ಕಲಬುರಗಿ: ಮಾನವ ಜೀವನ ಅಮೂಲ್ಯ. ಅರಿವು ಆದರ್ಶಗಳಿಂದ ಬದುಕನ್ನು ಕಟ್ಟಿಕೊಳ್ಳಬೇಕಾಗಿದೆ. ಜೀವನ ಸಮೃದ್ಧಿಗೆ ದೈವಿ ಗುಣಗಳ ಅವಶ್ಯಕತೆಯಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಜಗದ್ಗುರು ಡಾ| ವೀರಸೋಮೇಶ್ವರ ಜಗದ್ಗುರುಗಳು ನುಡಿದರು.
ತಾಲೂಕಿನ ನದಿಸಿನ್ನೂರು ಮಹಾಲಕ್ಷ್ಮೀದೇವಿ 5ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ನೂತನ ರಥ ಉದ್ಘಾಟನಾ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಸಾರ್ಥಕ ಬದುಕಿಗೆ ಧರ್ಮವೇ ಮೂಲಾಧಾರ. ಸಂಪತ್ತು ಇಲ್ಲದೇ ಬಾಳಲಾಗದು. ಆ ಸಂಪತ್ತಿಗಾಗಿ ಜೀವ ಶ್ರಮಿಸಬೇಕಾಗುತ್ತದೆ. ಸಂಪಾದಿಸಿದ ಸಂಪತ್ತು ಸತ್ಕಾರ್ಯಗಳಿಗೆ ವಿನಿಯೋಗವಾಗಬೇಕು. ಅನ್ಯಾಯ, ಅಧರ್ಮಗಳಿಗೆ ಸಂಪತ್ತು ಕಳೆದು ಹೋಗುತ್ತಿರುವುದು ನೋವಿನ ಸಂಗತಿಯಾಗಿದೆ ಎಂದರಲ್ಲದೇ ಅಭಿನವ ಗುರು ರಾಜೇಂದ್ರ ಮುತ್ಯಾ ಮಹಾಲಕ್ಷ್ಮೀ ದೇವಿ ದೇವಾಲಯ ಸ್ಥಾಪಿಸುವ ಮೂಲಕ ಭಕ್ತರ ಸಂಕಷ್ಟಗಳನ್ನು ಪರಿಹರಿಸಿ ಶಾಂತಿ ಬದುಕಿಗೆ ಕಾರಣರಾಗುತ್ತಿದ್ದಾರೆ ಎಂದರು.
ಹೊನ್ನಕಿರಣಗಿಯ ಶ್ರೀ ಚಂದ್ರಗುಂಡ ಶಿವಾಚಾರ್ಯರು, ಶ್ರೀ ಶ್ರೀನಿವಾಸ ಸರಡಗಿ ರೇವಣ ಸಿದ್ಧ ಶಿವಾಚಾರ್ಯರು, ಸ್ಟೇಷನ್ ಬಬಲಾದ ಶಿವಮೂರ್ತಿ ಶಿವಾಚಾರ್ಯರು ಉಪದೇಶಾಮೃತ ನೀಡಿದರು. ತೊನಸಳ್ಳಿ ರೇವಣಸಿದ್ಧ ಚರಂತೇಶ್ವರ ಶಿವಾಚಾರ್ಯರು, ದಂಡಗುಂಡದ ಸಂಗನಬಸವ ಶಿವಾಚಾರ್ಯರು, ನವಿಲುಕಲ್ಲು ಸೋಮನಾಥ ಶಿವಾಚಾರ್ಯರು, ನೀಲುಗಲ್ ರೇಣುಕ ಶಾಂತಮಲ್ಲ ಶಿವಾಚಾರ್ಯರು ಹಾಜರಿದ್ದರು.
ಅಫಜಲಪುರ ಶಾಸಕ ಎಂ.ವೈ.ಪಾಟೀಲ ಕಲ್ಯಾಣ ಮಂಟಪಕ್ಕೆ ಶಿಲಾನ್ಯಾಸ ನೆರವೇರಿಸಿದರು. ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ಧ್ವನಿ ಸುರುಳಿ ಬಿಡುಗಡೆ ಮಾಡಿದರು. ಶಿವಶರಣಪ್ಪ ಸೀರಿ, ಸೂರ್ಯಕಾಂತ ಕುಲಾರೆ, ಶಿವಶರಣಪ್ಪ ಹೂಗಾರ, ಅರುಣಕುಮಾರ ಹೂಗಾರ, ಅರವಿಂದ ಹೂಗಾರ, ಶಂಕರ ಹೂಗಾರ ಮತ್ತಿತರರು ರಂಭಾಪುರಿ ಜಗದ್ಗುರುಗಳಿಂದ ಗುರುರಕ್ಷೆ ಪಡೆದರು. ಸಮಾರಂಭದ ನಂತರ ಮಹಾಲಕ್ಷ್ಮೀ ದೇವಿ ರಥೋತ್ಸವ ಜರುಗಿತು.