ಉಡುಪಿ: ಮಕ್ಕಳ ಹಕ್ಕುಗಳ ಬಗ್ಗೆ ಎಲ್ಲರೂ ತಿಳಿಯಲು ಹಾಗೂ ಮಕ್ಕಳ ಮೇಲಾಗುವ ದೌರ್ಜನ್ಯವನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲೆಯ ಶಾಲಾ -ಕಾಲೇಜು, ಆರೋಗ್ಯ ಇಲಾಖೆ ಸೇರಿದಂತೆ ಎಲ್ಲ ಸರಕಾರಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಸ್ಟಿಕ್ಕರ್ ಅಳವಡಿಕೆ ಹಾಗೂ ಮಕ್ಕಳ ಸಹಾಯವಾಣಿಯ ಬಗ್ಗೆ ಗೋಡೆ ಬರಹಗಳನ್ನು ಬರೆಸಬೇಕು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು.
ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಮಕ್ಕಳ ಸಹಾಯವಾಣಿ ಸಲಹಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಮನೆ, ಶಾಲೆ, ಸಾರ್ವಜನಿಕ ಸ್ಥಳಗಳಲ್ಲಿ ಮಕ್ಕಳ ಮೇಲಾಗುವ ದೌರ್ಜನ್ಯವನ್ನು ತಡೆಯುವ ನಿಟ್ಟಿನಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆಯನ್ನು ಆದಷ್ಟು ಪ್ರಚಾರಗೊಳಿಸಿ ಮಕ್ಕಳ ಏಳಿಗೆಗೆ ಎಲ್ಲರೂ ಶ್ರಮಿಸಬೇಕು. ಶಾಲಾ ವಾಹನ ಹಾಗೂ ಬಸ್, ರಿಕ್ಷಾ ಸೇರಿದಂತೆ ಸಾರ್ವಜನಿಕ ಹಾಗೂ ಸರಕಾರಿ ವಾಹನಗಳಲ್ಲಿ ಸಹಾಯವಾಣಿ ಸಂಖ್ಯೆಯ ಸ್ಟಿಕ್ಕರ್ ಅಳವಡಿಸಬೇಕು. ಮಕ್ಕಳ ಹಕ್ಕುಗಳ ಬಗ್ಗೆ ಸೂಕ್ಷ್ಮವಾಗಿ ತಿಳಿಯಲು ಎಲ್ಲರೂ ಮಕ್ಕಳ ಮನದ ಅಂತರಂಗ ಪುಸ್ತಕವನ್ನು ಓದಬೇಕು. ಶಾಲಾ ಕಾಲೇಜು ಶಿಕ್ಷಕರುಗಳಿಗೆ ಪುಸ್ತಕ ವಿತರಿಸಬೇಕು ಎಂದು ಸಲಹೆ ನೀಡಿದರು.
ಮಕ್ಕಳ ಗ್ರಾಮಸಭೆಗಳಲ್ಲಿ ಮಕ್ಕಳ ಸಹಾಯವಾಣಿ ಬಗ್ಗೆ ಹೆಚ್ಚಿನ ಮಾಹಿತಿ ನೀಡಬೇಕು. ತಾಲೂಕು ಮಟ್ಟದಲ್ಲಿ ಚೈಲ್ಡ್‌ಲೈನ್ ಸಲಹಾ ಸಮಿತಿಗಳನ್ನು ರಚಿಸಿ ಸಭೆ ನಡೆಸಬೇಕು. ಜಿಲ್ಲೆಯಲ್ಲಿ ಬಾಲಕರ ಭವನಕ್ಕೆ ಪ್ರಸ್ತಾವ ಕಳುಹಿಸುವಂತೆ ಹಾಗೂ ಬಾಲಕಿಯ ಬಾಲ ಮಂದಿರಗಳನ್ನು ಪುನಶ್ಚೇತನಗೊಳಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಆರ್.ಶೇಷಪ್ಪ ಅವರಿಗೆ ಜಿಲ್ಲಾಧಿಕಾರಿ ಸೂಚಿಸಿದರು. ಸಭೆಯಲ್ಲಿ ಚೈಲ್ಡ್ ಲೈನ್ ಇಂಡಿಯಾ ಫೌಂಡೇಶನ್‌ನ ಕೋರ್ಡಿನೇಟರ್ ಚಿತ್ರಅಂಚನ್ ಚೈಲ್ಡ್ ಲೈನ್ ಇಂಡಿಯಾ ಫೌಂಡೇಶನ್‌ನ ಕುರಿತು ಮಾಹಿತಿ ನೀಡಿದರು.
ಮುಖ್ಯಕಾರ್ಯನಿರ್ವಣಾಧಿಕಾರಿ ಪ್ರೀತಿ ಗೆಹಲ್ಲೋತ್, ಮಕ್ಕಳ ರಕ್ಷಣಾ ಘಟಕದ ಅದ್ಯಕ್ಷ ಸದಾನಂದ ನಾಯಕ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯೆ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶೆ ಕಾವೇರಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮಾಜಿ ಅಧ್ಯಕ್ಷ ಬಿ.ಕೆ. ನಾರಾಯಣ, ಅಮೃತ ಕಲಾ, ರಾಜೇಶ್, ಮೋಹನ್, ವಿವಿಧ ಇಲಾಖಾ ಅಧಿಕಾರಿಗಳು ಹಾಗೂ ಸಿಬಂದಿಗಳು ಉಪಸ್ಥಿತರಿದ್ದರು.
ಜಿಲ್ಲಾ ಚೈಲ್ಡ್ ಲೈನ್ ಸಂಯೋಜಕಿ ಕಸ್ತೂರಿ ವರದಿ ಮಂಡಿಸಿದರು. ಜಿಲ್ಲಾ ಮಕ್ಕಳ ಸಹಾಯವಾಣಿ ನಿರ್ದೇಶಕ ರಾಮಚಂದ್ರ ಸ್ವಾಗತಿಸಿ, ವಂದಿಸಿದರು.
ಮಲ್ಪೆ ಬಂದರಿನಲ್ಲಿ ಮೀನು ಕದಿಯುತ್ತಿರುವ ಮಕ್ಕಳ ಬಗ್ಗೆ ಕ್ರಮ ಕೈಗೊಳ್ಳಬೇಕು. ವಲಸೆ ಕಾರ್ಮಿಕರ ಮಕ್ಕಳ ರಕ್ಷಣೆ ಜಿಲ್ಲಾಡಳಿತದ ಕರ್ತವ್ಯವಾಗಿದ್ದು ಈ ಬಗ್ಗೆ ಶೀಘ್ರ ಕ್ರಮಕೈಗೊಂಡು, ನಿಯಮಿತವಾಗಿ ತಪಾಸಣೆ ನಡೆಸಿ ವರದಿ ಸಲ್ಲಿಸಬೇಕು. ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳನ್ನು ಮತ್ತೆ ಶಾಲೆಗಳತ್ತ ಮುಖ ಮಾಡಬೇಕು. ಸರಕಾರಿ ಇಲಾಖೆ, ಖಾಸಗಿ ಶಾಲಾ ಕಾಲೇಜುಗಳು ಮಕ್ಕಳ ಸಹಾಯವಾಣಿಗೆ ಸೂಕ್ತ ಸ್ಪಂದನೆ ನೀಡಬೇಕು, ತುರ್ತು ಸಂದರ್ಭಗಳಲ್ಲಿ ಸರಕಾರಿ ಇಲಾಖೆಯ ಸಿಬಂದಿಗಳು ರಜಾ ದಿನಗಳಲ್ಲಿಯೂ ಮಕ್ಕಳ ಸಹಾಯವಾಣಿ ದೂರುಗಳಿಗೆ ಸ್ಪಂದಿಸಬೇಕು.
ಜಿ. ಜಗದೀಶ್, ಜಿಲ್ಲಾಧಿಕಾರಿ