Advertisement

ಜಿಲ್ಲಾ ಮಟ್ಟದ ಹೂಡಿಕೆದಾರರ ಶೃಂಗಸಭೆ 

12:36 PM Nov 09, 2017 | Team Udayavani |

ಪುರಭವನ: ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಉದ್ದಿಮೆದಾರರಿಗೆ ವಿಪುಲ ಅವಕಾಶಗಳಿವೆ. ಮಂಗಳೂರು ಉದ್ಯಮಶೀಲತೆಗೆ ಹೆಚ್ಚು ಒತ್ತು ನೀಡುತ್ತಿದೆ ಎಂದು ಸಂಸದ ನಳಿನ್‌ಕುಮಾರ್‌ ಕಟೀಲು ಹೇಳಿದರು.

Advertisement

ಜಿಲ್ಲಾಡಳಿತ, ದ.ಕ. ಮತ್ತು ಉಡುಪಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕ ಕೇಂದ್ರ ಮಂಗಳೂರು ಮತ್ತು ಉಡುಪಿ, ಕಾಸಿಯಾ, ಎಂಎಸ್‌ಎಂಇ, ಡಿಐ ಮತ್ತು ಕಾರ್ಪೊರೇಶನ್‌ ಬ್ಯಾಂಕಿನ ಸಹಯೋಗದಲ್ಲಿ ದ.ಕ. ಮತ್ತು ಉಡುಪಿ ಜಿಲ್ಲಾ ಮಟ್ಟದ ಸರಬರಾಜುದಾರರ ಅಭಿವೃದ್ಧಿ ಮತ್ತು ಹೂಡಿಕೆದಾರರ ಶೃಂಗಸಭೆ-2017ನ್ನು ಅವರು ನಗರದ ಪುರಭವನದಲ್ಲಿ ಉದ್ಘಾಟಿಸಿದರು.

ಮಂಗಳೂರಿನಲ್ಲಿ ರಸ್ತೆ, ವೈಮಾನಿಕ, ಬಂದರು, ರೈಲ್ವೇ ಸೇವೆಗಳು ಲಭ್ಯವಿರುವುದರಿಂದ ಉದ್ದಿಮೆಗೂ ಪೂರಕ
ವಾತಾವರಣವಿದೆ. ಇಲ್ಲಿನ ಸಣ್ಣ ಕೈಗಾರಿಕೆಗಳು ಹಲವು ಸಾಮಾನ್ಯ ಕುಟುಂಬಗಳನ್ನು ಬೆಳೆಸಿವೆ ಎಂದು ಅವರು ಹೇಳಿದರು.

ಕೇಂದ್ರ ಸರಕಾರವು ಮೇಕ್‌ ಇನ್‌ ಇಂಡಿಯಾ, ಸ್ಕಿಲ್‌ ಇಂಡಿಯಾ, ಮುದ್ರಾ ಸಾಲದಂತಹ ಯೋಜನೆಗಳನ್ನು ಜಾರಿಗೆ
ತರುವ ಮುಖಾಂತರ ಸ್ವದೇಶೀ ಉದ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದೆ. ಸ್ವದೇಶೀ ಉದ್ದಿಮೆ ಬೆಳೆಸುವು ದೇ ಮೇಕ್‌ ಇನ್‌ ಇಂಡಿಯಾದ ಪರಿಕಲ್ಪನೆ. ಸ್ಕಿಲ್‌ ಇಂಡಿಯಾದ ಮೂಲಕ ಯುವಕರಿಗೆ ತರಬೇತಿ ಉದ್ಯೋಗ ಕಲ್ಪಿಸುವುದಾಗಿದೆ. ಹೊಸ ಉದ್ದಿಮೆ ಸ್ಥಾಪನೆಗೆ ಅವಕಾಶ ಕಲ್ಪಿಸುವುದಕ್ಕಾಗಿ ಮುದ್ರಾ ಸಾಲ ಯೋಜನೆ ಸಹಕಾರಿ. ಇಂತಹ ಯೋಜನೆ ಗಳನ್ನು ಸದ್ವಿನಿಯೋಗ ಪಡಿಸಿಕೊಂಡು ಉದ್ಯಮ ರಂಗವನ್ನು ಬೆಳೆಸಬೇಕು ಎಂದರು.

ಪ್ಲಾಸ್ಟಿಕ್‌ ಪಾರ್ಕ್‌ ನಿರ್ಮಾಣಕ್ಕೆ ಚಿಂತನೆ
ರಾಜ್ಯ ಮತ್ತು ಕೇಂದ್ರ ಸರಕಾರದ ಸಹಯೋಗದಲ್ಲಿ ಮಂಗಳೂರಿನ ಗಂಜಿ ಮಠದಲ್ಲಿ 300 ಎಕರೆ ಪ್ರದೇಶದಲ್ಲಿ ಪ್ಲಾಸ್ಟಿಕ್‌ ಪಾರ್ಕ್‌ ನಿರ್ಮಾಣ ಮಾಡುವ ಚಿಂತನೆಯಿದೆ. ಎಂಆರ್‌ಪಿಎಲ್‌ನ ಕಚ್ಚಾ ವಸ್ತುಗಳನ್ನು ಬಳಸಿಕೊಂಡು ಇದನ್ನು ನಿರ್ಮಿಸಲಾಗುವುದು ಎಂದರು.

Advertisement

2,500 ಕೋ.ರೂ. ಅನುದಾನ ಬಿಡುಗಡೆ
ಅಧ್ಯಕ್ಷತೆ ವಹಿಸಿದ್ದ ಶಾಸಕ ಜೆ.ಆರ್‌. ಲೋಬೋ ಮಾತನಾಡಿ, ಮಂಗಳೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ನಡೆಸುವ ಸಲುವಾಗಿ ಈಗಾಗಲೇ 2,500 ಕೋಟಿ ರೂ. ಮಂಜೂರಾಗಿದೆ. ಇದರಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತು ಕೊಡಲಾಗುತ್ತದೆ. ಇದರಿಂದ ಉದ್ದಿಮೆ ರಂಗವೂ ಬೆಳೆಯುತ್ತದೆ ಎಂದರು. ಕೈಗಾರಿಕ ವಲಯ ಸಂಬಂಧಿತ ಸ್ಮರಣ ಸಂಚಿಕೆಯನ್ನು ಮೇಯರ್‌ ಕವಿತಾ ಸನಿಲ್‌ ಬಿಡುಗಡೆಗೊಳಿಸಿದರು.

ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್‌.ಖಾದರ್‌, ಬೆಂಗಳೂರು ಎಂಎಸ್‌ಎಂಇ-ಡಿಐ ನಿರ್ದೇಶಕ ರಂಗಪ್ರಸಾದ್‌, ಕಾಸಿಯಾ ಖಜಾಂಚಿ ಕೆ. ನರಸಿಂಹಮೂರ್ತಿ, ಕಾರ್ಪೊರೇಶನ್‌ ಬ್ಯಾಂಕ್‌ ಜನರಲ್‌ ಮ್ಯಾನೇಜರ್‌ ಸಿ. ಕೆ. ಗೋಪಾಲ್‌, ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಎಂ. ಅಣ್ಣಪ್ಪ ಪೈ, ಬ್ರ್ಯಾಂಚ್‌ ಎಂಎಸ್‌ಎಂಇಡಿನ ಉಪ ನಿರ್ದೇಶಕ ಕೆ. ಸಾಕ್ರೆಟಿಸ್‌ ಉಪಸ್ಥಿತರಿದ್ದರು. ಗೋಕುಲ್‌ದಾಸ್‌ ನಾಯಕ್‌ ಸ್ವಾಗತಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next