ಚಿಂತಾಮಣಿ: ಹಲವು ವರ್ಷಗಳಿಂದ ಮಳೆ ಇಲ್ಲದೆ ನರಳಾಡುತ್ತಿದ್ದ ತಾಲೂಕಿನ ಜನತೆಗೆ ಕಳೆದ ಒಂದು ವಾರದಿಂದ ಎಡಬಿಡದೆ ಸುರಿಯುತ್ತಿರುವ ಮಳೆರಾಯ ಒಂದೇ ಬಾರಿಗೆ ಸಂಕಟ ಮತ್ತು ಸಂತಸ ಎರಡೂ ಒಮ್ಮೆಯೇ ನೀಡಿದಂತಾಗಿದೆ.
ಹಲವು ವರ್ಷಗಳಿಂದ ಸಮರ್ಪಕವಾಗಿ ಮಳೆಯಾಗದೆ ಸಮಯಕ್ಕೆ ಸರಿಯಾಗಿ ಬೆಳೆಯಾಗದೆ ಜನ ತತ್ತರಿಸಿದ್ದರು. ಆದರೆ ಪ್ರಸ್ತುತ ಕಳೆದ ವಾರದಿಂದ ತಾಲೂಕು ಸೇರಿ ರಾಜ್ಯಾದ್ಯಂತ ಸುರಿಯುತ್ತಿರುವ ಮಳೆಗೆ ತಾಲೂಕಿನ ಹತ್ತಾರು ಕೆರೆಗಳು ತುಂಬಿ ಕೋಡಿ ಹರಿದು ಬೆಳೆಗಳಿಗೆ ಅನುಕೂಲವಾದರೆ, ಇನ್ನು ಕೆಲ ಕಡೆ ನೀರು ಹರಿಯುವ ರಭಸಕ್ಕೆ ಗ್ರಾಮಗಳ ಸಂಪರ್ಕ ರಸ್ತೆಗಳು, ಸೇತುವೆಗಳು ಕಡಿದು ಸಂಚಾರಕ್ಕೆ ತೊಂದರೆಯಾಗಿ ಜನ ನರಳಾಡುವಂತಾಗಿದೆ.
ತುಂಬಿ ತುಳುಕಿದ ನದಿಗಳು: ಹಲವು ವರ್ಷಗಳಿಂದ ಬತ್ತಿ ಹೋಗಿದ್ದ ತಾಲೂಕಿನಲ್ಲಿ ಹಾದು ಹೋಗುವ ಪಾಪಾಗ್ನಿ, ಕುಶಾವತಿ ನದಿಗಳು ಮಂಗಳವಾರ ರಾತ್ರಿ ಸುರಿದ ಭಾರೀ ಮಳೆಗೆ ತುಂಬಿ ಹರಿಯುತ್ತಿವೆ. ಮುಂಗಾನಹಳ್ಳಿ, ಚಿಲಕಲನೇರ್ಪು ಹೋಬಳಿಗಳಲ್ಲಿ ಸೇತುವೆಗಳು ಕಡಿದು ಕೊಚ್ಚಿ ಹೋಗಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ. ಅಷ್ಟೇ ಅಲ್ಲದೆ ನದಿಗಳ ಪಕ್ಕದ ಹಲವಾರು ಎಕರೆ ಜಮೀನುಗಳಲ್ಲಿ ಬೆಳೆದ ವಿವಿಧ ಬೆಳೆಗಳು ಭೂ ಸಮೇತ ಕೊಚ್ಚಿ ಹೋಗಿ ರೈತರು ಪರದಾಡುವಂತಾಗಿದೆ.
ಇದನ್ನೂ ಓದಿ;- ಚನ್ನಮ್ಮ ವಿವಿ ಸ್ನಾತಕೋತ್ತರ ಕೇಂದ್ರಕಗ್ಕೆ ಭೂಮಿ ಕೊಡಿ
ಧಾರಾಕಾರ ಮಳೆಗೆ ಕಡಿದ ರಸ್ತೆಗಳು: ಪಾಪಾಗ್ನಿ ನದಿ ಹರಿಯುವ ರಭಸಕ್ಕೆ ಚಿಂತಾಮಣಿಯಿಂದ ಕೋರ‌್ಲ ಪರ್ತಿ ಗ್ರಾಮಕ್ಕೆ ಸಾಗುವ ರಸ್ತೆಯಲ್ಲಿ ಬರುವ ಪಾವದೇ ನಹಳ್ಳಿ, ಬುರಡುಗುಂಟೆ ಗ್ರಾಮದ ಬಳಿ ಎರಡು ಸೇತುವೆಗಳು ಕೊಚ್ಚಿ ಹೋಗಿವೆ. ಈ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಂಡು ಹತ್ತಾರು ಗ್ರಾಮಗಳಿಗೆ ತೆರ ಳಲು ಕಷ್ಟವಾಗಿದೆ. ಅಲ್ಲದೆ ಚಿಂತಾಮಣಿಯಿಂದ ಕೊರ‌್ಲ ಪರ್ತಿಗೆ ತೆರಳುವ ಬಸ್ ಮಾರ್ಗ ಒಂದೇ ಆಗಿದ್ದರಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಹಾಗೆಯೇ ವಿದ್ಯಾರ್ಥಿಗಳು, ನೌಕರರು ಶಾಲಾ ಕಾಲೇಜುಗಳಿಗೆ, ಗ್ರಾಮಗಳಿಗೆ ತೆರಳಲು ಕಷ್ಟವಾಗಿದ್ದು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
3ನೇ ಬಾರಿ ಕೊಚ್ಚಿ ಹೋದ ಮಾದಮಂಗಳ ಸೇತುವೆ ಇನ್ನು ಮುಂಗಾನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಹರಿಯುವ ಕುಶಾವತಿ ನದಿ ಮಂಗಳವಾರ ಸುರಿದ ಭಾರೀ ಮಳೆಗೆ ತುಂಬಿ ಹರಿದ ಪರಿಣಾಮ, ಮಾದಮಂಗಳ ಬಳಿಯ ಕುಶಾವತಿಯ ಸೇತುವೆ 3ನೇ ಬಾರಿ ಕೊಚ್ಚಿ ಹೋಗಿದೆ. ಇದರಿಂದಾಗಿ ಆ ಭಾಗದ ಜನ ಸಂಚಾರವಿಲ್ಲದೆ ಪರದಾಡು ವಂತಾಗಿದೆ. ಕಳೆದ 2015ರಲ್ಲಿ 15 ದಿನ ಸುರಿದ ಜಡಿ ಮಳೆಗೆ ತಾಲೂಕಿನ ಕೆರೆಗಳು ತುಂಬಿ ನದಿಗೆ ನೀರು ಹರಿದ ಪರಿಣಾಮ ನದಿ ತುಂಬಿ ಹರಿದು ಸೇತುವೆ ಪಕ್ಕದ ಮಣ್ಣು ಕೊಚ್ಚಿ ಹೋಗಿ ರಸ್ತೆ ಸಂಪರ್ಕ ಕಡಿತಗೊಂಡಿತ್ತು.
ಆಗ ಸುತ್ತಮುತ್ತಲಿನ ಗ್ರಾಮಸ್ಥರು ಮಳೆ ನಿಂತ ಮೇಲೆ ತಾತ್ಕಾಲಿಕವಾಗಿ ಮಣ್ಣು ಹಾಕಿ ಸಂಚಾರಕ್ಕೆ ಅನುವು ಮಾಡಿಕೊಂಡು ಕಡಿತಗೊಂಡ ಸಂಪರ್ಕವನ್ನು ದುರಸ್ಥಿ ಮಾಡುವಂತೆ ಅಧಿಕಾರಿಗಳನ್ನು ಕೋರಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ 2020 ರಲ್ಲಿ ಮತ್ತೆ ಸಂಪರ್ಕ ಕಡಿತಗೊಂಡಿತು. ಇದರಿಂದ ಏಟಿಗಡ್ಡಗೊಲ್ಲಪಲ್ಲಿ, ಮಾದಮಂಗಳ ಬ್ರಾಹ್ಮಣ ಹಳ್ಳಿ, ಕೋನಪಲ್ಲಿ ಗ್ರಾಮಸ್ಥರು ಪರದಾ ಡುವಂತಾಗಿತ್ತು. ಇಷ್ಟೆಲ್ಲಾ ಅನಾಹುತಗಳಾಗಿ ಜನ ಪರದಾಡಿ ದರೂ 2020ರಲ್ಲಿ ತಾಲೂಕು ಆಡಳಿತ ಕೇವಲ ತಾತ್ಕಾಲಿಕ ದುರಸ್ಥಿ ಮಾಡಿ ಮೌನಕ್ಕೆ ಶರಣಾಗಿತ್ತು.