Advertisement

ದಿವ್ಯಾ ಹಾಗರಗಿ ಬಂಧನ ಸರ್ಕಾರದ ದೊಡ್ಡ ಸಾಧನೆಯಲ್ಲ: ಶಾಸಕ ಪ್ರಿಯಾಂಕ್‌ ಖರ್ಗೆ

12:22 PM Apr 30, 2022 | Team Udayavani |

ಕಲಬುರಗಿ: ಕಳೆದ ಹದಿನೆಂಟು ದಿನದಿಂದ ತಲೆಮರೆಸಿಕೊಂಡಿದ್ದ ದಿವ್ಯಾ ಹಾಗರಗಿ ಬಂಧನ ಸರ್ಕಾರದ ದೊಡ್ಡ ಸಾಧನೆಯಲ್ಲ. ಅವರನ್ನು ಬಂಧಿಸಿ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಪ್ರಿಯಾಂಕ್‌ ಖರ್ಗೆ ವ್ಯಂಗ್ಯವಾಡಿದರು.

Advertisement

ಆರ್‌.ಡಿ. ಪಾಟೀಲ್‌, ದಿವ್ಯಾ ಹಾಗರಗಿ ಬಂಧನ ಪ್ರಾಥಮಿಕ ಹಂತ. ಎಲ್ಲಿ ಪರೀಕ್ಷಾ ಕೇಂದ್ರ ನಿಗದಿ ಮಾಡಿದರು? ಈ ಹಗರಣದಲ್ಲಿ ಯಾರು, ಯಾರಿಗೆ ಹಣ ನೀಡಿದ್ದಾರೆ, ಹಗರಣದ ವ್ಯಾಪ್ತಿ ಎಷ್ಟು ಎಂಬುದರ ಬಗ್ಗೆ ಮಾಹಿತಿ ಎಲ್ಲಿದೆ? ಆದರೆ ಗೃಹ ಸಚಿವರು ತಮ್ಮ ಸಾಧನೆ ಹೇಳಿಕೊಂಡಿದ್ದಾರೆ. ತನಿಖೆ ಯಾವ ದಿಕ್ಕಿನಲ್ಲಿ ನಡೆಯುತ್ತಿದೆ ಎನ್ನುವ ಮಾಹಿತಿ ಅವರಿಗಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

ನೇಮಕಾತಿ ಅಕ್ರಮ ಪಟ್ಟಿ ರದ್ದುಗೊಳಿಸಿದ್ದು ಮರು ಪರೀಕ್ಷೆಗೆ ಆದೇಶಿಸಿರುವುದು ಸ್ವಾಗತಾರ್ಹ. ಆದರೆ, ಗೃಹಮಂತ್ರಿ ಪ್ರಕಾರ ಆರೋಪಿಗಳನ್ನು ಹೊರತುಪಡಿಸಿ ಉಳಿದವರಿಗೆ ಪರೀಕ್ಷೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಇದು ಅಸ್ಪಷ್ಟವಾಗಿದ್ದು ಸರ್ಕಾರದ ನಿರ್ಧಾರ ಗೊಂದಲಕ್ಕೆ ಕಾರಣವಾಗಿದೆ. ಮರುಪರೀಕ್ಷೆ ಎಂದರೆ ಲಿಖೀತ ಪರೀಕ್ಷೆಯೋ ಅಥವಾ ದೈಹಿಕ ಪರೀಕ್ಷೆಯೂ ಸೇರಿದೆಯಾ? ಈ ಬಗ್ಗೆ ಸ್ಪಷ್ಟತೆ ಇಲ್ಲ. ಯಾಕೆಂದರೆ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಒಎಂಆರ್‌ ಶೀಟ್‌ ನಿಂದ ಶುರುವಾದ ಅಕ್ರಮ ಇದೀಗ ಬ್ಲೂಟೂತ್‌ಗೆ ಬಂದು ನಿಂತಿದೆ. ಕೇವಲ ಲಿಖೀತ ಪರೀಕ್ಷೆ ಅಲ್ಲದೆಯೂ ಬೆಳಗಾವಿಯಲ್ಲಿ ನಡೆದ ದೈಹಿಕ ಪರೀಕ್ಷೆಯಲ್ಲಿಯೂ ಅಕ್ರಮ ನಡೆದ ಬಗ್ಗೆ ವರದಿಗಳಿವೆ. ಹೀಗಾಗಿ ದೈಹಿಕ ಪರೀಕ್ಷೆಯನ್ನು ನಡೆಸಲಾಗುತ್ತಿದೆಯಾ? ಎನ್ನುವುದರ ಬಗ್ಗೆ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

ದಿವ್ಯಾ ಹಾಗರಗಿ ಬಂಧನದ ದಿನವೇ ಪಿಎಸ್‌ಐ ಮರುಪರೀಕ್ಷೆಗೆ ಯಾಕೆ ಆದೇಶ ನೀಡಿದ್ದಿರಿ? ಯಾಕೆ ನಿನ್ನೆ-ಮೊನ್ನೆ ಮರುಪರೀಕ್ಷೆಗೆ ಆದೇಶ ನೀಡಲು ಯಾಕೆ ಸಾಧ್ಯವಾಗಿಲ್ಲ? ಎಂದು ಪ್ರಶ್ನಿಸಿರುವ ಅವರು, ದೈಹಿಕ ಪರೀಕ್ಷೆಯಲ್ಲಿ ಸಹ ಅಕ್ರಮ ನಡೆದಿದೆ. ಹಾಗಾದರೆ ದೈಹಿಕ ಪರೀಕ್ಷೆಯನ್ನು ಮತ್ತೊಮ್ಮೆ ನಡೆಸುತ್ತಿದ್ದೀರಾ ಎನ್ನುವ ಬಗ್ಗೆ ಸರ್ಕಾರ ಸ್ಪಷ್ಟಪಡಿಸಬೇಕು. ನನಗೆ ಅಥವಾ ಕಾಂಗ್ರೆಸ್‌ಗೆ ಉತ್ತರ ಕೊಡುವ ಬದಲು 57,000 ಅಭ್ಯರ್ಥಿಗಳಿಗೆ ಉತ್ತರ ನೀಡುವ ಮೂಲಕ ತಮ್ಮ ಸರ್ಕಾರ ಭ್ರಷ್ಟಾಚಾರ ವಿರುದ್ಧವಾಗಿದ್ದು ಪಾರದರ್ಶಕವಾಗಿದೆ ಎಂದು ತೋರಿಸಬೇಕು ಎಂದರು.

ಎರಡನೇ ನೋಟಿಸ್‌ಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ. ಅಭ್ಯರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಹಗರಣವನ್ನು ಪಾರ್ದದರ್ಶಕವಾಗಿ ತನಿಖೆ ನಡೆಸಿ ಎಂದು ಆಗ್ರಹಿಸಿದವರಿಗೆ ನೋಟಿಸ್‌ ಕೊಡುತ್ತಿದ್ದಾರೆ. ಈ ಸರ್ಕಾರಕ್ಕೆ ತೃಪ್ತಿಯಾಗುವ ಹಾಗಿದ್ದರೆ ನನ್ನನ್ನು ಬಂಧಿಸಿ ಮಂಪರು ಪರೀಕ್ಷೆಗೆ ಒಳಪಡಿಸಲಿ. ಅದಕ್ಕೂ ಮೊದಲು ಯುವಕರಿಗೆ ನ್ಯಾಯ ಕೊಡಿಸಲಿ ಎಂದು ಲೇವಡಿ ಮಾಡಿದರು. ಬಿಟ್‌ ಕಾಯಿನ್‌ ವಿಚಾರದಲ್ಲಿಯೂ ಇದೇ ತರ ಪ್ರಿಯಾಂಕ್‌ ಖರ್ಗೆ ಹೇಳಿಕೆ ನೀಡಿ ಅದನ್ನು ಅರ್ಧಕ್ಕೆ ನಿಲ್ಲಿಸಿದರು. ಅವರಿಗೆ ಹಿಟ್‌ ಆ್ಯಂಡ್‌ ರನ್‌ ಅಭ್ಯಾಸವಾಗಿದೆ. ಹೀಗಾಗಿ ಅವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸಬಾರದು ಎಂದು ಮೈಸೂರು ಸಂಸದ ಪ್ರತಾಪ್‌ ಸಿಂಹ ಟೀಕಿಸಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕ್‌, ಅವರ ಮಾತಿಗೆ ನಾನು ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದು ತಿರುಗೇಟು ನೀಡಿದರು.

Advertisement

ಈ ಪ್ರಕರಣವನ್ನು ಸಿಐಡಿಗೆ ಯಾಕೆ ವಹಿಸಿದ್ದೀರಿ? ನನ್ನ ಮಾತು ಗಂಭೀರವಾಗಿ ತೆಗೆದುಕೊಳ್ಳದಿದ್ದರೆ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಸಾಂಸ್ಕೃತಿಕ ಸಂಘಕ್ಕೆ ಅನುದಾನ ಯಾಕೆ ನಿಲ್ಲಿಸಿದ್ದಿರಿ? ಬಿಟ್‌ ಕಾಯಿನ್‌ ಹಗರಣವನ್ನು ಪಾರದರ್ಶಕವಾಗಿ ತನಿಖೆ ನಡೆಸಿದರೆ ಬಿಜೆಪಿಯವರಿಗೆ ಮೂರನೆ ಸಿಎಂ ಸಿಗುತ್ತಾರೆ ಎಂದು ನಾನು ಈ ಹಿಂದೆ ಹೇಳಿದ್ದೆ. ಈಗಲೂ ಆ ಮಾತಿಗೆ ಬದ್ಧ ಎಂದರು. ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ. ಜಿಲ್ಲೆಯ ಶಾಸಕರೊಬ್ಬರಿಗೆ ಹಣ ಕೊಡಬೇಕು ಎಂದು ಅಧಿಕಾರಿಯೊಬ್ಬರು ಗುತ್ತಿಗೆದಾರರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಹಣ ಪಡೆದುಕೊಂಡಿರುವುದೇ ಇದಕ್ಕೆ ಸಾಕ್ಷಿ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಗದೇವ ಗುತ್ತೇದಾರ, ಮುಖಂಡರಾದ ಸಂತೋಷ ಪಾಟೀಲ ಧಣ್ಣೂರು, ಈರಣ್ಣ ಝಳಕಿ, ರಾಜೀವ್‌ ಜಾನೆ ಹಾಗೂ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next