ಬಳ್ಳಾರಿ: ಮಾಜಿ ಸಚಿವ ಜನಾರ್ಧನರೆಡ್ಡಿ ಅವರೊಂದಿಗೆ ಸೇರಿ ಪ್ರತ್ಯೇಕ ಪಕ್ಷ ಮಾಡುತ್ತೇವೆ ಎಂದು ಅಫ್ರಚಾರ ಮಾಡುತ್ತಿರುವ ಅನಧಿಕೃತ ಯೂಟ್ಯೂಬ್ ಚಾನಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಮಾಜಿ ಸಚಿವ ಮುಂಡ್ಲೂರು ದಿವಾಕರ ಬಾಬು ಸ್ಪಷ್ಟಪಡಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಮಾಜಿ ಸಚಿವ ಜನಾರ್ಧನರೆಡ್ಡಿ ವಿರುದ್ಧ ಮೊದಲಿನಿಂದಲೂ ಹೋರಾಟ ಮಾಡುತ್ತಿದ್ದೇನೆ. ಅವರು ಮಾಡುತ್ತಿರುವ ತಪ್ಪುಗಳನ್ನು ಖಂಡಿಸಿದ್ದೇನೆ. ಅಂತದ್ದರಲ್ಲಿ ರೆಡ್ಡಿ ಸಹೋದರರೊಂದಿಗೆ ಸೇರಿ ನಾನು ಪ್ರತ್ಯೇಕ ಪಕ್ಷ ರಚಿಸುವುದಾಗಿ ಅನಧಿಕೃತ ಯೂಟ್ಯೂಬ್ ಚಾನಲ್ ನಲ್ಲಿ ಅಪಪ್ರಚಾರ ಮಾಡುತ್ತಿದೆ. ಹಾಗಾಗಿ ಅನಧಿಕೃತ ಎಲ್ಲ ಯೂಟ್ಯೂಬ್ ಚಾನಲ್ ಗಳ ವಿರುದ್ಧ ಕ್ರಮಕೈಗೊಳ್ಳುವಂತೆ ದೂರು ನೀಡಲಾಗುವುದು. ಜತೆಗೆ ಆ ಚಾನಲ್ ವಿರುದ್ಧ ಮಾನನಷ್ಟ ಮೊಕದ್ಧಮೆ ಹೂಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ;ಮತದಾರರ ಪಟ್ಟಿಯಿಂದ ಅಲ್ಪಸಂಖ್ಯಾತ ಮತದಾರರನ್ನು ಕೈಬಿಟ್ಟಿಲ್ಲ: ಸಿಎಂ ಬೊಮ್ಮಾಯಿ
Related Articles
ರೆಡ್ಡಿ ಸಹೋದರರೊಂದಿಗೆ ನಾನು ಎಂದೂ ಮಾತನಾಡಿಲ್ಲ. ಅವರೂ ನನ್ನ ಹತ್ರ ಬರಲ್ಲ. ದೂರವಾಣಿಯಲ್ಲಂತೂ ಮಾತನಾಡಲ್ಲ. ಈ ಕುರಿತು ದಾಖಲೆಗಳಿದ್ದರೆ ಕೊಡಬೇಕು ಎಂದು ಅವರು ತಿಳಿಸಿದರು.
ನನ್ನ ಬಗ್ಗೆ ಅಪಪ್ರಚಾರ ಯಾರು ಮಾಡಿದ್ದಾರೋ ಗೊತ್ತಿಲ್ಲ. ಅಂತಹವರು ಕಾಂಗ್ರೆಸ್ ಪಕ್ಷದ ಒಳಗೂ-ಹೊರಗೂ ಇರಬಹುದು. ಸುದ್ದಿಯಲ್ಲಿ ಬಿಜೆಪಿಯವರೂ ಇರುವುದರಿಂದ ಅವರೂ ಇರಬಹುದು. ಎಲ್ಲವೂ ನಿಧಾನವಾಗಿ ಹೊರಬೀಳಲಿದೆ ಎಂದರು.
ಜೋಡೋ ಯಾತ್ರೆಯಿಂದ ಸಕ್ರಿಯ ರಾಜಕೀಯಕ್ಕೆ: ಈ ಹಿಂದೆ ರಾಜಕೀಯ ಎಂಬುದು ಸಮಾಜ ಸೇವೆಯಾಗಿತ್ತು. ಈಗ ಅಂತಹ ರಾಜಕೀಯವಿಲ್ಲ. ಸದ್ಯ ದೇಶದಲ್ಲಿ ರಾಜಕೀಯ ಪರಿಸ್ಥಿತಿ ಕೆಟ್ಟಿದೆ. ಅದನ್ನು ಸರಿಪಡಿಸುವ ಸಲುವಾಗಿ ಎಐಸಿಸಿ ಮುಖಂಡ ರಾಹುಲ್ ಗಾಂಧಿಯವರು ದೇಶಾದ್ಯಂತ ಭಾರತ್ ಜೋಡೋ ಪಾದಯಾತ್ರೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕೆಲ ವರ್ಷಗಳಿಂದ ಸೈಲೆಂಟ್ ಆಗಿದ್ದ ನಾನು ಪುನಃ ರಾಜಕೀಯದಲ್ಲಿ ಸಕ್ರಿಯವಾಗಿದ್ದೇನೆ ಎಂದು ತಿಳಿಸಿದರು.
ಮುಂಬರುವ 2023ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಳ್ಳಾರಿ ನಗರ ಕ್ಷೇತ್ರದ ಆಕಾಂಕ್ಷಿಯಾಗಿದ್ದು, ಟಿಕೇಟ್ ಗಾಗಿ ಅರ್ಜಿ ಸಲ್ಲಿಸಿದ್ದೇನೆ. ನಾನು ಸೇರಿ 24 ಜನರು ಅರ್ಜಿ ಸಲ್ಲಿಸಿದ್ದಾರೆ. ನನಗೆ ಟಿಕೇಟ್ ಸಿಕ್ಕರೆ ನನ್ನ ಅಳಿಯ (ನಾರಾ ಭರತ್ ರೆಡ್ಡಿ) ಸ್ಪರ್ಧಿಸಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.