ನರೇಗಲ್ಲ: ಪಟ್ಟಣ ವ್ಯಾಪ್ತಿಯಲ್ಲಿನ ದ್ಯಾಂಪುರ ಬಳಿ ವಾಜಪೇಯಿ ವಸತಿ ಯೋಜನೆಯ ಆಶ್ರಯ ಮನೆಗಳ ನಿರ್ಮಾಣ ಕಳೆದ ಕೆಲ ವರ್ಷಗಳಿಂದ ನಡೆಯುತ್ತಲೇ ಇದೆ. ಕೆಲ ಮನೆಗಳು ನಿರ್ಮಾಣವಾಗಿದ್ದರೆ, ಇನ್ನೂ ಅನೇಕ ಮನೆ ನಿರ್ಮಾಣ ಬಾಕಿಯಿದೆ.
ಪಟ್ಟಣದ ಮಜರೆ ವ್ಯಾಪ್ತಿಯಲ್ಲಿನ ದ್ಯಾಂಪುರ ಗ್ರಾಮದ ಹೊರವಲಯದಲ್ಲಿ 2012-13ನೇ ಸಾಲಿನಲ್ಲಿ ನರೇಗಲ್ಲ ಪಪಂ ವ್ಯಾಪ್ತಿಗೆ ಒಳಪಡುವ ಬಡ, ಮನೆ ಇಲ್ಲದವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ 1246 ಮನೆ ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗಿತ್ತು. ಅದನ್ನು ಜಾರಿಗೆ ತರಲು ಅನೇಕರು ಪ್ರಾಮಾಣಿಕ ಪ್ರಯತ್ನ ಮಾಡಿದರು. ಆದರೂ ಮನೆಗಳು ಇನ್ನು ನಿರ್ಮಾಣವಾಗದೆ ಬಡವರಿಗೆ ಮನೆ ಎಂಬುವುದು ಕನಸಿನ ಕೂಸಾಗಿಯೇ ಉಳಿದಿದೆ.
2013-14ನೇ ಸಾಲಿನಲ್ಲಿ ವಸತಿ ರಹಿತರಿಗೆ ಮನೆ ಕಟ್ಟಿಸುವ ಸಲುವಾಗಿ ಈ ಯೋಜನೆ ಜಾರಿಗೆ ತಂದಿದ್ದು, ಆಗ ಇಲ್ಲಿ 1246 ಮನೆಗಳ ನಿರ್ಮಾಣಕ್ಕೆ ಎಂದು 39 ಎಕರೆ 23 ಗುಂಟೆ ಜಾಗ ನಿಗದಿಪಡಿಸಿ ಆಗಿನ ಹಾಗೂ ಈಗಿನ ಶಾಸಕ ಕಳಕಪ್ಪ ಬಂಡಿ ಅಡಿಗಲ್ಲು ಸಮಾರಂಭ ನೆರವೇರಿಸಿದ್ದರು. ಸ್ಥಳದಲ್ಲಿಯೇ ಫಲಾನುಭವಿಗಳಿಗೆ ಹಕ್ಕು ಪತ್ರವನ್ನೂ ವಿತರಣೆ ಮಾಡಲಾಗಿತ್ತು. ಆದರೆ ಇಲ್ಲಿಯವರೆಗೆ ಅಲ್ಲಿ ಕೇವಲ 150 ಮನೆಗಳನ್ನು ಮಾತ್ರ ನಿರ್ಮಾಣ ಮಾಡಲಾಗಿದ್ದು, ಇನ್ನುಳಿದಂತೆ ಬೆರಳೆಣಿಕೆ ಮನೆಗಳಿಗೆ ಪಾಯ ಹಾಕಿ ಹಾಗೇ ಬಿಡಲಾಗಿದೆ. ಇಲ್ಲಿಯವರೆಗೂ ಇನ್ನುಳಿದ ಮನೆಗಳ ನಿರ್ಮಾಣಕ್ಕೆ ಯಾರು ಕಾಳಜಿ ವಹಿಸದೆ ಇರುವುದರಿಂದ ಮನೆ ರಹಿತ ಈ ಯೋಜನೆಯಲ್ಲಿ ಆಯ್ಕೆಯಾಗಿರುವ ಫಲಾನುಭವಿಗಳು ಇಂದು ನಾಳೆ ಮನೆ ನಿರ್ಮಾಣವಾಗುತ್ತದೆ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಮಾಜಿ ಶಾಸಕ ಜಿ.ಎಸ್. ಪಾಟೀಲ ಅವಧಿಯಲ್ಲಿ ಹಳೆಯ 150 ಮನೆಗಳಿಗೆ (ನಿರ್ಮಾಣವಾಗಿರುವುದು) ಸುಣ್ಣ ಬಣ್ಣ, ವಿದ್ಯುತ್ ಬೋರ್ಡ್ ಸೇರಿದಂತೆ ವಿವಿಧ ಸೌಲಭ್ಯ ಮಾಡಿದ್ದೇವೆ ಎಂದು ಖರ್ಚು ಹಾಕಿ ನಿರ್ಮಿತಿ ಕೇಂದ್ರದವರು ನಿರ್ಮಾಣ ಮಾಡಿದ್ದಾರೆ. ಅದರೆ, ಅಲ್ಲಿ ಹೋಗಿ ನೋಡಿದರೆ ಮುರಿದ ಬಾಗಿಲು, ಕಿಟಕಿ, ನೆಲಕ್ಕೆ ಬಿದ್ದ ವಿದ್ಯುತ್ ಪರಿಕರಗಳು, ಬಿರುಕು ಬಿಟ್ಟ ಗೋಡೆಗಳು, ಕಿತ್ತುಹೋದ ಶೌಚಾಲಯವಿದೆ. ಮನೆ ಹೊರಗಡೆ ಯಥೇಚ್ಚವಾಗಿ ಬೆಳೆದ ಜಾಲಿ ಕಂಟಿಗಳಿವೆ. ನಿರ್ಮಾಣಕ್ಕೆ ಬೇಕಾದ ಸಿಮೆಂಟ್ ಕಿಡಕಿ, ಬಾಗಿಲು ಸೇರಿದಂತೆ ಸಣ್ಣಪುಟ್ಟ ವಸ್ತುಗಳು ಎಲ್ಲೆಂದರಲ್ಲಿ ಬಿದ್ದಿವೆ. ಬಾಗಿಲುಗಳು ಇಲ್ಲದೇ ಇರುವುದರಿಂದ ಇಲ್ಲಿ ಕುಡುಕರ ಹಾವಳಿ ಹೆಚ್ಚಾಗಿದೆ. ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.
•ಸಿಕಂದರ ಎಂ. ಆರಿ