳಿ ಆಚರಣೆ ಈ ಬಾರಿ ಕೊರೊನಾ ಕಾರಣದಿಂದ ಮುಂಜಾಗ್ರತ ಕ್ರಮವಾಗಿ ಯುಎಇಯಲ್ಲಿ ಹೆಚ್ಚಿನ ಸಿದ್ಧತೆ ಮಾಡಲಾಯಿತು. ಅಲ್‌ಸೀಫ್ನಲ್ಲಿ ಓಪನ್‌ ಏರ್‌ ಸ್ಟೇಜ್‌ನಲ್ಲಿ ಬಾಲಿವುಡ್‌ಗೆ ಸಂಬಂಧಿಸಿ ನೇರ ಪ್ರದರ್ಶನಗಳ ಸರಣಿ ಉತ್ಸವ ನಡೆಯಿತು. ಅಲ್ಲದೇ ಸುಮಾರು 200ಕ್ಕೂ ಹೆಚ್ಚು ರೆಸ್ಟೋರೆಂಟ್‌ಗಳಲ್ಲಿ ಭಾರತೀಯ ಭಕ್ಷ್ಯಗಳನ್ನು ಕನಿಷ್ಠ ದರದಲ್ಲಿ ಪೂರೈಸಲಾಯಿತು.

ದುಬೈ ಫೆಸ್ಟಿವಲ್‌ ಸಿಟಿ ಮಾಲ್‌ನ ನೀರು, ಬೆಂಕಿ ಮತ್ತು ಲೇಸರ್‌ ಪ್ರದರ್ಶನ ನ. 14ರಂದು ನಡೆಯಿತು.ಗ್ಲೋಬಲ್‌ ವಿಲೇಜ್‌ನಲ್ಲಿರುವ ಇಂಡಿಯಾ ಪೆವಿಲಿಯನ್‌ನಲ್ಲಿ ಭಾರತೀಯ ಸಂಸ್ಕೃತಿ, ಸಂಪ್ರದಾಯ, ಆಹಾರ, ದೀಪಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ದಿ ಪಾಯಿಂಟ್‌ ಆನ್‌ ದಿ ಪಾಮ್‌ ಜುಮೇರಾದಲ್ಲಿ ನೃತ್ಯ ಕಾರಂಜಿ, ಪಟಾಕಿ ಪ್ರದರ್ಶನ ನಡೆಯಿತು.

ಐರ್ಲೆಂಡ್‌

ದೀಪಾವಳಿ ಆಚರಣೆ ಸರಳವಾಗಿ ನಡೆಯಿತು. ರಾಯಭಾರಿ ಕಚೇರಿಯಲ್ಲಿ   ಧನ್ವಂತರಿ ಪೂಜೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕೊರೊನಾ ಆತಂಕದ ಹಿನ್ನೆಲೆಯಲ್ಲಿ  ಕಾರ್ಯಕ್ರಮದ ವರ್ಚುವಲ್‌ ಪ್ರದರ್ಶನ ಮಾಡಲಾಯಿತು. ಹೆಚ್ಚಿನ ಜನರಿಗೆ ಭಾಗವಹಿಸುವ ಅವಕಾಶವಿರಲಿಲ್ಲ.

 

Advertisement

Udayavani is now on Telegram. Click here to join our channel and stay updated with the latest news.

Next