ಹಾವೇರಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನ ದರೋಡೆ ಮಾಡುತ್ತಿದ್ದ ಅಂತಾರಾಜ್ಯ ಇಬ್ಬರು ಕುಖ್ಯಾತ ದರೋಡೆಕೋರರನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ 39.52 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಎಸ್ಪಿ ಕೆ. ಪರಶುರಾಮ ಶುಕ್ರವಾರ ಶಹರಠಾಣೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮಧ್ಯಪ್ರದೇಶದ ಹಾಟ್‌ಪಿಪ್ಲಿಯಾ ತಾಲೂಕು ಮಹುಖೇಡಾದ ಸಂತೋಷ ಡೋಡಿಯಾ ಹಾಗೂ ಇದೇ ತಾಲೂಕಿನ ನೆವರಿಯ ನೂರಅಲಿ ಎಂಬುವರನ್ನು ಜಿಲ್ಲೆಯ ಪೊಲೀಸರು ಮಧ್ಯಪ್ರದೇಶ ರಾಜ್ಯದ ಉಜ್ಜನಿ ಜಿಲ್ಲೆಯ ಚಿಕ್ಕಲ್ಲಿ ಎಂಬಲ್ಲಿ ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಬಂಧಿತರಿಂದ 24 ಸೋನಿ ಕಂಪನಿಯ ಟಿವಿಗಳು, ಸ್ಯಾಮಸಂಗ್ ಕಂಪನಿ ಎರಡು ಹಾಗೂ ಶಾರ್ಪ್ ಕಂಪನಿಯ ಒಂದು ಟಿವಿ, 202 ಹೆಡ್‌ಫೋನ್, ರೇಡಿಮೆಡ್ ಅಂಗಿಗಳ 147 ಪೆಟ್ಟಿಗೆ, ದರೊಡೆಗೆ ಬಳಿಸಿದ ಒಂದು ಲಾರಿ, ಎರಡು ಬೈಕ್ ಸೇರಿ ಒಟ್ಟು 39,52,900 ರೂ. ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ದರೋಡೆ ನಡೆಸುವ ಎಂಟು ಜನರ ತಂಡ ಇದಾಗಿದ್ದು, ಇವರಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದು ಉಳಿದವರ ಪತ್ತೆಗಾಗಿ ಜಾಲ ಬೀಸಿದ್ದಾರೆ. ದರೋಡೆ ವೈಖರಿ: ಈ ದರೋಡೆಕೋರರು ಎರಡು ಬೈಕ್ ಹಾಗೂ ಒಂದು ಲಾರಿಯೊಂದಿಗೆ ರಾಷ್ಟೀಯ ಹೆದ್ದಾರಿಗೆ ಬರುತ್ತಾರೆ. ಒಂಟಿ ವಾಹನಗಳನ್ನು ಗುರುತಿಸಿ ಅವುಗಳ ಹಿಂದೆ ಇಬ್ಬರು ಬೈಕ್‌ನಲ್ಲಿ ಬಂದು ಮೊದಲು ಲಾರಿಯ ಹಿಂಬದಿಯ ಕೀಲಿ ಮುರಿದು ಒಬ್ಬನು ಒಳಗೆ ಹೋಗುತ್ತಾನೆ. ಇನ್ನುಳಿದವರು ಅವನು ಅಲ್ಲಿಂದ ಕೊಡುವ ವಸ್ತುಗಳನ್ನು ಹಿಂಬದಿ ಬರುವ ತಮ್ಮ ಲಾರಿಯಲ್ಲಿ ಹಾಕಿಕೊಳ್ಳುತ್ತ ಬರುತ್ತಾರೆ. ಹೀಗೆ ಕಳ್ಳತನ ಮಾಡಿದ ವಸ್ತುಗಳನ್ನು ಅವರು ಮಧ್ಯಪ್ರದೇಶ ರಾಜ್ಯದ ಉಜ್ಜನಿ ಜಿಲ್ಲೆಯ ಭರತ ಎಂಬುವರಿಗೆ ಮಾರುತ್ತಿದ್ದರು.
ಜಿಲ್ಲೆಯ ಪ್ರಕರಣ: ಮುಂಬೈನ ಸೈಯದ್ ರಫೀಕ್ ಎಂಬುವರು ಕಂಟೇನರ್ ಲಾರಿಯಲ್ಲಿ ಟಿವಿ ಸೇರಿದಂತೆ ವಿವಿಧ ನಮೂನೆಯ ಎಲೆಕ್ಟ್ರಾನಿಕ್ ವಸ್ತುಗಳನ್ನು ಚೆನ್ನೈನಿಂದ ತುಂಬಿಕೊಂಡು ಮುಂಬೈಗೆ ಒಯ್ಯುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಚಳಗೇರಿಯಿಂದ ಬಂಕಾಪುರ ಚೆಕ್‌ಪೋಸ್ಟ್ ನಡುವೆ ವಸ್ತುಗಳು ಕಳ್ಳತನ ಆಗಿರುವ ಬಗ್ಗೆ ಚೆಕ್‌ಪೋಸ್ಟ್‌ಗಳ ಕ್ಯಾಮರಾ ಆಧರಿಸಿ ಬಂಕಾಪುರ ಪೊಲೀಸ್ ಠಾಣೆಯಲ್ಲಿ ಏ. 1ರಂದು ದೂರು ದಾಖಲಿಸಿದ್ದರು.
ಈ ಪ್ರಕರಣದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಮ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅಣ್ಣಪ್ಪ ನಾಯಕ ಆದೇಶದಂತೆ ಶಿಗ್ಗಾವಿ ಪೊಲೀಸ್ ಉಪಾಧೀಕ್ಷಕ ಎಲ್.ವೈ. ಶಿರಕೋಳ ನೇತೃತ್ವದಲ್ಲಿ ಪತ್ತೆಗಾಗಿ ಆರ್.ಎಫ್. ದೇಸಾಯಿ ನೇತೃತ್ವದಲ್ಲಿ ರಚಿಸಿದ ವಿಶೇಷ ತನಿಖಾ ದಳ ರಚಿಸಲಾಗಿತ್ತು. ಬಂಕಾಪುರ ಪೊಲೀಸ್ ಉಪನಿರೀಕ್ಷಕ ಸಂತೋಷ ಪಾಟೀಲ ಹಾಗೂ ಸಿಬ್ಬಂದಿ ಖಚಿತ ಮಾಹಿತಿ ಆಧರಿಸಿ ಮಧ್ಯಪ್ರದೇಶಕ್ಕೆ ಹೋಗಿ ಇಬ್ಬರು ದರೋಡೆಕೋರರು ಹಾಗೂ ದರೋಡೆ ಮಾಡಿದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಜಿಲ್ಲೆಯ ರಾಣಿಬೆನ್ನೂರು, ಹಾವೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲೂ ಇಂತಹದೇ ತಲಾ ಎರಡು ಪ್ರಕರಣಗಳು ದಾಖಲಾಗಿದ್ದು, ಈ ಪ್ರಕರಣಗಳಲ್ಲಿಯೂ ಸಹ ಇದೇ ದರೋಡೆಕೋರರು ಭಾಗಿಯಾಗಿದ್ದಾರೆ ಎಂದು ಎಸ್ಪಿ ಕೆ. ಪರಶುರಾಮ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಅಣ್ಣಪ್ಪ, ಡಿವೈಎಸ್‌ಪಿ ಎಲ್.ವೈ. ಶಿರಕೋಳ, ಸಿಪಿಐ ಆರ್.ಎಫ್. ದೇಸಾಯಿ, ಬಂಕಾಪುರ ಪಿಎಸ್‌ಐ ಸಂತೋಷ ಪಾಟೀಲ ಇದ್ದರು.