Advertisement

ಗೊಂದಲದ ಗೂಡಾದ ಚತುಷ್ಪಥ ಕಾಮಗಾರಿ

12:47 PM Sep 17, 2019 | Team Udayavani |

ಭಟ್ಕಳ: ರಾಷ್ಟ್ರೀಯ ಹೆದ್ದಾರಿ 66 (ಈ ಹಿಂದಿನ ರಾ.ಹೆ.17) ಅಗಲೀಕರಣ ಕಾಮಗಾರಿ ಆರಂಭವಾಗಿ 6-7 ವರ್ಷವಾದರೂ ಕಾಮಗಾರಿ ಇನ್ನೂ ಮುಗಿಯದೇ ಗೊಂದಲದ ಗೂಡಾಗಿದೆ. ಒಂದೆಡೆ ರಾಷ್ಟ್ರೀಯ ಹೆದ್ದಾರಿಗಾಗಿ ಭೂ ಸ್ವಾಧೀನದ ಸಮಸ್ಯೆ ಎದುರಾದರೆ ಇನ್ನೊಂದೆಡೆ ಕಾಮಗಾರಿ ನಡೆಸುವ ಕಂಪೆನಿ ನಿಧಾನಗತಿಯಿಂದಾಗಿ ಕಾಮಗಾರಿ ವಿಳಂಬವಾಗಿದೆ.

Advertisement

ಉತ್ತರ ಕನ್ನಡ ಜಿಲ್ಲೆಯಲ್ಲಿ ಚತುಷ್ಪತ ಕಾಮಗಾರಿ ಆರಂಭವಾದಾಗಿನಿಂದ ಹೆದ್ದಾರಿ ಪಕ್ಕದ ಜನತೆ ಒಂದಲ್ಲ ಒಂದು ಗೊಂದಲದಲ್ಲಿದ್ದಾರೆ. ಎಲ್ಲಿ ಎಷ್ಟು ವಶಪಡಿಸಿಕೊಳ್ಳಲಾಗುತ್ತಿದೆ ಎನ್ನುವುದೇ ಒಂದು ಗೊಂದಲವಾದರೆ, ಒಂದೊಂದು ಬಾರಿ ಒಂದೊಂದು ಮಾರ್ಕಿಂಗ್‌ ಮಾಡಿ ಹೋಗುತ್ತಿರುವುದು ಇನ್ನಷ್ಟು ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ.

ಈ ಗೊಂದಲ ನಿವಾರಣೆಗೆ ಅಧಿಕಾರಿಗಳಾಗಲೀ, ಗುತ್ತಿಗೆದಾರ ಕಂಪೆನಿಯಾಗಲೀ ಪ್ರಯತ್ನ ಮಾಡಿಲ್ಲ. ಜನತೆ ಇನ್ನೂ ಕತ್ತಲೆಯಲ್ಲಿಯೇ ಇದ್ದು ಎಲ್ಲಿ ಏನಾಗುತ್ತಿದೆ ಎನ್ನುವುದು ತಿಳಿಯದಾಗಿದೆ. ನಮ್ಮ ಮನೆ, ನಮ್ಮ ಬದುಕು ಎಂದುಕೊಂಡಿದ್ದ ಜನತೆ ಹೆದ್ದಾರಿ ಅಗಲೀಕರಣದಿಂದಾಗಿ ನಿದ್ದೆಯಿಲ್ಲದೆ ರಾತ್ರಿ ಕಳೆಯುವಂತಾಗಿದೆ.

ಗ್ರಾಮೀಣ ಭಾಗದಲ್ಲಿ ಬಹುತೇಕ ಕಾಮಗಾರಿಗಳು ಮುಕ್ತಾಯದ ಹಂತಕ್ಕೆ ತಲುಪಿದ್ದರೂ ಇನ್ನೂ ಅನೇಕ ಕಡೆಗಳಲ್ಲಿ ಕಾಮಗಾರಿ ಅರ್ಧಂಬರ್ಧ ಆಗಿದೆ. ಅಲ್ಲಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ವಿಳಂಬ, ಪರಿಹಾರ ಪಡೆದರೂ ಜಾಗ, ಕಟ್ಟಡ ತೆರವು ಮಾಡದೇ ಇರುವ ಸಮಸ್ಯೆ ಇದಕ್ಕೆ ಕಾರಣವಾಗಿದೆ.

ನಗರ ಭಾಗದಲ್ಲಿ ಮೂಡಭಟ್ಕಳದಿಂದ ಮಣ್ಕುಳಿ ತನಕ ಕೆಲಸ ಆರಂಭಿಸಿದ್ದರೂ ಇನ್ನೂ ಪೂರ್ಣಗೊಳಿಸಿಲ್ಲ, ಅರ್ಧಂಬರ್ಧ ಕಾಮಗಾರಿ ಮಾಡಿದ್ದು ಎರಡೂ ಕಡೆಗಳಲ್ಲಿ ಚರಂಡಿ ಕಾಮಗಾರಿ ಮಾಡದೇ ಕಳೆದ ಮಳೆಗಾಲದಲ್ಲಿ ತೀವ್ರ ತೊಂದರೆ ಅನುಭವಿಸಬೇಕಾಗಿದ್ದಕ್ಕೆ ಕಾಮಗಾರಿ ಪೂರ್ಣಗೊಳ್ಳದಿರುವುದೇ ಕಾರಣವಾಗಿದೆ.

Advertisement

ನಗರದಲ್ಲಿ ಭೂಸ್ವಾಧಿನ ಸಂಕಷ್ಟ: ಮಣ್ಕುಳಿಯಿಂದ ನವಾಯತ ಕಾಲೋನಿ ತನಕ ಅನೇಕ ಸಮಸ್ಯೆಗಳಿದ್ದು ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಭೂ ಸ್ವಾಧೀನ ಪ್ರಕ್ರಿಯೆಯೇ ಪೂರ್ಣಗೊಂಡಿಲ್ಲದೇ ಇರುವುದೂ ಕೂಡಾ ವಿಳಂಬಕ್ಕೆ ಕಾರಣ ಎನ್ನಲಾಗಿದೆ. ನಗರದಲ್ಲಿ ಅನೇಕ ಸರ್ವೇ ನಂಬ್ರಗಳು ಬಿಟ್ಟು ಹೋಗಿರುವುದರಿಂದ ಭೂಸ್ವಾದೀನ ತಡವಾಗುತ್ತಿದ್ದು ಕಾಮಗಾರಿ ಆರಂಭಿಸಲು ಸಾಧ್ಯವಾಗದ ಪರಿಸ್ಥಿತಿ ಇದೆ.

ಒಳಚರಂಡಿ ಸಮಸ್ಯೆ:

ನಗರದಲ್ಲಿ ಮೂಢ ಭಟ್ಕಳದಿಂದ ನವಾಯತ ಕಾಲೋನಿ ತನಕ ಕಾಮಗಾರಿ ಮಾಡಲು ಇನ್ನೊಂದು ತೊಡಕಿದ್ದು ಅದನ್ನು ಕೂಡಾ ಪರಿಹಾರ ಮಾಡಿಕೊಳ್ಳಬೇಕಾಗಿದೆ. ಈಗಿರುವ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ಪುರಸಭೆ ಒಳಚರಂಡಿ ಪೈಪ್‌ ಹಾದು ಹೋಗಿದ್ದು ಅದನ್ನು ಬದಲಾಯಿಸದೇ ಕಾಮಗಾರಿ ಕೈಗೊಳ್ಳುವುದು ಕಷ್ಟಕರವಾಗಲಿದೆ. ಈಗಾಗಲೇ ಒಳಚರಂಡಿ ಪೈಪನ್ನು ಕಾಮಗಾರಿ ಪ್ರದೇಶದಿಂದ ಪಕ್ಕಕ್ಕೆ ಹಾಕಲು ಟೆಂಡರ್‌ ಆಗಿದೆಯಾದರೂ ಸಹ ಯಾವುದೇ ಕಾಮಗಾರಿ ಆರಂಭವಾಗಿಲ್ಲ. ಹೆದ್ದಾರಿಯಂಚಿನಲ್ಲಿಯೇ ಒಳಚರಂಡಿ ಪೈಪ್‌ ಇರುವುದರಿಂದ ಅದನ್ನು ಬದಲಾಯಿಸದೇ ರಸ್ತೆ ಮಾಡುವುದು ಸಾಧ್ಯವಿಲ್ಲ. ಶಂಶುದ್ಧೀನ್‌ ಸರ್ಕಲ್ನಿಂದ ವೆಂಕಟಾಪುರದ ತನಕ ಮುಖ್ಯ ಪೈಪ್‌ಲೈನ್‌ ಇದ್ದು ಒಂದು ವೇಳೆ ಅದಕ್ಕೇನಾದರೂ ಧಕ್ಕೆಯಾದರೆ ಇಡೀ ಭಟ್ಕಳ ನಗರದ ಸ್ವಚ್ಛತಾ ವ್ಯವಸ್ಥೆಯೇ ಅದಲು ಬದಲಾಗಲಿದೆ. ಸಂಪೂರ್ಣ ಹೊಲಸು ನಗರದಲ್ಲೇ ಸಂಗ್ರಹವಾಗಲಿದ್ದು ಈ ಕುರಿತೂ ಜಾಗೃತೆ ವಹಿಸಬೇಕಾಗಿದೆ. ಒಳಚರಂಡಿ ಕಾಮಗಾರಿ ವಿಳಂಬವಾದಷ್ಟೂ ಹೆದ್ದಾರಿ ಅಗಲೀಕರಣ ವಿಳಂಬವಾಗಲಿದೆ. ಒಳಚರಂಡಿ ಸ್ಥಳ ಬದಲಾವಣೆಗೆ ಭೂ ಸ್ವಾಧೀನ ಪ್ರಕ್ರಿಯೆ ಆಗಬೇಕಾಗಿದೆ. ಇದು ಒಂದಕ್ಕೊಂದು ತಳಕು ಹಾಕಿಕೊಂಡಿದ್ದು ಹೆದ್ದಾರಿ ಕಾಮಗಾರಿ ಇನ್ನಷ್ಟು ವಿಳಂಬವಾಗಲಿದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next