Advertisement

“ಭಾಷೆ ಆಪ್ತವಾಗಿದ್ದರೆ ಮನಸ್ಸಿಗೆ ಮುಟ್ಟುತ್ತದೆ’

09:54 PM Feb 14, 2021 | Team Udayavani |

ಕೊಡಿಯಾಲಬೈಲ್‌: ಭಾಷೆ ಆಪ್ತವಾಗಿದ್ದರೆ ಮನಸ್ಸಿಗೆ ಮುಟ್ಟು ತ್ತದೆ. ವಿದ್ಯಾರ್ಥಿಗಳು ಭಾಷೆಯನ್ನು ಪ್ರೀತಿಸಿದರೆ ಜ್ಞಾನಾರ್ಜನೆಯಲ್ಲಿ ಸಾಧಿ ಸಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ| ಪಿ.ಎಸ್‌. ಯಡಪಡಿತ್ತಾಯ ಹೇಳಿದರು.

Advertisement

ಕೊಡಿಯಾಲಬೈಲ್‌ನ ಶಾರದಾ ವಿದ್ಯಾಲಯದಲ್ಲಿ ನಡೆದ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆಯ ದಿನವಾದ ರವಿವಾರ ಆಯೋಜಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ ಎಂಬ ವಿಚಾರಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿ ಪೂರ್ವ ಪ್ರಾಥಮಿಕ ಶಾಲೆಯಿಂದ ಆರಂಭವಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಜೀವನವನ್ನು ರೂಪಿಸಲು ಪ್ರಶ್ನೆ ಕೇಳುವ ಗುಣವನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಪ್ರಾಯೋಗಿಕ ಜ್ಞಾನವೂ ಮುಖ್ಯ :

ಅಂಕವೊಂದೇ ವಿದ್ಯಾರ್ಥಿಗಳಿಗೆ ಮಾನದಂಡವಲ್ಲ. ಉದ್ಯೋಗಕ್ಕೆ ಸೇರಿ ಅಲ್ಲಿ ಯಶಸ್ಸು ಪಡೆಯಬೇಕಾದರೆ ಅಂಕದ ಜತೆ ಪ್ರಾಯೋಗಿಕ ಜ್ಞಾನವೂ ಮುಖ್ಯ. ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದಲ್ಲಿ ಶಿಕ್ಷಕರ ಪಾತ್ರ ಮುಖ್ಯ. ಪ್ರತಿಯೊಬ್ಬರ ಮನಸ್ಥಿತಿ ಬದಲಾಗಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಓದಿ ಅರ್ಥೈಸಿಕೊಳ್ಳಬೇಕು. ಬಳಿಕ ಅದರ ಅನುಷ್ಠಾನಕ್ಕೆ ಮುಂದಾ ಗಬೇಕು ಎಂದರು.

ಶಿಕ್ಷಣ ವ್ಯಾಪಾರವಲ್ಲ :

Advertisement

ಸುರತ್ಕಲ್‌ ಗೋವಿಂದದಾಸ ಕಾಲೇಜಿನ ಪ್ರಾಧ್ಯಾಪಿಕೆ ಡಾ| ಆಶಾಲತಾ ಮಾತನಾಡಿ, ಶಿಕ್ಷಣ ವ್ಯಾಪಾರವಲ್ಲ. ಸಾರ್ವಜನಿಕ ಸೇವೆ. ಶಿಕ್ಷಣ ಪಡೆಯುವುದು ನಮ್ಮ ಹಕ್ಕು. ಅದನ್ನು ದೊರಕುವಂತೆ ಮಾಡುವುದು ರಾಜ್ಯದ ಕರ್ತವ್ಯ. ಆರ್ಥಿಕ ಉದಾರಿಕರಣದ ಸವಾಲು ನಿರ್ವಹಿಸಿದ ವಿಧಾನವನ್ನು ಆಧರಿಸಿದ ಹೊಸ ಶಿಕ್ಷಣ ನೀತಿಯನ್ನು ವಿಶ್ಲೇಷಣೆ ಮಾಡಬೇಕಿದೆ. ಶಿಕ್ಷಣದಲ್ಲಿ ಬಡ, ಮಧ್ಯಮ ಮತ್ತು ಶ್ರೀಮಂತ ಎಂಬ ವರ್ಗೀಕರಣವಾಗಬಾರದು. ಸಮಾನವಾದ ಶಿಕ್ಷಣ ಸಿಗಬೇಕು. ಶಿಕ್ಷಣಕ್ಕೆ ಮೂಲವಾದ, ಪೂರಕವಾದ ಅಡಿಪಾಯದಿಂದ ಬಡ ಸಮುದಾಯ ವಂಚಿತವಾಗಿದೆ ಎಂದರು.ಇದೇ ವೇಳೆ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ| ಎಂ. ಮೋಹನ್‌ ಆಳ್ವ, ಹಿರಿಯ ಕಂಪ್ಯೂಟರ್‌ ತಜ್ಞ ಕೆ.ಪಿ. ರಾವ್‌, ಸಮ್ಮೇಳನಾಧ್ಯಕ್ಷ ಡಾ| ಎಂ. ಪ್ರಭಾಕರ ಜೋಷಿ, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಪ್ರದೀಪ ಕುಮಾರ್‌ ಕಲ್ಕೂರ ಉಪಸ್ಥಿತರಿದ್ದರು.

ಸುಮನಾ ಗಾಟೆ ಅವರು ಬರೆದಿರುವ ಭಾವಕೋಶ ಎಂಬ ಕವನ ಸಂಕಲನವನ್ನು ಡಾ| ಎಂ. ಮೋಹನ್‌ ಆಳ್ವ ಬಿಡುಗಡೆಗೊಳಿಸಿದರು. ಪ್ರೊ| ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿ, ರಾಮಕೃಷ್ಣ ಬೆಳಾಲು ವಂದಿಸಿದರು. ಡಾ| ಪ್ರಕಾಶ್ಚಂದ್ರ ಶಿಶಿಲ ನಿರ್ವಹಿಸಿದರು.

ವೃತ್ತಿಪರ ಶಿಕ್ಷಣಕ್ಕೆ ಆದ್ಯತೆ :

ಮಣಿಪಾಲದ ಎಂಐಟಿ ಕಾಲೇಜಿನ ಪ್ರಾಧ್ಯಾಪಕ ಕರುಣಾಕರ ಕೋಟೆಕಾರ್‌ ಮಾತನಾಡಿ, ನೂತನ ಶಿಕ್ಷಣ ನೀತಿಯನ್ನು ಭಾರತ ಎದುರು ನೋಡುತ್ತಿದೆ. ಯಾವಾಗ ಭಾರತೀಯತೆಯ ಶಿಕ್ಷಣಕ್ಕೆ ನಾವು ಒತ್ತು ನೀಡುವುದಿಲ್ಲವೋ ಆ ವರೆಗೆ ಭಾರತ ವಿಶ್ವಗುರುವಾಗಲು ಸಾಧ್ಯವಿಲ್ಲ. ನೂತನ ಶಿಕ್ಷಣ ನೀತಿಯ ಪ್ರಕಾರ  ವೃತ್ತಿಪರ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ ಎಂದರು.

ಆಳವಾದ ಅಧ್ಯಯನ ಮುಖ್ಯ :

ಮಂಗಳೂರಿನ ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಉಪ ನ್ಯಾಸಕ ಡಾ| ಕುಮಾರಸ್ವಾಮಿ ಎಚ್‌. ಮಾತನಾಡಿ, ನೂತನ ಶಿಕ್ಷಣ ನೀತಿಯಲ್ಲಿ ಭಾಷೆಯ ಕಲಿಕೆ, ಬಹುಭಾಷಿಕತೆ ಮತ್ತು ಭಾಷೆಯ ಶಕ್ತಿಯ ಬಗ್ಗೆ ವಿವರಣೆ ಇದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತೃಭಾಷೆ, ಮನೆ ಭಾಷೆ ಮತ್ತು ಸ್ಥಳೀಯ ಭಾಷೆ ಎಂದು ವಿಂಗಡಣೆ ಮಾಡಬಹುದು. ಶಾಲೆಯ ಭಾಷೆಗೂ ಊರಿನ ಭಾಷೆಗೂ ವ್ಯತ್ಯಾಸ ಇರುತ್ತದೆ. ಶಾಲೆಯಲ್ಲಿ ಔಪಚಾರಿಕ ಭಾಷೆಯಾಗಿದೆ. ಎಲ್ಲವನ್ನೂ ಪರಿಗಣಿಸುವ ಚಿಂತನೆ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿದೆ. ಯಾವುದೇ ವಿಷಯದಲ್ಲಿ ಜ್ಞಾನವೃದ್ಧಿಯಾಗಬೇಕಾದರೆ ಭಾಷೆಯ ಬಗ್ಗೆ ಆಳವಾದ ಅಧ್ಯಯನ ಮುಖ್ಯ. ಜ್ಞಾನ ಸೃಷ್ಟಿ ಭಾಷೆಯಾಗಿ ಕನ್ನಡ ಬೆಳೆಯಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next