Advertisement

ಜಿಲ್ಲಾವಾರು ಫಲಿತಾಂಶದಲ್ಲಿ ಕುಸಿತ, ಶೇಕಡಾವಾರು ಏರಿಕೆ

10:33 AM May 01, 2019 | Team Udayavani |

ಮಹಾನಗರ: ವಿದ್ಯಾರ್ಥಿ ಗಳು ಕೆಲವು ದಿನಗಳಿಂದ ಕಾತರದಿಂದ ಕಾಯುತ್ತಿದ್ದ ಎಸೆಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಕಳೆದ ವರ್ಷದ ರ್‍ಯಾಂಕ್‌ಗೆ ಹೋಲಿಸಿದರೆ, ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯು ಶೇ. 86.85 ಫಲಿತಾಂಶದೊಂದಿಗೆ4ನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಕುಸಿದಿದೆ. ಆದರೂ, ಶೇಕಡಾವಾರು ಆಧಾರದಲ್ಲಿ ಶೇ.1.24ರಷ್ಟು ಏರಿಕೆ ಕಂಡಿದ್ದು, ಗುಣಮಟ್ಟದ ಶಿಕ್ಷಣದಲ್ಲಿ 5ನೇ ಸ್ಥಾನ ಪಡೆದಿದೆ.

Advertisement

ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ನಗರದಲ್ಲಿ ವಿದ್ಯಾರ್ಥಿಗಳು ಸೈಬರ್‌ ಅಂಗಡಿಗಳಲ್ಲಿ ನಿಂತು ಫಲಿತಾಂಶ ವೀಕ್ಷಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಇನ್ನು, ಕೆಲ ಮಂದಿ ಮೊಬೈಲ್ನಲ್ಲೇ ಫಲಿತಾಂಶ ವೀಕ್ಷಿಸಿ, ಸ್ನೇಹಿತರೊಂದಿಗೆ ಪರಸ್ಪರ ಶುಭಾಶಯ ವಿನಮಯ ಮಾಡಿಕೊಂಡರು. ಮನೆ ಮಂದಿ ಸಿಹಿ ಹಂಚಿ ಸಂಭ್ರಮಿಸಿದರು. ಪೋಷಕರು ಕೂಡ ತಮ್ಮ ಮಕ್ಕಳು ಗಳಿಸಿದ ಅಂಕಕ್ಕೆ ಅನುಗುಣವಾಗಿ ಕಾಲೇಜು ಸೇರ್ಪಡೆ, ವಿಷಯ ಆಯ್ಕೆಯ ಬಗ್ಗೆ ಲೆಕ್ಕಾಚಾರ ಹಾಕಲು ಪ್ರಾರಂಭಿಸಿದ್ದಾರೆ.

ಈ ಬಾರಿಯ ಎಸೆಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಅಗ್ರ ಎರಡು ಸ್ಥಾನದಲ್ಲಿ ಮಂಗಳೂರು ನಗರದಲ್ಲಿ ಕಲಿಯುತ್ತಿರುವ ಯಾವುದೇ ವಿದ್ಯಾರ್ಥಿಗಳು ಇಲ್ಲ. ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಸಿಂಚನಾ ಲಕ್ಷ್ಮೀ, ಸುಬ್ರಹ್ಮಣ್ಯದ ಕುಮಾರಸ್ವಾಮಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಕೃಪಾ ಕೆ.ಆರ್‌., ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾಮಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಅನುಪಮ ಕಾಮತ್‌ ಮತ್ತು ವಿಟ್ಲದ ವಿಜಯ ಪ್ರೌಢ ಶಾಲೆಯ ಚಿನ್ಮಯಿ 624 ಅಂಕಗಳಿಗೆ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದಾರೆ.

ದ.ಕ. ಜಿಲ್ಲೆಯಲ್ಲಿ 95 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 27,564 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 23,940 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 3,624 ಮಂದಿ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ 86.85 ಫಲಿತಾಂಶ ಪಡೆದಿದೆ. ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಲು ವಿದ್ಯಾರ್ಥಿ ಸ್ನೇಹಿ ಪರೀಕ್ಷಾ ಕೇಂದ್ರಗಳನ್ನು ವ್ಯವಸ್ಥೆ ಮಾಡಲಾಗಿತ್ತು.

ಬೆಳ್ತಂಗಡಿ ತಾಲೂಕು ಪ್ರಥಮ
ಈ ಬಾರಿಯ ಎಸೆಸೆಲ್ಸಿ ಫಲಿತಾಂಶದಲ್ಲಿ ಬೆಳ್ತಂಗಡಿ ತಾಲೂಕು ಶೇ. 91.64 ಫಲಿತಾಂಶದೊಂದಿಗೆ ಪ್ರಥಮ ಸ್ಥಾನ ಪಡೆದಿದ್ದು, ಎರಡನೇ ಸ್ಥಾನವನ್ನು ಮೂಡುಬಿದಿರೆ ಪಡೆದಿದೆ. ಕಳೆದ ಬಾರಿ ಮೂಡುಬಿದಿರೆ ಪ್ರಥಮ ಸ್ಥಾನ ಪಡೆದು ಬೆಳ್ತಂಗಡಿ ಎರಡನೇ ಸ್ಥಾನ ಪಡೆದಿತ್ತು.

Advertisement

ಫೇಲ್ ಆದವರಿಗೂ ಅವಕಾಶವಿದೆ
ಪರೀಕ್ಷೆಯಲ್ಲಿ ಫೇಲ್ ಆಗಿದ್ದೇನೆ ಎಂದು ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಬೇಡಿ. ಏಕೆಂದರೆ, ಫೇಲ್ ಆದವರಿಗೂ ಭವಿಷ್ಯವಿದೆ ಎನ್ನುವುದನ್ನು ಮರೆಯಬಾರದು. ಸದ್ಯದಲ್ಲಿ ಪೂರಕ ಪರೀಕ್ಷೆ ಇರಲಿದ್ದು, ಚೆನ್ನಾಗಿ ಕಲಿತು ಉತ್ತೀರ್ಣರಾಗಬಹುದು. ಪೋಷಕರು ಕೂಡ ತಮ್ಮ ಮಕ್ಕಳು ಕಡಿಮೆ ಅಂಕ ಗಳಿಸಿದ್ದಾರೆ ಅಥವಾ ಅನುತ್ತೀರ್ಣಗೊಂಡಿದ್ದಾರೆಂದು ತನ್ನ ಆಕ್ರೋಶವನ್ನು ಮಕ್ಕಳ ಎದುರು ಹೊರ ಹಾಕಬೇಡಿ. ಅಲ್ಲದೆ, ಅವರಿವರ ಜತೆ ಹೋಲಿಕೆ ಮಾಡುವುದು ಕೂಡ ಸರಿಯಲ್ಲ. ಇದರಿಂದ ವಿದ್ಯಾರ್ಥಿಗಳ ಆತ್ಮವಿಶ್ವಾಸ ಕುಗ್ಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next