ಸಂತೆಮರಹಳ್ಳಿ: ಯಳಂದೂರು ತಾಲೂಕಿನ ಗೌಡಹಳ್ಳಿ ಗ್ರಾಮದಿಂದ ಚಾಮಲಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಯು ಹಲವು ತಿಂಗಳಿಂದಲ್ಲೂ ಆಮೆ ವೇಗದಲ್ಲಿ ಸಾಗಿದೆ. ಇದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ.
ಕೊಳ್ಳೇಗಾಲ ಲೋಕೋಪಯೋಗಿ ಉಪ ವಿಭಾಗ ಇಲಾಖೆ ವ್ಯಾಪ್ತಿಯಲ್ಲಿ ಗೌಡಹಳ್ಳಿ ಗ್ರಾಮದಿಂದ ಚಾಮಲಾಪುರಕ್ಕೆ ಸಂಪರ್ಕ ಕಲ್ಪಿಸುವ 2.ಕಿ.ಮಿ. ರಸ್ತೆ ಇದಾಗಿದೆ. ಗೌಡಹಳ್ಳಿ ಗ್ರಾಮದಲ್ಲಿ 600 ಮೀಟರ್ ಚರಂಡಿ ನಿರ್ಮಾಣ ಹಾಗೂ ಬನ್ನಿಸಾರಿಗೆ ಗ್ರಾಮದಿಂದ ಗೌಡಹಳ್ಳಿ ಗ್ರಾಮಕ್ಕೆ ಸಂಪರ್ಕ 950 ಮೀಟರ್ ರಸ್ತೆ ಅಭಿವೃದ್ಧಿ ಸೇರಿ ಎರಡು ಕಾಮಗಾರಿಗಳಿಂದ ಒಟ್ಟು 2.60 ಕೋಟಿ ರೂ. ಗಳ ಅನುದಾನವನ್ನು ಜಿಲ್ಲಾ ಮುಖ್ಯ ಸುಧಾರಣೆ ಯೋಜನೆಯಲ್ಲಿ ಅನುದಾನ ಬಿಡುಗಡೆಯಾಗಿದೆ.
ಮೇಲೆದ್ದಿವೆ ಜಲ್ಲಿಕಲ್ಲು: ಕಳೆದ ಹಲವು ತಿಂಗಳ ಹಿಂದೆ ಕಾಮಗಾರಿಯನ್ನು ಯಾವುದೇ ಜನಪ್ರತಿನಿಧಿಗಳು ಗುದ್ದಲಿ ಪೂಜೆ ಸಲ್ಲಿಸದೇ ಕಾಮಗಾರಿಯು ನಡೆಯುತ್ತಿದೆ. ಹಳ್ಳಕೊಳ್ಳದಿಂದ ಬಿದ್ದಿದ್ದ ರಸ್ತೆಯಲ್ಲಿ ಸಂಚಾರಕ್ಕೆ ತೊಂದರೆಯಾಗಿತ್ತು. ಈಗ ಕೆಲ ತಿಂಗಳಿಂದ ಕಾಮಗಾರಿ ಶುರುವಾಗಿ ರಸ್ತೆಗೆ ಜಲ್ಲಿ ಸುರಿದು ಮೆಟ್ಲಿಂಗ್ ಮಾಡಲಾಗಿದೆ. ಮೆಟ್ಲಿಂಗ್ ಸಮರ್ಪಕವಾಗಿ ಮಾಡದ ಹಿನ್ನಲೆಯಲ್ಲಿ ಜಲ್ಲಿಕಲ್ಲು ಮೇಲೆದ್ದು ವಾಹನ ಸವಾರರಿಗೆ ತೊಂದರೆಯಾಗುತ್ತಿದೆ.
ರಸ್ತೆ ಕಾಮಗಾರಿ ಸ್ಥಗಿತ: ನಾಲ್ಕು ತಿಂಗಳ ಹಿಂದೆ ಪ್ರಾರಂಭವಾದ ಕಾಮಗಾರಿ ಜಲ್ಲಿ ಹಾಕಿ ವಾಹನ ಸಂಚಾರಕ್ಕೆ ಕಷ್ಟ ಪಡಬೇಕಾಗಿದೆ. ರಸ್ತೆ ಕಾಮಗಾರಿ ಸ್ಥಗಿತಗೊಂಡ ಹಿನ್ನಲೆಯಲ್ಲಿ ಜಲ್ಲಿ ಕಲ್ಲನ್ನು ತುಳಿದುಕೊಂಡು ಸಂಚಾರ ಮಾಡುವಂತಾಗಿದೆ. ಇದರಿಂದ ದಿನ ನಿತ್ಯ ಸಂಚಾರ ಮಾಡುವ ವಾಹನ ಸವಾರರಿಗೆ ತೊಂದರೆಯಾಗುತ್ತಿದ್ದು, ಕಾಮಗಾರಿಯನ್ನು ಕೈಗೆತ್ತಿಕೊಂಡ ನಂತರ ಅದನ್ನು ಸಕಾಲಕ್ಕೆ ಪೂರ್ಣಗೊಳಿಸಬೇಕು. ಕಾಮಗಾರಿ ವಿಳಂಬ ಮಾಡಿದರೆ ಸಾರ್ವಜನಿಕರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತಾಗುತ್ತದೆ. ರಸ್ತೆ ಡಾಂಬರೀಕರಣ ಮಾಡುವವರೆಗಾದರೂ ಮೆಟ್ಲಿಂಗ್‌ಗೆ ನೀರು ಹಾಕಿಸಿ, ರಸ್ತೆಯನ್ನು ಸಮತಟ್ಟು ಮಾಡಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ಸಂಬಂಧಪಟ್ಟ ಇಲಾಖೆಯವರು ಗುತ್ತಿದಾರರಿಗೆ ಸೂಚನೆ ನೀಡಬೇಕು.
ಸವಾರರಿಗೆ ಸಂಕಷ್ಟ: ದೊಡ್ಡ ವಾಹನಗಳು ಸಂಚಾರ ಮಾಡುವಾಗ ಚಕ್ರಗಳಿಗೆ ಕಲ್ಲು ಸಿಲುಕಿ ಸಿಡಿಯುತ್ತಿದೆ. ಸಣ್ಣಪುಟ್ಟ ವಾಹನಗಳ ಸಾವರರು ಹಾಗೂ ಪಾದಚಾರಿಗಳು ಆತಂಕದಿಂದಲೇ ಸಂಚಾರ ಮಾಡುವಂತಾಗಿದೆ. ದ್ವಿಚಕ್ರ ವಾಹನಗಳು ರಸ್ತೆ ಮಧ್ಯೆ ಸಂಚಾರಿಸುವ ಪರಿಸ್ಥಿತಿ ಇಲ್ಲ. ರಸ್ತೆ ಬದಿಯಲ್ಲಿ ಸ್ವಲ್ಪ ಮಾತ್ರ ಜಾಗವಿದೆ, ಅದರಲ್ಲಿಯೂ ಜಲ್ಲಿಕಲ್ಲು ಹರಡಿದೆ. ಸ್ವಲ್ಪ ಯಾಮಾಡಿದರೂ ಬೀಲಬೆಕಾದ ದುಸ್ಥಿತಿ ಉಂಟಾಗಿದೆ. ಈ ರಸ್ತೆಯಲ್ಲಿ ರಾತ್ರಿ ವೇಳೆಯಲ್ಲಿ ಸಂಚಾರ ಮಾಡುವುದು ಮತ್ತಷ್ಟು ಕಷ್ಟದ ಕೆಲಸವಾಗಿದೆ. ಆದ್ದರಿಂದ ಸಂಬಂಧಪಟ್ಟ ಇಲಾಖೆ ಮೆಲಾಧಿಕಾರಿಗಳು ಕೂಡಲೇ ಡಾಂಬರೀಕರಣವನ್ನು ಮುಗಿಸುವ ಮೂಲಕ ಅನುಕೂಲವನ್ನು ಕಲ್ಪಿಸಬೆಕಾಗಿದೆ.
ಗೌಡಹಳ್ಳಿ ಹಾಗೂ ಬನ್ನಿಸಾರಿಗೆ ಗ್ರಾಮಗಳಲ್ಲಿ ಇಲಾಖೆಯಿಂದ ಕೈಗೊಂಡಿರುವ ಕಾಮಗಾರಿಯು ಸ್ಥಗಿತಗೊಂಡಿರುವ ಬಗ್ಗೆ ಗ್ರಾಮಸ್ಥರಿಂದ ದೂರುಗಳು ಕೇಳಿಬಂದಿವೆ. ಈ ಬಗ್ಗೆ ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಚಿಸಿದ್ದು, ಕೂಲಿ ಕಾರ್ಮಿಕರ ಕೊರೆತೆಯಿಂದ ಕೆಲಸವು ವಿಳಂಬವಾಗಿದೆ. ಜೊತೆಗೆ ಮುಂದಿನ 15 ದಿನಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳ್ಳಿಸುವ ನಿಟ್ಟಿನಲ್ಲಿ ಕ್ರಮವಹಿಸುವಂತೆ ಸೂಚಿಸಲಾಗಿದೆ.
-ಸತೀಶ್, ಎಂಜಿನಿಯರ್, ಲೋಕೋಪಯೋಗಿ ಇಲಾಖೆ, ಕೊಳ್ಳೇಗಾಲ ವಿಭಾಗ
* ಫೈರೋಜ್ ಖಾನ್