Advertisement

30ರಿಂದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

11:36 AM Jul 26, 2019 | Suhan S |

ಮಂಡ್ಯ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಜು.30 ಹಾಗೂ 31ರಂದು ಮದ್ದೂರಿನ ತಾಲೂಕು ಕ್ರೀಡಾಂಗಣದ ಆವರಣ ದಲ್ಲಿ ನಡೆಯಲಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಸಿ.ಕೆ.ರವಿಕುಮಾರ್‌ ಹೇಳಿದರು.

Advertisement

ಜಿ.ನಾರಾಯಣ ಮಹಾ ಮಂಟಪದಲ್ಲಿ ಎಂ.ಎಲ್.ಶ್ರೀಕಂಠೇಗೌಡ ಮಹಾ ದ್ವಾರದ ಹೆಚ್.ಕೆ.ವೀರಣ್ಣಗೌಡ ಪ್ರಧಾನ ವೇದಿಕೆಯಲ್ಲಿ ಸಮ್ಮೇಳನ ನಡೆಯಲಿದ್ದು, ಸಮ್ಮೇಳನಾ ಧ್ಯಕ್ಷರಾಗಿ ಸಾಹಿತಿ ತೈಲೂರು ವೆಂಕಟಕೃಷ್ಣ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಜು.30ರಂದು ಬೆಳಗ್ಗೆ 8.30ಕ್ಕೆ ಶಾಸಕ ಡಿ.ಸಿ.ತಮ್ಮಣ್ಣ ರಾಷ್ಟ್ರಧ್ವಜಾರೋಹಣ ಮಾಡುವರು. ಜಿಪಂ ಅಧ್ಯಕ್ಷೆ ನಾಗರತ್ನ ಸ್ವಾಮಿ ನಾಡ ಧ್ವಜ ಹಾಗೂ ಸಿ.ಕೆ.ರವಿಕುಮಾರ ಪರಿಷತ್‌ ಧ್ವಜ ಆರೋಹಣ ಮಾಡುವರು. ಬೆಳಗ್ಗೆ 10 ಗಂಟೆಗೆ ಮದ್ದೂರಿನ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಆವರಣದಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ. ಉದ್ಘಾಟನೆಯನ್ನು ಜಿಪಂ ಮುಖ್ಯ ಕಾರ್ಯನಿರ್ವಹ ಣಾಧಿಕಾರಿ ಕೆ.ಯಾಲಕ್ಕೀಗೌಡ ನೆರವೇರಿಸುವರು.

ಸಮ್ಮೇಳನ ಉದ್ಘಾಟನೆ: ಸಮ್ಮೇಳನದ ದಿವ್ಯ ಸಾನ್ನಿಧ್ಯವನ್ನು ಆದಿ ಚುಂಚನಗಿರಿ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ವಹಿಸುವರು. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಮನು ಬಳಿಗಾರ್‌ ಆಶಯ ನುಡಿಗಳನ್ನಾಡುವರು. ಹಿರಿಯ ಸಾಹಿತಿ ಡಾ.ಎಲ್.ಹನುಮಂತಯ್ಯ ಸಮ್ಮೇಳನ ಉದ್ಘಾಟಿಸುವರು. ಶಾಸಕ ಡಿ.ಸಿ.ತಮ್ಮಣ್ಣ ಎಲ್ಲರನ್ನೂ ಸ್ವಾಗತಿಸುವರು. ಪ್ರೊ.ಎಂ.ವೈ.ಶಿವರಾಮು ಸಂಪಾದಿಸಿ ರುವ ಸ್ಮರಣ ಸಂಚಿಕೆಯನ್ನು ಶಾಸಕ ಸಿ.ಎಸ್‌.ಪುಟ್ಟರಾಜು ಬಿಡುಗಡೆ ಮಾಡುವರು. ಸಂಸದೆ ಸುಮಲತಾ ಅಂಬರೀಶ್‌ ಪುಸ್ತಕ ಬಿಡುಗಡೆ ಮಾಡುವರು. ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ಜಿಪಂ ಅಧ್ಯಕ್ಷೆ ಎಸ್‌.ನಾಗರತ್ನಸ್ವಾಮಿ, ಪುಸ್ತಕ ಮಳಿಗೆಯನ್ನು ಲಯನ್ಸ್‌ ಜಿಲ್ಲಾ ಮಾಜಿ ರಾಜ್ಯಪಾಲ ಕೆ.ದೇವೇಗೌಡ ಉದ್ಘಾಟಿಸುವರು.

ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಡಾ.ಪ್ರದೀಪ್‌ಕುಮಾರ್‌ ಹೆಬ್ರಿ ಮಾತನಾಡುವರು. ಬಳಿಕ ಸಂಶೋಧಕ, ಸಾಹಿತಿ ತೈಲೂರು ವೆಂಕಟಕೃಷ್ಣ ಅತಿಥಿಗಳಾಗಿ ಭಾಗವಹಿ ಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲೆಯ ಎಲ್ಲಾ ವಿಧಾನಸಭೆ, ವಿಧಾನಪರಿಷತ್‌ ಸದಸ್ಯರು ಭಾಗವಹಿ ಸುವರು. ಮಧ್ಯಾಹ್ನ 2 ರಿಂದ 2.30ರವರೆಗೆ ಗಾಮನಹಳ್ಳಿ ಮಹದೇವಸ್ವಾಮಿ ಮತ್ತು ತಂಡದವರಿಂದ ಭಾವಗೀತೆ, ತತ್ವಪದ ಗಾಯನ ಕಾರ್ಯಕ್ರಮ ನಡೆಯಲಿದೆ.

Advertisement

ವಿಚಾರ ಗೋಷ್ಠಿ: ಮಧ್ಯಾಹ್ನ 2.30ರಿಂದ ಸಂಜೆ 5 ಗಂಟೆಯವರೆಗೆ ನೆಲದ ಸಿರಿ ಶೀರ್ಷಿಕೆಯಡಿ ವಿಚಾರ ಗೋಷ್ಠಿ ನಡೆಯಲಿದೆ. ಉದ್ಘಾಟನೆಯನ್ನು ಜಾನಪದ ವಿದ್ವಾಂಸ ಪ್ರೊ.ಹಿ.ಶಿ.ರಾಮಚಂದ್ರೇಗೌಡ ನೆರವೇರಿಸು ವರು. ಅಧ್ಯಕ್ಷತೆಯನ್ನು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಪ್ರೊ.ಜಿ.ಟಿ.ವೀರಪ್ಪ ವಹಿಸುವರು. ಗ್ರಾಮೀಣ ಮಹಿಳೆ ಮತ್ತು ಸಾಹಿತ್ಯ ಕುರಿತು ಮೈಸೂರು ಕುವೆಂಪುನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ಹೆಚ್.ಪಿ.ಗೀತಾ, ಗ್ರಾಮೀಣ ಆಹಾರಗಳು ಮತ್ತು ರೋಗ ನಿವಾರಣೆ ಬಗ್ಗೆ ವಿಜ್ಞಾನ ಮತ್ತು ಪರಿಸರ ಶಿಕ್ಷಣ ಅಕಾಡೆಮಿ ಅಧ್ಯಕ್ಷ ಡಾ.ಬಿ.ಕೆ.ಸುರೇಶ್‌ ಹಾಗೂ ಜಾನಪದ ಕ್ಷೇತ್ರಕ್ಕೆ ಜಿಲ್ಲೆಯ ಕೊಡುಗೆ ಬಗ್ಗೆ ಸರ್ಕಾರಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಎಂ.ವೈ.ಶಿವರಾಮು ವಿಷಯ ಮಂಡನೆ ಮಾಡುವರು.

ಕವಿಗೋಷ್ಠಿ: ಸಂಜೆ 5ರಿಂದ 6.30ರವರೆಗೆ ನಡೆಯುವ ಕವಿಗೋಷ್ಠಿ ಕಾರ್ಯಕ್ರಮದ ಉದ್ಘಾಟನೆಯನ್ನು ಚಲನಚಿತ್ರ ನಿರ್ದೇಶಕ ಟಿ.ಎಸ್‌.ನಾಗಾಭರಣ ಉದ್ಘಾಟಿಸುವರು. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ ಆಶಯ ನುಡಿಗಳನ್ನಾಡುವರು. ಅಧ್ಯಕ್ಷತೆಯನ್ನು ಸಾಹಿತಿ ಎಂ.ನಾಗೇಂದ್ರ ಪ್ರಸಾದ್‌ ವಹಿಸುವರು. ಕವಿಗೋಷ್ಠಿಯಲ್ಲಿ ಹಲವಾರು ಕವಿಗಳು ಕವನ ವಾಚನ ಮಾಡುವರು.

ಸಾಂಸ್ಕೃತಿಕ ಕಾರ್ಯಕ್ರಮ: ಸಂಜೆ 6.30ಕ್ಕೆ ಪಾಂಡವಪುರದ ಗ್ರಾಮ ರಂಗ ಸಾಂಸ್ಕೃತಿಕ ವೇದಿಕೆಯವರಿಂದ ಜನಪದ ಗೀತ ಗಾಯನ, ಪೂರ್ಣಪ್ರಜ್ಞಾ ಕಾನ್ವೆಂಟ್ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಸೌರಭ ನೃತ್ಯ ರೂಪಕ ನಡೆಯಲಿದೆ. ಸಂಜೆ 7.30ಕ್ಕೆ ಮಾರಸಿಂಗನಹಳ್ಳಿ ಮಲ್ಲರಾಜು ತಂಡದಿಂದ ಹೆಬ್ಬೆಟ್ಟು ನಾಟಕ ಪ್ರದರ್ಶನ ಏರ್ಪಡಿಸಿದೆ.

ಜು.31ರಂದು ಬೆಳಗ್ಗೆ 9.30ರಿಂದ 10.30ರವರೆಗೆ ಕೆ.ಆರ್‌.ಪೇಟೆಯ ಡಾ.ಶ್ರೀಕಾಂತ್‌ ಚಿಮಲ್ ಮತ್ತು ರವಿ ಶಿವಕುಮಾರ ಕಲಾತಂಡದಿಂದ ಭಾವಗೀತೆಗಳ ಗಾನಸುಧೆ ಏರ್ಪಡಿಸಿದೆ.

ವಿಚಾರಗೋಷ್ಠಿ-3: ಬೆಳಗ್ಗೆ 10.30ರಿಂದ 1 ಗಂಟೆಯವರೆಗೆ ಸಂಕೀರ್ಣ ವಿಚಾರಗೋಷ್ಠಿ ನಡೆಯಲಿದೆ. ಉದ್ಘಾಟನೆಯನ್ನು ಶಾಸಕ ಡಾ.ಕೆ.ಅನ್ನದಾನಿ ನೆರವೇರಿಸುವರು. ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ.ಬೋರೇಗೌಡ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಪ್ರೊ.ಹೆಚ್.ಎಸ್‌.ಮುದ್ದೇಗೌಡ ಆಶಯ ನುಡಿಗಳನ್ನಾಡುವರು.

ಆತ್ಮಹತ್ಯೆ – ರೈತರು ಬದುಕಬೇಡವೇ ವಿಷಯ ಕುರಿತು ರೈತ ಹೋರಾಟಗಾರ್ತಿ ನಂದಿನಿ ಜಯರಾಂ, ಸಾಮಾಜಿಕ ಜಾಲ ತಾಣ ಮತ್ತು ಯುವಜನಾಂಗ ಬಗ್ಗೆ ಪತ್ರಕರ್ತ ಎಂ.ಎನ್‌.ಯೋಗೇಶ್‌, ಕನ್ನಡ ಶಾಲೆಗಳಲ್ಲಿ ಇಂಗ್ಲಿಷ್‌ ಕಲಿಕೆ ಕುರಿತು ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ ಸಂಸ್ಥೆ ಸಂಚಾಲಕ ಕೆ.ಎಂ.ವಾಸು ವಿಷಯ ಮಂಡಿಸುವರು. ಮಧ್ಯಾಹ್ನ 1ರಿಂದ 2.30ರವರೆಗೆ ಶಿವಾರದ ಉಮೇಶ್‌ ಮತ್ತು ಮಂಡ್ಯ ಸತ್ಯ ಅವರಿಂದ ಹಾಸ್ಯಗೋಷ್ಠಿ ಕಾರ್ಯಕ್ರಮ ನಡೆಯಲಿದೆ.

ಸನ್ಮಾನ ಸಮಾರಂಭ: ಸಂಜೆ 4.30 ರಿಂದ 5.30ರವರೆಗೆ ಸನ್ಮಾನ ಸಮಾರಂಭ ನಡೆಯಲಿದ್ದು, ದಿವ್ಯಸಾನ್ನಿಧ್ಯವನ್ನು ಆದಿ ಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪುರುಷೋತ್ತಮಾ ನಂದನಾಥ ಸ್ವಾಮೀಜಿ, ಅಧ್ಯಕ್ಷತೆಯನ್ನು ಜನತಾ ಶಿಕ್ಷಣ ಟ್ರಸ್ಟ್‌ ಅಧ್ಯಕ್ಷ ಹೆಚ್.ಡಿ. ಚೌಡಯ್ಯ ವಹಿಸುವರು.

ಕನ್ನಡ ಸಾಹಿತ್ಯ ಪರಿಷತ್‌ ಗೌರವ ಕಾರ್ಯದರ್ಶಿ ವ.ಚ.ಚನ್ನೇಗೌಡ ಅಭಿನಂದನಾ ನುಡಿಗಳನ್ನಾಡುವರು. ಮಾಜಿ ಸಚಿವ ಎಂ.ಎಸ್‌.ಆತ್ಮಾನಂದ, ಜೆಡಿಎಸ್‌ ಮುಖಂಡ ಡಿ.ಟಿ.ಸಂತೋಷ್‌ ಸನ್ಮಾನಿಸುವರು.

ಗೋಷ್ಠಿಯಲ್ಲಿ ಎಂ.ಬಿ.ರಮೇಶ್‌, ಧನಂಜಯ ದರಸಗುಪ್ಪೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next