ಶಹಾಬಾದ: ದೇಶಕ್ಕೆ ಅನ್ನ ನೀಡುವ ರೈತರ ಪರಿಸ್ಥಿತಿ ಶೋಚನಿಯವಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಕಾಯ್ದೆಗಳಿಂದಾಗಿ
ರೈತರು ನಿರ್ಗತಿಕರಾಗುತ್ತಿದ್ದಾರೆ ಎಂದು ಆರ್‌ಕೆಎಸ್ ರಾಜ್ಯ ಕಾರ್ಯದರ್ಶಿ ಎಚ್.ವಿ.ದಿವಾಕರ್ ಆತಂಕ ವ್ಯಕ್ತಪಡಿಸಿದರು.
ನಗರದ ಎಐಡಿಎಸ್‌ಒ, ಎಐಡಿವೈಒ, ಎಐಎಂಎಂಎಸ್ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ನಗರದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ನೇತಾಜಿ ಸುಭಾಶ್ಚಂದ್ರ ಬೋಸ್ ರ 124ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜ್ಯ-ಕೇಂದ್ರ ಸರ್ಕಾರಗಳ ನಿರ್ಧಾರಕ್ಕೆ ಧಿಕ್ಕಾರವಿರಲಿ. ಟಾಟಾ-ಬಿರ್ಲಾ-ಅಂಬಾನಿ-ಆದಾನಿಗಳ ಪಾದ ಸೇವೆಗೆ ಟೊಂಕಕಟ್ಟಿ ನಿಂತಿವೆ. ಬಿಜೆಪಿ ಸರ್ಕಾರಗಳು ದೇಶವನ್ನೇ ಮಾರಾಟ ಮಾಡಲು ತಯಾರಾಗಿದ್ದಾರೆ. ದೆಹಲಿಯಲ್ಲಿ ಚಳಿಯನ್ನದೇ 66 ದಿನಗಳಿಂದ ನಡೆಯುತ್ತಿರುವ ರೈತರ ಐತಿಹಾಸಿಕ ಹೋರಾಟ ಹತ್ತಿಕ್ಕಲು ಕೇಂದ್ರ ಸರಕಾರವು ಪೋಲಿಸ್ ಮತ್ತು ಗುಂಡಾಗಳ ಬಲಪ್ರಯೋಗದಿಂದ ಹೆದರಿಸಲು ನೋಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ನೇತಾಜಿ ಕಂಡ ಸಮಾನತೆ ಸಮಾಜ ಸ್ಥಾಪಿಸಬೇಕಾದರೆ ದೇಶದ ವಿದ್ಯಾರ್ಥಿಗಳು-ಯುವಜನರು, ಮಹಿಳೆ ಯರು, ರೈತರು ಹಾಗೂ ಕಾರ್ಮಿಕರು ಜಾತಿ-ಧರ್ಮದ ಗೋಡೆಗಳನ್ನು ಮುರಿದು ಒಗ್ಗಟ್ಟಾಗಬೇಕೆಂದು ಕರೆ ನೀಡಿದರು.
ಎಸ್.ಎಸ್. ಮರಗೋಳ ಪದವಿ ಪೂರ್ವ ಮಹಾವಿದ್ಯಾಲಯ ಪ್ರಾಂಶುಪಾಲ ಡಾ| ಶಿವಲಾಲ್ ಎಸ್.ಹತ್ತಿ ಮಾತನಾಡಿದರು. ಎಐಡಿಎಸ್‌ಒ ಅಧ್ಯಕ್ಷ ತುಳಜರಾಮ ಎನ್.ಕೆ, ಎಐಎಂಎಮ್‌ಎಸ್ ಅಧ್ಯಕ್ಷೆ ಮಹಾದೇವಿ ಜಿ. ಮಾನೆ ವೇದಿಕೆ ಮೇಲಿದ್ದರು. ಎಐಡಿವೈಒ ಅಧ್ಯಕ್ಷ ಸಿದ್ದು ಚೌಧರಿ ಅಧ್ಯಕ್ಷತೆ ವಹಿಸಿದ್ದರು.
ರಾಮಣ್ಣ ಇಬ್ರಾಹಿಂಪುರ, ಆರ್.ಕೆ.ಎಸ್ ಜಿಲ್ಲಾಧ್ಯಕ್ಷ ಗಣಪತರಾವ್ ಮಾನೆ, ಎಐಯುಟಿಯುಸಿ ಸಂಚಾಲಕ ರಾಘವೇಂದ್ರ ಎಂ.ಜಿ, ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ಜಗನ್ನಾಥ ಎಸ್.ಎಚ್, ಪ್ರವೀಣ ಬಣವೀಕರ್ ಇತರರು ಇದ್ದರು.