Advertisement

ಶಿರಸಿ: ಜಿಲ್ಲಾ ‌ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆ; ಒಂದು ಲಸಿಕೆಯ ಕಥೆಗೆ ಪ್ರಥಮ ಸ್ಥಾನ

03:14 PM Sep 08, 2022 | Team Udayavani |

ಶಿರಸಿ: ಜಿಲ್ಲಾ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಒಂದು ಲಸಿಕೆಯ ಕಥೆಯನ್ನು ಮನೋಜ್ಞವಾಗಿ ಬಿಚ್ಚಿಟ್ಟ ಇಲ್ಲಿ‌ನ ಮಾರಿಕಾಂಬಾ ಸರಕಾರಿ ಪ್ರೌಢಶಾಲಾ‌ ವಿದ್ಯಾರ್ಥಿಗಳ ತಂಡ   ಜಿಲ್ಲಾ ‌ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಬೆಳಗಾವಿ ವಿಭಾಗ ಮಟ್ಟಕ್ಕೆ ಆಯ್ಕೆ ಆಗಿದೆ.

Advertisement

ಲಸಿಕೆಯ ಹುಟ್ಟು, ಅದರ ಬೆಳವಣಿಗೆ, ಜನರ ವಿರೋಧ ಇದ್ದರೂ ಎದುರಿಸಿದ ವಿಜ್ಞಾನಿಗಳು ನೀಡಿದ ಕೊಡುಗೆಯ ಕುರಿತಾದ ಚಿತ್ರಣವನ್ನು ಹೊಂದಿದ ಒಂದು‌ ಲಸಿಕೆಯ ಕಥೆ ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿದೆ. ಇಡೀ ನಾಟಕದಲ್ಲಿ ವಿಜ್ಞಾನದ ಸಂಗತಿಯನ್ನು ಮನೋಜ್ಞವಾಗಿ ತೆರೆದಿಟ್ಟ ಬಗೆ ಹಾಗೂ ವಿದ್ಯಾರ್ಥಿಗಳ ಭಾವಪೂರ್ಣ ಲವಲವಿಕೆಯ ಅಭಿನಯವು ಪ್ರೇಕ್ಷಕರ ಮನಗೆಲ್ಲಿಸಿ ಪ್ರಥಮ ಸ್ಥಾನ ತನ್ನದಾಗಿಸಿಕೊಂಡಿತು.

ಈ ನಾಟಕದಲ್ಲಿ ತುಳಸಿ ಹೆಗಡೆ, ಎಂ.ವಿ ಶ್ರೇಯಾ, ಸ್ಪಂದನಾ ಭಟ್ಟ, ತನುಶ್ರೀ ಹೆಗಡೆ, ನವ್ಯಾ ಭಟ್ಟ, ಶ್ರೀಜಾ ಭಟ್ಟ, ಮಾನ್ಯ ಹೆಗಡೆ, ಕಿಶನ್ ಕುಮಾರ ಹೆಗಡೆ ಅಚ್ಚುಕಟ್ಟಾಗಿ ಪಾತ್ರಗಳನ್ನು ನಿರ್ವಹಿಸಿ ನಾಟಕ ಪರಿಣಾಮಕಾರಿಯಾಗಿಸುವಲ್ಲಿ ಯಶಸ್ವಿಯಾದರು. ಈಚೆಗಷ್ಟೇ ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಕನ್ನಡ ಭಾಷಾ ಶಿಕ್ಷಕ ನಾರಾಯಣ ಭಾಗ್ವತ್ ನಿರ್ದೇಶನ ನೀಡಿದ ಈ ನಾಟಕಕ್ಕೆ ವಿಜ್ಞಾನ ಶಿಕ್ಷಕಿ ಜಯಲಕ್ಷ್ಮೀ ಗುನಗಾ ಅಚ್ಚುಕಟ್ಟಾಗಿ ನಿರ್ವಹಣೆ ನಡೆಸಿದ್ದರು.

ಸ್ಪರ್ಧೆಯಲ್ಲಿ ಪಾಲ್ಗೊಂಡ ಯಲ್ಲಾಪುರ ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆ ವಿದ್ಯಾರ್ಥಿಗಳು ದ್ವಿತೀಯ, ಹಳಿಯಾಳದ ಚಿಬ್ಬಲಗೇರಿ ಸರಕಾರಿ ಪ್ರೌಢಶಾಲೆ ಮಕ್ಕಳು ತೃತೀಯ ಸ್ಥಾನ ಪಡೆದುಕೊಂಡರು. ಒಟ್ಟೂ ಹನ್ನೆರಡು ನಾಟಕ ತಂಡಗಳು ಶಿರಸಿ ಶೈಕ್ಷಣಿಕ ಜಿಲ್ಲೆಯಿಂದ ಬಂದಿದ್ದವು.

ಅತ್ಯುತ್ತಮ ನಾಟಕ ನಿರ್ದೇಶಕ ಪ್ರಶಸ್ತಿಯನ್ನು ನಾರಾಯಣ ಭಾಗ್ವತ, ಅತ್ಯುತ್ತಮ ರಂಗಪಠ್ಯ ಪ್ರಶಸ್ತಿಯನ್ನು ಅವೇಮರಿಯಾದ ಶಿಕ್ಷಕಿ ಸಂಪದಾ ಹೆಗಡೆ, ಅತ್ಯುತ್ತಮ ನಟಿಯಾಗಿ ಮಾರಿಕಾಂಬಾದ ಎಂ.ವಿ.ಶ್ರೇಯಾ, ಅತ್ಯುತ್ತಮ ನಟನಾಗಿ ಅವೇಮರಿಯಾದ ದಿನೇಶ ಮೇಸ್ತ ಹೊರ ಹೊಮ್ಮಿದರು.

Advertisement

ನಾಟಕದ ನಿರ್ಣಾಯಕರಾಗಿ ರಂಗನಿರ್ದೇಶಕ ಚಂದ್ರು ಉಡುಪಿ ಹಾಗೂ ಉಪನ್ಯಾಸಕ ನಾಗೇಂದ್ರ ಭಾಗವಹಿಸಿದ್ದರು. ವಿಜ್ಞಾನ ನಾಟಕದ ಜಿಲ್ಲಾ ನೋಡಲ್ ಅಧಿಕಾರಿ ಪ್ರಶಾಂತ ವೆರ್ಣೇಕರ ಉಪಸ್ಥಿತರಿದ್ದು, ಸ್ಪರ್ಧೆ ಆಯೋಜಿಸಿದ್ದರು.

ಪ್ರಥಮ ಸ್ಥಾನ ಪಡೆದ‌ ಮಾರಿಕಾಂಬಾದ ವಿದ್ಯಾರ್ಥಿ ಹಾಗೂ ಶಿಕ್ಷಕರನ್ನು ಬಿಇಓ ಎಂ.ಎಸ್.ಹೆಗಡೆ, ಮಾರಿಕಾಂಬಾ ಪ್ರೌಢಶಾಲೆಯ ಪ್ರಭಾರಿ‌ ಮುಖ್ಯ ಶಿಕ್ಷಕ ಆರ್.ವಿ.ನಾಯ್ಕ, ಶಾಲಾಭಿವೃದ್ದಿ ಸಮಿತಿ ಪದಾಧಿಕಾರಿಗಳು,  ಶಿಕ್ಷಕ ವೃಂದ  ಅಭಿನಂದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next