ಕೋಲಾರ: ಕಾಂಗ್ರೆಸ್, ಜೆಡಿಎಸ್‌ನ 14 ಶಾಸಕರ ರಾಜೀನಾಮೆ ನಂತರ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗುತ್ತಿದ್ದು, ಜಿಲ್ಲೆಯ ಶಾಸಕರು ಎಲ್ಲವನ್ನು ದೂರದಿಂದ ಗಮನಿಸುತ್ತಾ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ.
ಆದರೆ, ಇದಕ್ಕೆ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಜಿಲ್ಲೆಯ ಶಾಸಕರು ಯಾವುದೇ ಕಾರಣಕ್ಕೂ ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಸ್ಪಷ್ಟನೆ ನೀಡಿ, ಸದ್ಯಕ್ಕೆ ತಮ್ಮ ಮೇಲೆ ಉಂಟಾಗಿದ್ದ ಅನುಮಾನವನ್ನು ನಿವಾರಿಸಿಕೊಂಡಿದ್ದರು.
ಅಸಮಾಧಾನ ಇದೆ: ಜಿಲ್ಲೆಯ ಶಾಸಕರು ಪ್ರಸಕ್ತ ರಾಜಕೀಯ ಬೆಳವಣಿಗೆಗಳಲ್ಲಿ ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿದಾಕ್ಷಣ ಜಿಲ್ಲೆಯ ಶಾಸಕರಿಗೆ ಮೈತ್ರಿ ಸರ್ಕಾರದ ಬಗ್ಗೆ ತಕರಾರುಗಳು ಇಲ್ಲವೆಂದಲ್ಲ. ಜಿಲ್ಲೆಯ ಆರು ಶಾಸಕರಿಗೂ ತಮ್ಮದೇ ಆದ ರೀತಿಯಲ್ಲಿ ಮೈತ್ರಿ ಸರ್ಕಾರದ ಬಗ್ಗೆ ತಕರಾರುಗಳಿವೆ. ತಾವು ಪ್ರತಿನಿಧಿಸುತ್ತಿರುವ ರಾಜಕೀಯ ಪಕ್ಷಗಳು ತಮ್ಮನ್ನು ನಡೆಸಿಕೊಳ್ಳುತ್ತಿರುವ ರೀತಿಗೆ ಅಸಮಾಧಾನವಿದೆ. ತಮ್ಮ ರಾಜಕೀಯ ಅನುಭವಕ್ಕೆ ತಕ್ಕಂತ ಸೂಕ್ತ ಸ್ಥಾನ ಮಾನ ಸಿಕ್ಕಿಲ್ಲವೆಂಬ ದೂರುಗಳಿವೆ.
Advertisement
ಶನಿವಾರ ಮಧ್ಯಾಹ್ನದಿಂದಲೇ ಶಾಸಕರ ರಾಜೀನಾಮೆ ಪ್ರಹಸನ ಆರಂಭವಾಗಿದ್ದರ ಬೆನ್ನಲ್ಲೇ, ಸುದ್ದಿ ಮಾಧ್ಯಮಗಳು ಶ್ರೀನಿವಾಸಪುರ ಶಾಸಕ ಹಾಗೂ ಸ್ಪೀಕರ್ ರಮೇಶ್‌ಕುಮಾರ್ ಬೆನ್ನಿಗೆ ಬಿದ್ದಿದ್ದರು. ಕೋಲಾರ ಶಾಸಕ ಕೆ.ಶ್ರೀನಿವಾಸಗೌಡ, ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಮಾಲೂರು ಶಾಸಕ ಕೆ.ವೈ.ನಂಜೇಗೌಡ, ಕೆಜಿಎಫ್ ಶಾಸಕಿ ರೂಪಕಲಾ ಹಾಗೂ ಮುಳಬಾಗಿಲು ಶಾಸಕ ಎಚ್.ನಾಗೇಶ್‌ರ ಪೈಕಿ ಬಹುತೇಕ ಶಾಸಕರು ರಾಜೀನಾಮೆ ನೀಡುತ್ತಾರೆಂದೇ ಸುದ್ದಿ ಪ್ರಸಾರ ಮಾಡಿದ್ದವು.
ಶಾಸಕರಿಗೂ ತಮ್ಮದೇ ಅಜೆಂಡಾ:
ರಾಜ್ಯದಲ್ಲಿ ಸದ್ಯ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳಿಗೂ, ಇದಕ್ಕೆ ಕಾರಣವಾಗಿರುವ ಮುಖಂಡರ ಜೊತೆ ಕೋಲಾರ ಶಾಸಕರ ನೇರ ಸಂಬಂಧವಿಲ್ಲ. ಹೀಗಾಗಿ ಯಾವುದೇ ಮುಖಂಡರನ್ನು ಹಿಂಬಾಲಿಸಿ ಕೋಲಾರದ ಶಾಸಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುತ್ತಿಲ್ಲ. ಆದರೂ, ಪ್ರತಿಯೊಬ್ಬ ಶಾಸಕರೂ ತಮ್ಮದೇ ಅಜೆಂಡಾ ಇಟ್ಟುಕೊಂಡಿದ್ದಾರೆ. ತಮ್ಮ ಅಜೆಂಡಾವನ್ನು ಈಡೇರಿಸಿಕೊಳ್ಳಲು ಪ್ರಸ್ತುತ ರಾಜಕೀಯ ಅಸ್ಥಿರ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದಾರೆ. ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ.
ಕೆ.ಆರ್.ರಮೇಶ್‌ಕುಮಾರ್:ಕೋಲಾರ ಜಿಲ್ಲೆಯ ಹಿರಿಯ ರಾಜಕಾರಣಿ ರಮೇಶ್‌ಕುಮಾರ್ ಮೈತ್ರಿ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗುವ ಆಸೆ ಇಟ್ಟುಕೊಂಡಿದ್ದರು. ಆದರೆ, ರಮೇಶ್‌ಕುಮಾರ್‌ರನ್ನು ಹಿಂದಿನ ಅನುಭವದ ಆಧಾರದ ಮೇಲೆ ಮೈತ್ರಿ ಸರ್ಕಾರ ಸ್ಪೀಕರ್ ಸ್ಥಾನಕ್ಕೆ ತಳ್ಳಲ್ಪಟ್ಟಿತು. ಇದೀಗ ಸ್ಪೀಕರ್ ಆಗಿರುವ ರಮೇಶ್‌ಕುಮಾರ್ ಮೈತ್ರಿ ಸರ್ಕಾರ ಕುರಿತಂತೆ ಆಗಾಗ್ಗೆ ಅಸಮಾಧಾನ ಹೊರ ಹಾಕುತ್ತಲೇ ಇರುತ್ತಾರೆ. ಕಳೆದ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ರಮೇಶ್‌ಕುಮಾರ್ ನೀಡುತ್ತಿದ್ದ ಹೇಳಿಕೆಗಳು ಮತ್ತು ತೆಗೆದುಕೊಂಡ ನಿಲುವುಗಳು ಪರೋಕ್ಷವಾಗಿ ಮೈತ್ರಿ ಸರ್ಕಾರಕ್ಕೆ ವಿರುದ್ಧವಾಗಿಯೇ ಇತ್ತೆಂಬುದನ್ನು ರಾಜ್ಯದ ಜನತೆ ಗಮನಿಸಿದ್ದಾರೆ. ಆದರೂ, ಸ್ಪೀಕರ್ ಸ್ಥಾನದಲ್ಲಿ ಇರುವವರೆಗೂ ನೇರ ರಾಜಕಾರಣದಿಂದ ದೂರವಿರುತ್ತಾರೆ.
ಎಸ್.ಎನ್.ನಾರಾಯಣಸ್ವಾಮಿ: ಸತತ ಎರಡನೇ ಬಾರಿಗೆ ಬಂಗಾರಪೇಟೆ ಕ್ಷೇತ್ರದಿಂದ ಎಸ್.ಎನ್. ನಾರಾಯಣಸ್ವಾಮಿ ಗೆದ್ದು ಬೀಗಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಸ್ಪೀಕರ್ ರಮೇಶ್‌ಕುಮಾರ್ ಹೊರತುಪಡಿಸಿದರೆ ಹಿರಿಯರಾಗಿರುವ ತಮಗೆ ಸಚಿವ ಸ್ಥಾನ ಸಿಗಬೇಕಿತ್ತು, ಉಸ್ತುವಾರಿ ಹೊಣೆಗಾರಿಕೆ ದಕ್ಕಬೇಕಿತ್ತು ಎಂದು ಆಶಿಸಿದ್ದರು. ಆದರೆ, ತಡವಾಗಿ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ತಮಗೆ ಸಚಿವ ಸ್ಥಾನ ಸಿಗದಿರಲು ಸಂಸದರಾಗಿದ್ದ ಕೆ.ಎಚ್.ಮುನಿಯಪ್ಪರೇ ಕಾರಣವೆನ್ನುವುದು. ಇವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಅವರ ವಿರುದ್ಧ ನಿಲುವು ತೆಗೆದುಕೊಳ್ಳಲು ಕಾರಣವಾಗಿತ್ತು. ಈಗಲೂ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಎಸ್.ಎನ್.ನಾರಾಯಣಸ್ವಾಮಿ, ಕೋಲಾರ ಜಿಲ್ಲೆಯ ಹಿರಿಯ ರಾಜಕಾರಣಿಯ ಗುಂಪಿನಲ್ಲಿ ಗುರುತಿಸಿಕೊಂಡಿದ್ದು, ಪ್ರಸ್ತುತ ರಾಜಕೀಯ ಬೆಳವಣಿಗೆಗಳನ್ನು ಕಾದು ನೋಡುತ್ತಿದ್ದಾರೆ.
ಕೆ.ವೈ.ನಂಜೇಗೌಡ: ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪರಿಗೆ ಆಪ್ತರಾಗಿರುವ ಕಾರಣ ಜಿಲ್ಲೆಯ ಇನ್ನಿತರ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರ ಕೋಪಕ್ಕೆ ತುತ್ತಾಗಿದ್ದಾರೆ. ಆದರೂ, ಕೆ.ಎಚ್.ಮುನಿಯಪ್ಪರ ಬೆಂಬಲ ಉಳಿಸಿಕೊಂಡಿದ್ದಾರೆ. ತಮಗೆ ಬೇಕಾಗಿದ್ದ ಕೋಚಿಮುಲ್ ಅಧ್ಯಕ್ಷ ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಸದ್ಯಕ್ಕೆ ಕೆ.ಸಿ. ವ್ಯಾಲಿ ನೀರು ಮಾಲೂರು ತಾಲೂಕಿಗೆ ಹರಿಯದಿರುವ ಕುರಿತು ಅಸಮಾಧಾನಗೊಂಡಿದ್ದಾರೆ. ಪ್ರಸ್ತುತ ರಾಜಕೀಯ ಬೆಳವಣಿಗೆಗಳಿಗೂ ತಮಗೂ ಸಂಬಂಧವಿಲ್ಲವೆಂದು ಹೇಳಿಕೆ ನೀಡಿದರೂ, ಕೆ.ಸಿ. ವ್ಯಾಲಿ ನೀರು ವಿಚಾರ ಮುಂದಿಟ್ಟುಕೊಂಡು ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಆದರೆ, ಕೆ.ವೈ.ನಂಜೇಗೌಡರು ರಾಜೀನಾಮೆ ವಿಚಾರವನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದಾರೆ. ಅತುರದ ತೀರ್ಮಾನಕ್ಕೆ ಬರುವವರಲ್ಲ.
ಕೆ.ಶ್ರೀನಿವಾಸಗೌಡ: ಕೋಲಾರದ ಶಾಸಕ ಕೆ.ಶ್ರೀನಿವಾಸಗೌಡ ನಾಲ್ಕನೇ ಬಾರಿ ಕೋಲಾರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಹಿರಿಯರಾಗಿರುವ ಇವರಿಗೆ ಮೊದಲ ಹಂತದಲ್ಲಿಯೇ ಸಚಿವ ಸ್ಥಾನ ಸಿಗಬೇಕಿತ್ತು. ಆದರೆ, ಜೆಡಿಎಸ್ ವರಿಷ್ಠರು ಬಹುತೇಕ ಸಚಿವ ಸ್ಥಾನಗಳನ್ನು ತಮ್ಮ ಕುಟುಂಬ ಹಾಗೂ ಸಂಬಂಧಿಕರಿಗೆ ಹಂಚಿಕೊಂಡಿದ್ದರು. ಇದು ಕೆ.ಶ್ರೀನಿವಾಸಗೌಡರನ್ನು ಸಾಕಷ್ಟು ಕೆರಳಿಸಿದೆ. ಜೆಡಿಎಸ್ ವರಿಷ್ಠರ ವಿರುದ್ಧ ಅವರು ಬಹಿರಂಗವಾಗಿಯೇ ಅಸಮಾಧಾನ ತೋಡಿಕೊಂಡಿದ್ದರು. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ತನ್ನ ಪಕ್ಷದ ಅಣತಿಗಿಂತಲೂ ಜಿಲ್ಲೆಯ ಹಿರಿಯ ರಾಜಕಾರಣಿಯ ಅಣತಿಯಂತೆ ನಡೆದುಕೊಂಡಿದ್ದರು. ಈಗಲೂ ರಾಜೀನಾಮೆ ನೀಡುವ ವಿಚಾರವನ್ನು ಅದೇ ಹಿರಿಯ ರಾಜಕಾರಣಿ ತೆಗೆದುಕೊಳ್ಳುವ ಸಲಹೆ ಆಧಾರವಾಗಿಟ್ಟುಕೊಂಡು ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ. ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಕೆ.ಶ್ರೀನಿವಾಸಗೌಡರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಹಂತಕ್ಕೆ ಹೋಗುವುದಿಲ್ಲವೆಂಬ ಮಾತು ಕೇಳಿ ಬರುತ್ತಿದೆ.
ರೂಪಕಲಾ: ಕೆಜಿಎಫ್ ಶಾಸಕಿ ರೂಪಕಲಾ, ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪರ ಪುತ್ರಿ. ಈ ಕಾರಣಕ್ಕಾಗಿ ಅಲ್ಲದಿದ್ದರೂ ಸದ್ಯಕ್ಕೆ ಕಾಂಗ್ರೆಸ್ ಪಕ್ಷ ಬಿಟ್ಟು ರಾಜಕೀಯ ಮಾಡುವ ಯಾವುದೇ ಚಿಂತನೆ ನಡೆಸಿಲ್ಲ. ಹಾಗಾಗಿ ಮೈತ್ರಿ ಸರ್ಕಾರ ಇರಲಿ ಬಿಡಲಿ ತಾವಂತು ಕೆಜಿಎಫ್ನ ಕಾಂಗ್ರೆಸ್ ಶಾಸಕಿಯಾಗಿಯೇ ಉಳಿಯುವ ಸೂಚನೆ ನೀಡಿದ್ದಾರೆ. ಆದರೂ, ತಮಗೆ ಮಹಿಳಾ ಕೋಟಾದಲ್ಲಿ ಹಾಗೂ ದಲಿತ ಎಡಗೈ ಕೋಟಾದಲ್ಲಿ ಸಚಿವ ಸ್ಥಾನ ಸಿಗಬೇಕಿತ್ತು ಎಂಬ ಆಸೆ ಇಟ್ಟುಕೊಂಡಿದ್ದರು. ಆದರೆ, ಮೈತ್ರಿ ಸರ್ಕಾರ ಇದನ್ನು ಈಡೇರಿಸಿಲ್ಲ. ಆದರೂ, ಯಾವುದೇ ಕಾರಣಕ್ಕೂ ಪಕ್ಷವನ್ನು ಬಿಡುವ ಲಕ್ಷಣಗಳು ಇಲ್ಲ.
ಎಚ್.ನಾಗೇಶ್: ಕೋಲಾರ ಜಿಲ್ಲೆ ರಾಜಕಾರಣಕ್ಕೆ ಹೊಸಬರು. ಸದ್ಯಕ್ಕೆ ಇಲ್ಲಿನ ನಾಯಕರ ರಾಜಕಾರಣದಲ್ಲಿ ಕಂಕುಳ ಕೂಸಾಗಿದ್ದಾರೆ. ಕಾಂಗ್ರೆಸ್ ಬಂಡಾಯ ಪಕ್ಷೇತರ ಶಾಸಕರಾಗಿ ಮುಳಬಾಗಿಲು ಕ್ಷೇತ್ರದಿಂದ ಆಯ್ಕೆಯಾದರೂ, ಕಾಂಗ್ರೆಸ್ ಪಕ್ಷದ ಮೇಲೆ ನಿಷ್ಠೆಯನ್ನು ಹೊಂದಿಲ್ಲ. ಮೈತ್ರಿ ಸರ್ಕಾರವು ಮಂತ್ರಿ ಮಾಡಲಿಲ್ಲವೆಂದು ಅತೃಪ್ತ ಶಾಸಕರ ಜೊತೆ ಮುಂಬೈಗೆ ಹಾರಿದ್ದರು. ಆನಂತರ ವಾಪಸ್ಸಾಗಿ ಮತ್ತೇ ಮೈತ್ರಿ ಸರ್ಕಾರಕ್ಕೆ ಜೈ ಎಂದಿದ್ದರು. ತಡವಾಗಿ ಇತ್ತೀಚಿಗೆ ಸಚಿವರಾಗಿಯೂ ಪ್ರಮಾಣ ವಚನ ಸ್ಪೀಕರಿಸಿದ್ದರು. ತಮ್ಮನ್ನು ಸಚಿವರನ್ನಾಗಿಸಿದ ಮೇಲೆ ರಾಜಕಾರಣದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗುತ್ತಿರುವುದು ಎಚ್.ನಾಗೇಶ್‌ರನ್ನು ಚಿಂತಾಕ್ರಾಂತರನ್ನಾಗಿಸಿದೆ. ಮೈತ್ರಿ ಸರ್ಕಾರ ಅಸ್ಥಿರಗೊಂಡು ಬಿಜೆಪಿ ಸರ್ಕಾರವೇನಾದರೂ ಬಂದಲ್ಲಿ ಧಾರಾಳವಾಗಿ ಎಚ್.ನಾಗೇಶ್ ಬಿಜೆಪಿ ಸರ್ಕಾರಕ್ಕೆ ಮಂತ್ರಿ ಸ್ಥಾನದ ಬೇಡಿಕೆ ಇಟ್ಟು ಬೆಂಬಲ ಕೊಡಲು ಸಿದ್ಧವಾಗಿದ್ದಾರೆ. ಹಾಗಾಗಿ ಇವರು ಸಹ ಪ್ರಸಕ್ತ ರಾಜಕೀಯ ಬೆಳವಣಿಗೆಗಳನ್ನು ದೂರದಿಂದಲೇ ಗಮನಿಸುತ್ತಿದ್ದಾರೆ.
● ಕೆ.ಎಸ್.ಗಣೇಶ್