Advertisement

ನಾಶನಷ್ಟ ಎದುರಿಸಲು ಜಿಲ್ಲೆ ಸರ್ವ ಸಜ್ಜು : ಜಿಲ್ಲಾಧಿಕಾರಿ

11:07 PM Jul 21, 2019 | Team Udayavani |

ಕಾಸರಗೋಡು: ಬಿರುಸಿನ ಗಾಳಿಮಳೆಯಿಂದ ಉಂಟಾಗಬಹುದಾದ ನಾಶನಷ್ಟ ಎದುರಿಸಲು ಜಿಲ್ಲೆ ಸರ್ವಸಿದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್‌ ಬಾಬು ತಿಳಿಸಿದರು.

Advertisement

ಜಿಲ್ಲಾ ದುರಂತ ನಿವಾರಣೆ ಪ್ರಾಧಿಕಾರ ಮೂಲಕ ಸಾರ್ವಜನಿಕರಿಗೆ, ಸಂಬಂಧಪಟ್ಟ ಇಲಾಖೆಗಳಿಗೆ ಸಂದರ್ಭೋಚಿತವಾಗಿ ಮಾಹಿತಿಗಳನ್ನು ನೀಡಿದ್ದು, ಸುರಿದ ಬಿರುಸಿನ ಗಾಳಿಮಳೆಯ ಸೂಚನೆಯನ್ನು ಮುಂಚಿತವಾಗಿ ಅರಿತುಕೊಳ್ಳಲು, ಸಂಭವಿಸಬಹುದಾಗಿದ್ದ ದೊಡ್ಡ ನಾಶನಷ್ಟಗಳನ್ನು ನಿಯಂತ್ರಿಸಲು ಸಾಧ್ಯವಾಗಿದೆ. ಕಂದಾಯ, ಪೊಲೀಸ್‌, ಮೀನುಗಾರಿಕೆ,ಅಗ್ನಿಶಾಮಕದಳ, ಕರಾವಳಿ ಪೊಲೀಸ್‌ ಇತ್ಯಾದಿ ದಳಗಳು ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಾಗಿದೆ ಎಂದವರು ತಿಳಿಸಿದರು.

ಮಧೂರು ಪಟ್ಲ ಪ್ರದೇಶದಲ್ಲಿ ಸಂಭವಿಸಿದ ಜಲಾವೃತದಿಂದ 33 ಕುಟುಂಬಗಳನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗಿದೆ ಎಂದರು.

ಇವರಲ್ಲಿ 40 ದಿನ ವಯೋಮಾನದ ಶಿಶು, ತಾಯಿ ಸಹಿತ ಮಂದಿಯನ್ನು ಅಗ್ನಿಶಾಮಕದಳದ ಸಹಾಯದಿಂದ ರಕ್ಷಿಸಲಾಗಿದೆ. ಪರಪ್ಪ ಗ್ರಾಮದ ಮುಂಡತ್ತಡ್ಕ ಪ್ರದೇಶದ ಕುಟುಂಬವೊಂದನ್ನು ಈ ರೀತಿ ರಕ್ಷಿಸಲಾಗಿದೆ. ಕಾಂಞಂಗಾಡ್‌ ಅರಯಿ ಸೇತುವೆ ಬಳಿ ವಾಸವಾಗಿರುವ 13 ಮಂದಿಯನ್ನು ಸಂರಕ್ಷಿಸಲಾಗಿದೆ ಎಂದವರು ತಿಳಿಸಿದರು.

ಮಳೆಯ ಹಿನ್ನೆಲೆಯಲ್ಲಿ ಕರ್ಗಲ್ಲ ಕೋರೆಗಳ ಚಟುವಟಿಕೆ ನಿಲುಗಡೆ ಮಾಡುವಂತೆ ಆದೇಶ ನೀಡಲಾಗಿದೆ. ನೀರು ತುಂಬುವ ಕರ್ಗಲ್ಲ ಕೋರೆಗಳ ಸುತ್ತು ಸುರಕ್ಷೆ ಸೌಲಭ್ಯ ಏರ್ಪಡಿಸಬೇಕು ಎಂದರು.

Advertisement

ಶಿಕ್ಷಣಾಲಯಗಳ ಬಳಿಯಿರುವ ಕರ್ಗಲ್ಲ ಕೋರೆಗಳ ಬಗ್ಗೆ ಅತೀವ ಜಾಗ್ರತೆ ಪಾಲಿಸುವಂತೆ ಜಿಯಾಲಜಿಸ್ಟ್‌ ಮತ್ತು ಶಿಕ್ಷಣ ಇಲಾಖೆಗೆ ವಿಶೇಷ ಆದೇಶ ನೀಡಲಾಗಿದೆ. ಕಡಲ್ಕೊರೆತ ಎದುರಿಸುವ ನಿಟ್ಟಿನಲ್ಲಿ ಜಿಯೋ ಬ್ಯಾಗ್‌ ಬಳಸುವಂತೆ ನೀರಾವರಿ ಇಲಾಖೆಗೆ ಆದೇಶ ನೀಡಲಾಗಿದೆ. ಜಿಲ್ಲೆಯಲ್ಲಿ ಜು.23 ವರೆಗೆ ಬಿರುಸಿನ ಮಳೆ ಸುರಿಯಲಿದೆ ಎಂದು ಹವಾಮಾನ ವರದಿ ತಿಳಿಸಿದೆ ಎಂದವರು ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next