“ಬಿಗ್‌ಬಾಸ್’ ಮೂಲಕ ಬೆಳಕಿಗೆ ಬಂದ ನಟ ದಿವಾಕರ್ ಅಭಿನಯದ ಮತ್ತೂಂದು ಚಿತ್ರ ತೆರೆಗೆ ಬರೋದಕ್ಕೆ ಸಿದ್ಧವಾಗುತ್ತಿದೆ. ಈ ಹಿಂದೆ “ರೇಸ್’ ಚಿತ್ರದಲ್ಲಿ ಖಾಕಿ ತೊಟ್ಟು, ಪೊಲೀಸ್ ಗೆಟಪ್‌ನಲ್ಲಿ ಪ್ರೇಕ್ಷಕರ ಮುಂದೆ ಬಂದಿದ್ದ ದಿವಾಕರ್, ಈ ಬಾರಿ ಡೈರೆಕ್ಟರ್ ಕ್ಯಾಪ್ ತೊಡುತ್ತಿದ್ದಾರೆ. ಹೌದು, ದಿವಾಕರ್ ಅಭಿನಯದ ಎರಡನೇ ಚಿತ್ರ “ಗುಲಾಲ್’ ತೆರೆಗೆ ಬರಲು ಸಿದ್ಧವಾಗುತ್ತಿದ್ದು, ಈ ಚಿತ್ರದಲ್ಲಿ ದಿವಾಕರ್ ಸಿನಿಮಾ ಡೈರೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಸದ್ಯ ಪೋಸ್ಟ್ ಪ್ರೊಡಕ್ಷನ್ ಅಂತಿಮ ಹಂತದಲ್ಲಿರುವ “ಗುಲಾಲ್’ ಚಿತ್ರತಂಡ, ಇತ್ತೀಚೆಗೆ ನಟ, ನಿರ್ದೇಶಕ ದಿ. ಶಂಕರನಾಗ್ ಅವರ ಜನ್ಮದಿನದಂದು ಚಿತ್ರದ ಕಲಾವಿದರು, ತಂತ್ರಜ್ಞರ ಮತ್ತು ಹಲವು ಗಣ್ಯರ ಸಮ್ಮುಖದಲ್ಲಿ ಆಡಿಯೋ ಬಿಡುಗಡೆಗೊಳಿಸುವ ಮೂಲಕ “ಗುಲಾಲ್’ ಪ್ರಮೋಶನ್ ಕಾರ್ಯಗಳಿಗೆ ಚಾಲನೆ ನೀಡಿದೆ.
ಈ ಹಿಂದೆ “ನನ್ನ ನಿನ್ನ ಪ್ರೇಮಕಥೆ’ ಚಿತ್ರವನ್ನು ನಿರ್ದೇಶಿಸಿದ್ದ ಶಿವು ಜಮಖಂಡಿ, “ಗುಲಾಲ್’ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಾಹಿತ್ಯ ಮತ್ತು ಸಂಗೀತ ನೀಡಿ, ನಿರ್ದೇಶನ ಮಾಡಿದ್ದಾರೆ. “ಎ.ಬಿ ಸಿನಿಮಾ ಕ್ರಿಯೇಷನ್ಸ್’ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಧನಂಜಯ್ ಹೆಚ್, ಡಾ. ಗೋಪಾಲಕೃಷ್ಣ ಹವಲ್ದಾರ ಬಂಡವಾಳ ಹೂಡಿದ್ದಾರೆ.
“ಗುಲಾಲ್’ ಆಡಿಯೋ ಬಿಡುಗಡೆ ವೇಳೆ ಮಾತನಾಡಿದ ನಿರ್ದೇಶಕ ಶಿವು ಜಮಖಂಡಿ, “ಇಂದಿಗೂ ಕನ್ನಡ ಚಿತ್ರರಂಗದ ಅದೆಷ್ಟೋ ಮಂದಿಗೆ ನಟ ಮತ್ತು ನಿರ್ದೇಶಕ ಶಂಕರನಾಗ್ ಅವರೇ ಸ್ಪೂರ್ತಿ. ಶಂಕರನಾಗ್ ಇಂದು ಬದುಕಿದ್ದರೆ, ಸ್ಯಾಂಡಲ್‌ವುಡ್ ಹಾಲಿವುಡ್ ಮಟ್ಟಕ್ಕೆ ಹೋಗಿರುತ್ತಿತ್ತು. ನಮ್ಮ ಚಿತ್ರಕ್ಕೂ ಶಂಕರನಾಗ್ ಅವರೇ ಸ್ಫೂರ್ತಿ. ಹಾಗಾಗಿ ಶಂಕರನಾಗ್ ಅವರ ಜನ್ಮದಿನದಂದೇ ನಮ್ಮ ಚಿತ್ರದ ಆಡಿಯೋ ಬಿಡುಗಡೆ ಮಾಡುವ ಮೂಲಕ ಪ್ರಮೋಶನ್ ಕೆಲಸಗಳಿಗೆ ಚಾಲನೆ ಕೊಟ್ಟಿದ್ದೇವೆ. ಇನ್ನು “ಗುಲಾಲ್’ ಅಂದ್ರೆ ಸಂಭ್ರಮ, ಬಣ್ಣ ಎಂಬ ಹಲವು ಅರ್ಥಗಳಿವೆ. ಚಿತ್ರದಲ್ಲಿ ಟೈಟಲ್‌ನಲ್ಲಿ ಇರುವಂತೆ ಎಲ್ಲವೂ ಇರಲಿದೆ. ಅದು ಹೇಗೆ ಅನ್ನೋದನ್ನ ತೆರೆಮೇಲೆ ನೋಡಬೇಕು’ ಎಂದರು.
ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡಿದ ನಟ ದಿವಾಕರ್, “ಈ ಮೊದಲು ಪೊಲೀಸ್ ಪಾತ್ರದಲ್ಲಿ ತುಂಬ ಗಂಭೀರವಾಗಿ ಕಾಣಿಸಿಕೊಂಡಿದ್ದೆ. “ಗುಲಾಲ್’ ಚಿತ್ರದಲ್ಲಿ ಅದಕ್ಕೆ ವಿರುದ್ಧವಾದ ಪಾತ್ರ ಸಿಕ್ಕಿದೆ. ಇದೊಂದು ಕಂಪ್ಲೀಟ್ ಕಾಮಿಡಿ ಎಂಟರ್‌ಟೈನ್ಮೆಂಟ್ ಚಿತ್ರ. ಮನೆಮಂದಿ ಎಲ್ಲ ಕುಳಿತು ನೋಡಿ ಆನಂದಿಸಬಹುದು. ಚಿತ್ರದ ಕಥೆ ಕೇಳುತ್ತಿದ್ದಂತೆ, ಇಷ್ಟವಾಗಿ ಈ ಚಿತ್ರವನ್ನು ಒಪ್ಪಿಕೊಂಡೆ. ನಿರ್ದೇಶಕರು ಮತ್ತು ನಿರ್ಮಾಪಕರು ತುಂಬ ಆಸಕ್ತಿ ವಹಿಸಿ ಈ ಚಿತ್ರ ಮಾಡಿದ್ದಾರೆ. ಚಿತ್ರದ ಚೆನ್ನಾಗಿ ಮೂಡಿಬಂದಿದ್ದು, ಪ್ರೇಕ್ಷಕರಿಗೆ ಇಷ್ಟವಾಗುವುದೆಂಬ ನಂಬಿಕೆಯಿದೆ’ ಎಂದರು.
ಇನ್ನು “ಗುಲಾಲ್’ ಚಿತ್ರದಲ್ಲಿ ದಿವಾಕರ್ ಅವರಿಗೆ ನಾಯಕಿಯಾಗಿ ನೇತ್ರಾ ಜೋಡಿಯಾಗಿದ್ದಾರೆ. ಉಳಿದಂತೆ ತಬಲನಾಣಿ, ಮೋಹನ್ ಜುನೇಜಾ, ಶೋಭರಾಜ್, ಸದಾನಂದ್, ಜೋಕರ್ ಹನುಮಂತು, ಸೋನು ಪಾಟೀಲ್ ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಬೆಂಗಳೂರು, ನೆಲಮಂಗಳ ಸುತ್ತಮುತ್ತ “ಗುಲಾಲ್’ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಸದ್ಯ ನಿಧಾನವಾಗಿ ಪ್ರಮೋಶನ್ ಕೆಲಸಗಳಿಗೆ ಚಾಲನೆ ನೀಡಿರುವ “ಗುಲಾಲ್’ ಇದೇ ವರ್ಷಾಂತ್ಯಕ್ಕೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಪ್ರೇಕ್ಷಕರ ಮುಂದೆ ಬರುವ ಸಾಧ್ಯತೆ ಇದೆ.
ಜಿ.ಎಸ್. ಕಾರ್ತಿಕ ಸುಧನ್