Advertisement

ಜಿಲ್ಲಾ ಸ್ವೀಪ್‌ ಸಮಿತಿ ಸ್ಪಂದನೆ ಅನುಕರಣೀಯ

02:35 PM Apr 21, 2022 | Shwetha M |

ವಿಜಯಪುರ: ಭಾರತೀಯ ಚುನಾವಣಾ ಆಯೋಗ ರಾಷ್ಟ್ರಾದ್ಯಂತ ಈಚೆಗೆ ಮತದಾರರ ದಿನಾಚರಣೆ ಪ್ರಯುಕ್ತ ಮತದಾರರ ಜಾಗೃತಿ ಸ್ಪರ್ಧೆ ಹಮ್ಮಿಕೊಂಡಿತ್ತು. ಇದರಲ್ಲಿನ ವಿವಿಧ ಸ್ಪರ್ಧೆಗಳಲ್ಲಿ ಪ್ರತ್ಯಕ್ಷ-ಪರೋಕ್ಷವಾಗಿ ಸ್ವೀಪ್‌ ಚಟುವಟಿಕೆಗಳಿಗೆ ನಿರಂತರವಾಗಿ ಸ್ಪಂದಿಸುತ್ತಿರುವ ಜಿಲ್ಲೆಯ ಸಮುದಾಯದ ಧನಾತ್ಮಕ ಪಾಲ್ಗೊಳ್ಳುವಿಕೆ ಶ್ಲಾಘನೀಯ ಎಂದು ಜಿಪಂ ಸಿಇಒ ರಾಹುಲ ಶಿಂಧೆ ಬಣ್ಣಿಸಿದರು.

Advertisement

ಜಿಪಂ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಸ್ವೀಪ್‌ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಈ ಕಾರ್ಯದಲ್ಲಿ ಜಿಲ್ಲೆಯ ಅಧಿಕಾರಿ-ಸಿಬ್ಬಂದಿ, ಸರ್ಕಾರೇತರ ಸಂಘ-ಸಂಸ್ಥೆಗಳ ಮತ್ತು ಸಮುದಾಯದ ಧನಾತ್ಮಕ ಭಾಗವಹಿಸುವಿಕೆ ಅನುಕರಣೀಯ ಎಂದರು.

ಕರ್ನಾಟಕ ಚುನಾವಣಾ ಆಯೋಗದ ರಾಜ್ಯ ಸ್ವೀಪ್‌ ನೋಡಲ್‌ ಅಧಿಕಾರಿ ಪಿ.ಎಸ್‌. ವಸ್ತ್ರದ ಮಾತನಾಡಿ, ಸದರಿ ಘಟಕಗಳ ಪರಿಣಾಮಕತೆ ಕುರಿತು ರಾಜ್ಯಮಟ್ಟದಲ್ಲಿ ನಡೆದಿರುವ ವೈಜ್ಞಾನಿಕ ಸಮೀಕ್ಷೆ ಮತ್ತು ಸಂಶೋದನೆಗಳ ಪ್ರಮುಖ ಅಂಶಗಳನ್ನು ಉಲ್ಲೇಖೀಸುತ್ತಾ ಭವಿಷ್ಯದ ದಿನಗಳಲ್ಲಿ ಸದರಿ ಘಟಕಗಳು ಯಾವ ನಿಟ್ಟಿನಲ್ಲಿ ಇನ್ನೂ ಹೆಚ್ಚು ಕ್ರಿಯಾಶೀಲವಾಗಬೇಕು ಎಂದು ಸಲಹೆ ನೀಡಿದರು.

ವಿಶೇಷವಾಗಿ ನವ ಮತದಾರರು, ಮಹಿಳೆಯರು, ಮುಖ್ಯವಾಹಿನಿಯಿಂದ ದೂರವಿರುವ ಅಲೆಮಾರಿ ಜನಾಂಗದವರು, ದಿವ್ಯಾಂಗರು ಮತ್ತು ಹಿರಿಯ ನಾಗರಿಕರು ಮತದಾನ ಪ್ರಕ್ರಿಯೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸುವಂತೆ ರಚನಾತ್ಮಕ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳುವಂತೆ ಮಾರ್ಗದರ್ಶನ ನೀಡಿದರು.

ಭಾರತಿಯ ಚುನಾವಣಾ ಆಯೋಗ ಮತ್ತು ಕರ್ನಾಟಕ ಚುನಾವಣಾ ಆಯೋಗಗಳು ಕಾಲ ಕಾಲಕ್ಕೆ ಬಿಡುಗಡೆ ಮಾಡಿರುವ ತಾಂತ್ರಿಕ ಸೌಲಭ್ಯಗಳನ್ನು ಎಲ್ಲ ವಯೋಮಾನದ ಅರ್ಹ ಮತದಾರರು ವ್ಯಾಪಕವಾಗಿ ಬಳಕೆ ಮಾಡಿಕೊಳ್ಳುವಂತೆ ಮತ್ತು ಇನ್ನಷ್ಟು ಹೆಚ್ಚು ಮುತುವರ್ಜಿ ವಹಿಸುವಂತೆ ಸೂಚಿಸಿದರು.

Advertisement

ಸ್ವೀಪ್‌ ಕಾರ್ಯಕ್ರಮದಡಿ ಸಂಬಂಧಿಸಿದ ಘಟಕಗಳು, ಸಂಚಾಲನಾ ಸಮಿತಿಗಳು ಮತ್ತು ಕಾರ್ಯಪಡೆಗಳು ಪ್ರತಿಯೊಬ್ಬ ಮತದಾರರು ಅತ್ಯಗತ್ಯವಾಗಿ ಗಮನಿಸಬೇಕಾದ ಸಂಗತಿಗಳಾದ ಮತದಾರರ ಪಟ್ಟಿಯಲ್ಲಿನ ಅವರವರ ಹೆಸರುಗಳ ಸರಿಯಾದ ನಮೂದು, ಕಾಲ ಕಾಲಕ್ಕೆ ಘಟಿಸುವ ಚುನಾವಣೆಗಳ ಮತದಾನದ ದಿನಾಂಕ, ಸಮಯ, ಮತದಾನ ಕೇಂದ್ರಕ್ಕೆ ಅತ್ಯಗತ್ಯವಾಗಿ ಕೊಂಡೊಯ್ಯಬೇಕಾದ ಗುರುತಿನ ಚೀಟಿಗಳ ಮಹತ್ವದ ಕುರಿತು ವಿವರಿಸಿದರು.

ಚುನಾವಣೆ ಪ್ರಕ್ರಿಯ ಪಾವಿತ್ರ್ಯ ಪಾಲನೆ ಕುರಿತು ಜನ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ಹೆಚ್ಚು ಪ್ರಮಾಣದಲ್ಲಿ ಹಮ್ಮಿಕೊಳ್ಳುವಂತೆ ಸೂಚಿಸಿದರು.

ಭಾರತ ಚುನಾವಣಾ ಆಯೋಗದ ಮತದಾರರ ಜಾಗೃತಿ ಸ್ಪರ್ಧೆ ಕುರಿತು, ಜಿಲ್ಲೆಯಲ್ಲಿ ಹಮ್ಮಿಕೊಂಡ ರಸಪ್ರಶ್ನೆ ಸ್ಪರ್ಧೆ, ಘೋಷವಾಕ್ಯ ಬರೆಯುವ ಸ್ಪರ್ಧೆ, ಗಾಯನ ಸ್ಪರ್ಧೆ, ವಿಡಿಯೊ ತಯಾರಿಕೆ ಸ್ಪರ್ಧೆ ಮತ್ತು ಭಿತ್ತಿಚಿತ್ರ ವಿನ್ಯಾಸ ಸ್ಪರ್ಧೆ ಕಾರ್ಯಚಟುವಟಿಕೆಗಳ ಬಗ್ಗೆ ಪಿಪಿಟಿ ಮೂಲಕ ಜಿಲ್ಲಾ ಪ್ರಗತಿಯನ್ನು ಪ್ರಸ್ತುತ ಪಡಿಸಲಾಯಿತು.

ತಹಶೀಲ್ದಾರ್‌ ಬೋಸಗಿ, ಡಿಡಿಪಿಐ ಎನ್‌.ವಿ. ಹೊಸೂರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ| ಎಸ್‌.ಎಸ್‌. ರಾಜಮಾನೆ, ಜಿಪಂ ಯೋಜನಾ ಅಂದಾಜು ಮತ್ತು ಮೌಲ್ಯಮಾಪನಾಧಿಕಾರಿ ಎ.ಬಿ. ಅಲ್ಲಾಪೂರ, ಡಾ| ಅಶೋಕ ಲಿಮಕರ್‌ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next