Advertisement

ಚಾಕಲೇಟ್‌ ವೈವಿಧ್ಯ

06:00 AM Nov 09, 2018 | |

ಬಾಯಿಯಲ್ಲಿ ನೀರೂರಿಸುವ ಚಾಕಲೇಟ್‌ನ್ನು ನೀವು ಮನೆಯಲ್ಲಿಯೇ ಬಹಳ ಸುಲಭವಾಗಿ ತಯಾರಿಸಿ ಚಿಣ್ಣರನ್ನು ಸಂತೋಷಪಡಿಸಬಹುದು ಮತ್ತು ಆರೋಗ್ಯಕ್ಕೂ ಇದು ಉತ್ತಮ. ಇಲ್ಲಿವೆ, ಕೆಲವು ರಿಸಿಪಿಗಳು. 

Advertisement

ನಟ್ಸ್‌ ಚಾಕಲೇಟ್‌ 
ಬೇಕಾಗುವ ಸಾಮಗ್ರಿ: ಬೆಣ್ಣೆ – ನೂರೈವತ್ತು ಗ್ರಾಮ್‌, ಕೋಕೋ ಪೌಡರ್‌- ಆರು ಚಮಚ, ಚಾಕಲೇಟ್‌ ಸಿರಪ್‌- ಎರಡು ಚಮಚ, ಮಿಲ್ಕ್ಪೌಡರ್‌- ಇನ್ನೂರು ಗ್ರಾಮ್‌, ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ ಚೂರು- ನೂರು ಗ್ರಾಮ್‌.

ತಯಾರಿಸುವ ವಿಧಾನ: ಬೆಣ್ಣೆ, ಕೋಕೋ ಪೌಡರ್‌, ಚಾಕೋಲೇಟ್‌ ಸಿರಪ್‌ ಇವನ್ನು ಚೆನ್ನಾಗಿ ಮಸೆದಿಡಿ. ಜರಡಿಯಾಡಿದ ಮಿಲ್ಕ್ಪೌಡರ್‌ಗೆ ತುಸು ನೀರು ಬೆರೆಸಿ ದೋಸೆಹಿಟ್ಟಿನ ಹದಕ್ಕೆ ಕಲಸಿ ದಪ್ಪತಳದ ಬಾಣಲೆಯಲ್ಲಿ ಸಣ್ಣ ಉರಿಯಲ್ಲಿ ಬಿಸಿಮಾಡಿ ಕೈಯಾಡಿಸುತ್ತಾ ಇರಿ. ನಂತರ, ಗಟ್ಟಿಯಾಗುತ್ತಿದ್ದಂತೆ ಒಲೆಯಿಂದ ಇಳಿಸಿ ಇದಕ್ಕೆ ಮೊದಲೇ ಮಸೆದಿಟ್ಟ ಕೋಕೋಪೌಡರ್‌ ಬೆರೆಸಿ ಚೆನ್ನಾಗಿ ಗೊಟಾಯಿಸಿ. ನಂತರ, ಇದನ್ನು ಪುನಃ ಒಲೆಯ ಮೇಲಿಟ್ಟು ಸೌಟಿನಿಂದ ಮಗುಚುತ್ತ ಇದ್ದು ಗಟ್ಟಿಯಾಗುತ್ತಿದ್ದಂತೆ ಮಿಶ್ರಮಾಡಿಟ್ಟ ನಟ್ಸ್‌ನ ಚೂರುಗಳನ್ನು ಹಾಕಿ ಚೆನ್ನಾಗಿ ಮಿಶ್ರಮಾಡಿ ಒಲೆಯಿಂದ ಇಳಿಸಿ ಬೆಣ್ಣೆ ಸವರಿದ ತಟ್ಟೆಗೆ ಹಾಕಿ ವಜ್ರಾಕೃತಿಯಲ್ಲಿ ಕತ್ತರಿಸಿ ಸುಮಾರು ಒಂದು ಗಂಟೆ ಫ್ರಿಜ್‌ನಲ್ಲಿಟ್ಟು, ನಂತರ ಹೊರತೆಗೆದು, ಎರಡು ಗಂಟೆಯ ನಂತರ ಸರ್ವ್‌ ಮಾಡಬಹುದು.  

ಚೆರಿ ವಿದ್‌ ಕಾಫಿ ಡಿಲೈಟ್‌ 
ಬೇಕಾಗುವ ಸಾಮಗ್ರಿ:
ಸಕ್ಕರೆಪುಡಿ- ಅರ್ಧ ಕಪ್‌, ಮಾರಿ ಬಿಸ್ಕತ್‌ಪುಡಿ- ಅರ್ಧ ಕಪ್‌, ಬೆಣ್ಣೆ- ಎರಡು ಚಮಚ, ಮಿಲ್ಕ್ ಮೇಡ್‌- ಅರ್ಧ ಕಪ್‌, ಖೋವಾ- ಅರ್ಧ ಕಪ್‌, ನೆಸ್‌ಕಫೆ ಪುಡಿ ಅಥವ ಕೋಕೋ ಪೌಡರ್‌- ಎರಡೂವರೆ ಚಮಚ, ತುಪ್ಪದಲ್ಲಿ ಹುರಿದ ಬಾದಾಮಿ ತರಿ- ಅರ್ಧ ಕಪ್‌.

ತಯಾರಿಸುವ ವಿಧಾನ: ಬಿಸ್ಕತ್‌ನ್ನು ಮಿಕ್ಸಿಯಲ್ಲಿ ನುಣ್ಣಗೆ ಪುಡಿಮಾಡಿ ಮಿಕ್ಸಿಂಗ್‌ಬೌಲ್‌ಗೆ ಹಾಕಿ. ಬ್ರೂ ಅಥವಾ ನೆಸ್‌ಕಫೆಪುಡಿಯನ್ನು ಬಿಸಿನೀರಿನಲ್ಲಿ ಕಲಕಿ ಇದಕ್ಕೆ ಸೇರಿಸಿ. ಸಕ್ಕರೆಗೆ ಬೆಣ್ಣೆ ಸೇರಿಸಿ ಚೆನ್ನಾಗಿ ಮಿಶ್ರಮಾಡಿ ಇದಕ್ಕೆ ಸೇರಿಸಿ. ನಂತರ, ಮಿಲ್ಕ್ಮೇಡ್‌ ಮತ್ತು ಖೋವಾ ಸೇರಿಸಿ ಚೆನ್ನಾಗಿ ನಾದಿ, ಮಿಶ್ರಮಾಡಿ ಕೊನೆಯಲ್ಲಿ ಹುರಿದಿಟ್ಟ ಬಾದಾಮಿ ತರಿ ಸೇರಿಸಿ ಪುನಃ ಮಿಶ್ರಮಾಡಿ. ಚಪಾತಿ ಹಿಟ್ಟಿನ ಹದಕ್ಕೆ ಹಿಟ್ಟು ತಯಾರಿಸಿಕೊಳ್ಳಿ. ನಂತರ, ಬೇಕಾದ ಆಕಾರದಲ್ಲಿ ಉಂಡೆ ಮಾಡಿ ಇದರ ಮೇಲೆ ಚೆರಿಗಳನ್ನು ಇಟ್ಟು ಅಲಂಕರಿಸಿ. ಫ್ರೀಜ್‌ರ್‌ ನಲ್ಲಿಟ್ಟು ಒಂದು ಗಂಟೆಯ ನಂತರ ಸವಿಯಲು ಕೊಡಬಹುದು.

Advertisement

ಕ್ಯಾಶ್ಯೂ ಚಾಕಲೇಟ್‌ ಬಾರ್‌ 
ಬೇಕಾಗುವ ಸಾಮಗ್ರಿ:
ಕೋಕೋ ಪೌಡರ್‌- ಒಂದು ಕಪ್‌, ಮಿಲ್ಕ್ಪೌಡರ್‌- ಮೂರು ಕಪ್‌, ಸಕ್ಕರೆ- ಮೂರು ಕಪ್‌, ಮೈದಾಹುಡಿ- ಎರಡು ಕಪ್‌, ಬೆಣ್ಣೆ – ಒಂದೂವರೆ ಕಪ್‌, ನೀರು- ಸುಮಾರು ಮುಕ್ಕಾಲು ಕಪ್‌, ಗೇರು ಬೀಜದ ತರಿ- ಒಂದು ಕಪ್‌.

ತಯಾರಿಸುವ ವಿಧಾನ: ಮಿಲ್ಕ್ಪೌಡರ್‌, ಕೋಕೋ ಮತ್ತು ಮೈದಾಹುಡಿ ಇವುಗಳನ್ನು ಜರಡಿ ಹಿಡಿದು ಚೆನ್ನಾಗಿ ಮಿಶ್ರಮಾಡಿಟ್ಟುಕೊಳ್ಳಿ. ಸಕ್ಕರೆಗೆ ಸ್ವಲ್ಪ ನೀರು ಸೇರಿಸಿ, ಕುದಿಸಿ ನೂಲು ಪಾಕಮಾಡಿ. ನಂತರ, ಇದಕ್ಕೆ ಬೆಣ್ಣೆ ಸೇರಿಸಿ ಕುದಿಸಿ ಒಲೆಯಿಂದ ಇಳಿಸಿ. ನಂತರ, ಇದಕ್ಕೆ ಮೊದಲೇ ಮಿಶ್ರಮಾಡಿಟ್ಟ ಕೋಕೋ ಪೌಡರ್‌, ಮೈದಾ ಮತ್ತು ಗೋಡಂಬಿ ತರಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಮಾಡಿ ಪುನಃ ಒಲೆಯಲ್ಲಿಟ್ಟು ಸ್ವಲ್ಪ ಸಮಯ ಕಾಯಿಸಿ ಬೆಣ್ಣೆ ಸವರಿದ ತಟ್ಟೆಗೆ ದಪ್ಪಕ್ಕೆ ಹರಡಿ. ಆರಿದ ಮೇಲೆ ಕಟ್‌ಮಾಡಿ ಸರ್ವ್‌ ಮಾಡಬಹುದು. 

ಬಾದಾಮ್‌ ಚಾಕೋಲೇಟ್‌ 
ಬೇಕಾಗುವ ಸಾಮಗ್ರಿ:
ಕೋಕೋ ಪುಡಿ- ಅರ್ಧ ಕಪ್‌, ಮಿಲ್ಕ್ ಪೌಡರ್‌- ಒಂದೂವರೆ ಕಪ್‌, ಮೈದಾಹುಡಿ- ಎರಡು ಕಪ್‌, ಬೆಣ್ಣೆ – ಒಂದು ಕಪ್‌, ಸಕ್ಕರೆ- ಒಂದೂವರೆ ಕಪ್‌, ಬಾದಾಮಿ- ಹತ್ತು.

ತಯಾರಿಸುವ ವಿಧಾನ: ಬಾದಾಮಿಯನ್ನು ಅರ್ಧ ಭಾಗ ಮಾಡಿ ತುಪ್ಪದಲ್ಲಿ ಹುರಿದಿಟ್ಟುಕೊಳ್ಳಿ. ಕೋಕೋಪುಡಿ, ಮೈದಾ ಮತ್ತು ಹಾಲಿನ ಹುಡಿಯನ್ನು ಚೆನ್ನಾಗಿ ಮಿಶ್ರಮಾಡಿ. ಸಕ್ಕರೆಗೆ ಅರ್ಧ ಕಪ್‌ ನೀರು ಸೇರಿಸಿ ಪಾಕಕ್ಕೆ ಇಡಿ. ಸಕ್ಕರೆ ಕರಗಿ ನೂಲು ಪಾಕವಾಗುತ್ತಿದ್ದಂತೆ ಬೆಣ್ಣೆ ಸೇರಿಸಿ, ಕುದಿಸಿ, ಒಲೆಯಿಂದ ಇಳಿಸಿ. ನಂತರ, ಇದಕ್ಕೆ ಮೊದಲೇ ಮಿಶ್ರಮಾಡಿಟ್ಟ ಮೈದಾ ಮಿಶ್ರಣವನ್ನು ಸೇರಿಸಿ, ಚೆನ್ನಾಗಿ ಮಿಶ್ರಮಾಡಿ ಒಲೆಯಲ್ಲಿ ಇಟ್ಟು ಮಗುಚಿ ತಳ ಬಿಡುತ್ತಿದ್ದಂತೆ ಇಳಿಸಿ ಬೆಣ್ಣೆ ಸವರಿದ ತಟ್ಟೆಗೆ ಹಾಕಿ. ಆರಿದ ಮೇಲೆ ಕತ್ತರಿಸಿಟ್ಟ ಬಾದಾಮಿ ಒಳಗಿಟ್ಟು ಬೇಕಾದ ಆಕಾರಕ್ಕೆ ಉಂಡೆಮಾಡಿ ಸರ್ವ್‌ ಮಾಡಬಹುದು. ಬೇಕಾದರೆ ಫ್ರಿಜ್‌ನಲ್ಲಿಟ್ಟು ಸವಿಯಬಹುದು.  
    
ಗೀತಸದಾ

Advertisement

Udayavani is now on Telegram. Click here to join our channel and stay updated with the latest news.

Next