Advertisement

ತರಕಾರಿ ಬೆಳೆಯಿಂದ ಕೃಷಿ ವೈವಿಧ್ಯ

06:00 AM Sep 24, 2018 | Team Udayavani |

ರಾಜಾಸಾಬ್‌ ಮುಲ್ಲಾ, ತರಕಾರಿ ಕೃಷಿಯಲ್ಲಿ ಪರಿಣಿತರು. ವರ್ಷಪೂರ್ತಿ ಇವರ ಹೊಲದಲ್ಲಿ ತರಕಾರಿ ಬೆಳೆಯಿರುತ್ತದೆ. ಕಾಯಿಪಲ್ಲೆಗಳ ಬೆಳೆ ವೈವಿಧ್ಯ ಇವರ ಕೃಷಿ ಯಶಸ್ಸಿನ ಗುಟ್ಟು. ಮಾರುಕಟ್ಟೆಯಲ್ಲಿನ ಬೇಡಿಕೆಯಾಧಾರಿತವಾಗಿ ಭೂಮಿಯಲ್ಲಿ ಬೀಜ ಬಿತ್ತುತ್ತಾರೆ. ಉತ್ತಮ ಗಳಿಕೆ ಕಂಡುಕೊಳ್ಳುತ್ತಾರೆ. ರಾಜಾಸಾಬ್‌ ಮುಲ್ಲಾ ಧಾರವಾಡ ತಾಲೂಕಿನ ಮಂಗಳಗಟ್ಟಿ ಗ್ರಾಮದವರು.

Advertisement

ಇವರದು ಮೂರು ಎಕರೆ ಜಮೀನು. ಇದು ಇವರ ತರಕಾರಿ ಕೃಷಿ ಪ್ರಯೋಗ ಶಾಲೆ. ಈ ಬಾರಿ ಶ್ರಾವಣ ಮಾಸ ಹಾಗೂ ಗಣೇಶ ಚತುರ್ಥಿ ಹೊತ್ತಿಗೆ ಕಟಾವಿಗೆ ಬರುವಂತೆ ಒಂದು ಎಕರೆಯಲ್ಲಿ ಟೊಮೆಟೊ ಕೃಷಿ ಮಾಡಿದ್ದರು. ಒಂದೂವರೆ ಎಕರೆಯಲ್ಲಿ ಹಾಗಲ ಕಾಯಿ ಬೆಳೆಸಿದ್ದಾರೆ. ಉಳಿದಂತೆ ಬೀನ್ಸ್‌, ಬದನೆ, ಹೀರೆ, ಬೆಂಡೆ ಮತ್ತಿತರ ತರಕಾರಿಗಳನ್ನು ಬೆಳೆದಿದ್ದಾರೆ.

ಆರು ಸಾವಿರ ಟೊಮೆಟೊ ಗಿಡಗಳನ್ನು ನಾಟಿ ಮಾಡಿದ್ದರು. ಸಾಲಿನ ನಡುವೆ ಮೂರಡಿ, ಗಿಡದ ನಡುವೆ ಎರಡು ಅಡಿ ಅಂತರವಿಟ್ಟಿದ್ದರು. ನಾಟಿ ಮಾಡಿದ ಎರಡು ತಿಂಗಳಿಗೆ ಅಲ್ಲಲ್ಲಿ ಗೂಟ ಹುಗಿದು ತಂತಿ ಎಳೆದು ಗಿಡಗಳು ನೆಲಕ್ಕೆ ಹಬ್ಬದಂತೆ, ಕಾಯಿಗಳು ಮಣ್ಣಿಗೆ ಬೀಳದಂತೆ ಆಧಾರ ಒದಗಿಸಿದ್ದರು. ಮೂರು ತಿಂಗಳಿಗೆ ಕೊಯ್ಲು ಆರಂಭವಾಗಿತ್ತು. ವಾರದಲ್ಲಿ ಎರಡು ಬಾರಿ ಕೊಯ್ಲು ಮಾಡಿದ್ದಾರೆ. ಪ್ರತಿ ಕೊಯ್ಲಿನಲ್ಲಿ 4-5 ಕ್ವಿಂಟಾಲ್‌ ಇಳುವರಿ ಸಿಕ್ಕಿದೆ. ಟೊಮೆಟೊ ಕಟಾವು ಮುಗಿದಿದೆ. ಈ ಬಾರಿ ನಿರೀಕ್ಷಿಸಿದಷ್ಟು ಬೆಲೆ ಸಿಗದೇ ಇರುವುದು ಇವರ ಬೇಸರಕ್ಕೆ ಕಾರಣವಾಗಿದೆ.

ಒಂದೂವರೆ ಎಕರೆಯಲ್ಲಿರುವ ಹಾಗಲ ಬಳ್ಳಿಗಳು ಇಳುವರಿ ನೀಡಲು ಆರಂಭಿಸಿವೆ. ಸೆಪ್ಟೆಂಬರ್‌ ಕೊನೆಯವರೆಗೆ ಕಟಾವಿಗೆ ಲಭ್ಯವಾಗಲಿವೆ. ಟೊಮೆಟೊ ಹಾಗೂ ಹಾಗಲದ ಕೊಯ್ಲು ಮುಗಿಯುತ್ತಿದ್ದಂತೆ ಭೂಮಿಯನ್ನು ಉಳುಮೆ ಮಾಡಿ ಬೇರೆ ತರಕಾರಿ ಬೆಳೆಗಳನ್ನು ಬೆಳೆಯಲು ಸಿದ್ದಗೊಳಿಸುತ್ತಾರೆ.

ಮಾರುಕಟ್ಟೆಯಲ್ಲಿ ಯಾವುದಕ್ಕೆ ಉತ್ತಮ ಬೆಲೆ ಸಿಗಬಹುದು ಎನ್ನುವ ಅಂದಾಜು ಲೆಕ್ಕಾಚಾರದ ಮೇಲೆ ಇವರ ಬೆಳೆಯ ಆಯ್ಕೆ ನಿಗದಿಯಾಗುತ್ತದೆ. ಸ್ವಂತ ಕೊಳವೆ ಬಾವಿ ಹೊಂದಿರುವ ಇವರು, ಜೋಳದಂತಹ ಸಾಂಪ್ರದಾಯಿಕ ಬೆಳೆಗಳನ್ನು ನೆಚ್ಚಿಕೊಳ್ಳದೇ ತರಕಾರಿ ವೈವಿಧ್ಯತೆಯಿಂದ ಉತ್ತಮ ಗಳಿಕೆ ಕಂಡುಕೊಂಡಿರುವುದು ಮಾದರಿಯೆನ್ನಿಸುತ್ತದೆ.

Advertisement

ಸಂಪರ್ಕಿಸಲು: 9591161854

* ಕೋಡಕಣಿ ಜೈವಂತ ಪಟಗಾರ

Advertisement

Udayavani is now on Telegram. Click here to join our channel and stay updated with the latest news.

Next