Advertisement

ಬರ ಸ್ಥಿತಿ ಅರಿಯಲು ಜಿಲ್ಲಾ ಪ್ರವಾಸ

03:26 PM Aug 15, 2017 | Team Udayavani |

ಚಿಕ್ಕಮಗಳೂರು: ಜಿಲ್ಲೆಯಲ್ಲಿ ತಲೆದೋರಿರುವ ಬರ ಪರಿಸ್ಥಿತಿ ಅವಲೋಕಿಸಲು ಆ.20ರ ನಂತರ ಜಿಲ್ಲಾದ್ಯಂತ ಪ್ರವಾಸ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ನಗರಾಭಿವೃದ್ಧಿ ಮತ್ತು ಹಜ್‌ ಖಾತೆ ಸಚಿವ ಆರ್‌.ರೋಷನ್‌ ಬೇಗ್‌ ಹೇಳಿದರು.

Advertisement

ಸೋಮವಾರ ನಗರಕ್ಕೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಪಂಚನಹಳ್ಳಿ ಗೋಶಾಲೆಯನ್ನು ಪುನರಾರಂಭಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಮಾತನಾಡುವುದಾಗಿ ತಿಳಿಸಿದರು. ನಗರದಲ್ಲಿ ಒಳಚರಂಡಿ ಕಾಮಗಾರಿ ಅತ್ಯಂತ ವಿಳಂಬದಿಂದ ನಡೆಯುತ್ತಿರುವುದು ಹಾಗೂ ಆ ವ್ಯವಸ್ಥೆ ಅವೈಜ್ಞಾನಿಕವಾಗಿದೆ ಎಂಬುದನ್ನು ಸುದ್ದಿಗಾರರು ಗಮನಕ್ಕೆ ತಂದಾಗ, ಒಂದು ದಿನ ಈ ಎಲ್ಲಾ ಕಾಮಗಾರಿಗಳನ್ನು ಹಾಗೂ ನಗರದ ಸಮಸ್ಯೆಗಳನ್ನು ಸ್ವತಃ ಪರಿಶೀಲಿಸುವುದಾಗಿ ಭರವಸೆ ನೀಡಿದರು. 

ಜಿಲ್ಲೆಯ ಸರ್ಕಾರಿ ಕಚೇರಿಗಳಲ್ಲಿ ಅನೇಕ ಹುದ್ದೆಗಳು ಖಾಲಿ ಇವೆ. ಜಿಲ್ಲಾ ಉಸ್ತುವಾರಿ ಹೊಣೆ ಒತ್ತು ಇಲ್ಲಿಗೆ ಬಂದ ದಿನವೇ ಅವುಗಳನ್ನು ಭರ್ತಿ ಮಾಡುವ ಭರವಸೆ ನೀಡಿದ್ದು ನೆನಪಿದೆ. ಈಗಾಗಲೇ ಮುಖ್ಯಮಂತ್ರಿಗಳೊಡನೆ, ರಾಜ್ಯದ ಮುಖ್ಯ ಕಾರ್ಯದರ್ಶಿಗಳೊಡನೆ ಹಾಗೂ ಮುಖಮಂತ್ರಿಗಳ ಪ್ರಧಾನ ಕಾರ್ಯದರ್ಶಿಗಳೊಡನೆ ಚರ್ಚಿಸಲಾಗಿದೆ. ಆದಷ್ಟು ಬೇಗ ಖಾಲಿ ಹುದ್ದೆಗಳನ್ನು ತುಂಬಲಾಗುವುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಒಳಚರಂಡಿ ಕಾಮಗಾರಿ ಅವೈಜ್ಞಾನಿಕ ಹಾಗೂ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಆಡಳಿತ ನಿರ್ದೇಶಕರಿಗೆ ತನಿಖೆ ಮಾಡಲು ಸೂಚಿಸಿದ್ದು, ಅವರು ಮುಂದಾಗಿದ್ದಾರೆ. ಒಳಚರಂಡಿ ವ್ಯವಸ್ಥೆ ಸರಿಯಿಲ್ಲದಿದ್ದರೆ
ಡೆಂಘೀ ಮತ್ತು ಮಲೇರಿಯಾ ನಿಯಂತ್ರಣ ಸಾಧ್ಯವಿಲ್ಲ ಎಂದರು.  

ಸರ್ಕಾರದ ತಪ್ಪು: ಅತ್ಯಂತ ಗಂಭೀರ ಆರೋಪ ಎದುರಿಸುತ್ತಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ನಾಗೇಶ್‌ ಅವರನ್ನು ಅಮಾನತು ಮಾಡದೆ ಡಯಟ್‌ ಪ್ರಾಂಶುಪಾಲರಾಗಿ ವರ್ಗಾಯಿಸಿರುವ ಕುರಿತು ಪ್ರತಿಕ್ರಿಯಿಸಿದ ಸಚಿವರು, ಉಪನಿರ್ದೇಶಕರನ್ನು ಅಮಾನತು ಪಡಿಸಿ ತನಿಖೆ ನಡೆಸುವಂತೆ ತಾವು ಹೇಳಿದ್ದರೂ ಅವರನ್ನು ವರ್ಗಾವಣೆ ಮಾಡಲಾಗಿದೆ. ಇದು ಸರ್ಕಾರದ ತಪ್ಪು ನಡೆ ಎಂದರು.

Advertisement

ಜಿಲ್ಲಾ ಪಂಚಾಯತ್‌ ಸಿಇಒ ಅವರನ್ನು ವರ್ಗಾವಣೆ ಮಾಡಲಾಗಿದೆ. ಅವರ ಸ್ಥಳಕ್ಕೆ ಬೇರೆಯವರನ್ನು ನೇಮಿಸಿಲ್ಲ. ಈಗ ಜಿಲ್ಲಾಧಿಕಾರಿಗಳ ವರ್ಗಾವಣೆಯೂ ಆಗಲಿದೆ ಎಂಬ ಸುದ್ದಿ ಹರಿದಾಡುತ್ತಿರುವ ಕುರಿತು ಪ್ರತಿಕ್ರಿಯಿಸಿದ ಸಚಿವರು, ಸಿಇಒ ಸ್ಥಾನಕ್ಕೆ ಶೀಘ್ರದಲ್ಲಿಯೇ ಬೇರೆಯವರನ್ನು ನೇಮಿಸಲಾಗುವುದು. ಐಎಎಸ್‌, ಐಪಿಎಸ್‌ ಅಧಿಕಾರಿಗಳ ವರ್ಗಾವಣೆಯನ್ನು ಮುಖ್ಯಮಂತ್ರಿಗಳು ಮಾಡುತ್ತಾರೆ. ಅಗತ್ಯವಿದ್ದಾಗ ವರ್ಗಾವಣೆ
ಮಾಡಲೇಬೇಕಾಗುತ್ತದೆ ಎಂದರು. ಎ.ಎನ್‌.ಮಹೇಶ್‌, ಎ.ವಿ.ಗಾಯತ್ರಿಶಾಂತೇಗೌಡ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next