Advertisement

ಎರಡಂಕಿಯಿಂದ ಒಂದಂಕಿಗೆ ಜಿಗಿದ ಜಿಲ್ಲೆ

03:06 PM May 13, 2017 | Team Udayavani |

ಧಾರವಾಡ: ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಜಿಲ್ಲೆ ನಿರೀಕ್ಷೆಯಂತೆಯೇ ಜಿಲ್ಲಾವಾರು ಫಲಿತಾಂಶದಲ್ಲಿ ಎರಡು ಸ್ಥಾನ ಏರಿಕೆಗೊಂಡು ಒಂದಂಕಿ ಸ್ಥಾನ ಗಳಿಸಿದೆ. 2016ರಲ್ಲಿ ಶೇ.85.36ರಷ್ಟು ಸಾಧನೆ ಮಾಡುವ ಮೂಲಕ ರಾಜ್ಯದಲ್ಲಿ 10ನೇ ಸ್ಥಾನ ಪಡೆದಿದ್ದ ಧಾರವಾಡ ಜಿಲ್ಲೆ ಇದೀಗ ಶೇ.77.29ರಷ್ಟು ಸಾಧನೆ ಮಾಡುವ ಮೂಲಕ 8ನೇ ಸ್ಥಾನಕ್ಕೆ ಜಿಗಿತ ಕಂಡಿದೆ. 

Advertisement

ಜಿಲ್ಲೆಯ 396 ಶಾಲೆಗಳ ಪೈಕಿ 91 ಕೇಂದ್ರಗಳಲ್ಲಿ 26,950 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 20,218 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಇದೀಗ ಶಿಕ್ಷಣ ಇಲಾಖೆಯ ಸದ್ಯದ ಮಾಹಿತಿ ಪ್ರಕಾರ ಹುಬ್ಬಳ್ಳಿಯ ನವನಗರದ ರೋಟರಿ ಶಾಲೆಯ ಅನಿರುದ್ಧ ಕುಲಕರ್ಣಿ, ಎನ್‌.ಕೆ. ಠಕ್ಕರ್‌ ಶಾಲೆಯ ಪ್ರತಿಕ್ಷಾ ಕಾರಡಗಿ ಹಾಗೂ ಸುಷ್ಮಾ ಕುಲಕರ್ಣಿ 625ಕ್ಕೆ  ತಲಾ 621 ಅಂಕಗಳನ್ನು ಗಳಿಸಿದ್ದಾರೆ.

ಹುಬ್ಬಳ್ಳಿ ಚೇತನಾ ಪಬ್ಲಿಕ್‌ ಶಾಲೆಯ ಸುಶ್ಮಿತಾ, ಧಾರವಾಡ ಪ್ರಜೆಂಟೇಶನ್‌ ಶಾಲೆಯ ರೋಹಿಣಿ ಕಟ್ಟಿ, ಪವನ ಶಾಲೆಯ ಸ್ಫೂರ್ತಿ ಅಂಗಡಿ ಹಾಗೂ ಜೆಎಸ್ಸೆಸ್‌ ದೀಕ್ಷಾ 620 ಅಂಕಗಳನ್ನು ಪಡೆದಿದ್ದಾರೆ. ಹಾಗೆಯೇ, ಸೆಂಟ್‌ ಜೋಸೆಫ್‌ ಶಾಲೆಯ ಅಪರ್ಣಾ ಕುಲಕರ್ಣಿ, ನಿರಂಜನ ಪಟ್ಟಣಶೆಟ್ಟಿ ಮತ್ತು ರಾಯಾಪುರ ಕೆಎಲ್‌ಇ ಶಾಲೆಯ ಪ್ರಜ್ವಲ್‌ ತಲಾ 619 ಅಂಕಗಳನ್ನು ಪಡೆದಿದ್ದಾರೆ. 

ಈ ಕುರಿತಂತೆ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಡಿಡಿಪಿಐ ಎನ್‌.ಎಚ್‌.ನಾಗೂರ, ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಕೈಗೊಂಡಿರುವ ಕ್ರಮಗಳಿಂದ ವರ್ಷದಿಂದ ವರ್ಷಕ್ಕೆ ಜಿಲ್ಲೆಯ ಫಲಿತಾಂಶ ಉತ್ತಮಗೊಳ್ಳುವ ಮೂಲಕ ಜಿಲ್ಲಾವಾರು ಸ್ಥಾನದಲ್ಲೂ ಏರಿಕೆ ಕಾಣುವಂತೆ ಆಗಿದೆ. ಕಳೆದ ಬಾರಿ 10ನೇ ಸ್ಥಾನ ಪಡೆದಿದ್ದ ಧಾರವಾಡ ಜಿಲ್ಲೆಯನ್ನು 6,7,8 ಸ್ಥಾನಗಳ ಪೈಕಿ ಒಂದು ಸ್ಥಾನ ಪಡೆಯುವ ನಿಟ್ಟಿನಲ್ಲಿ ನಿರೀಕ್ಷೆ ಇಡಲಾಗಿತ್ತು.

ಅದರಂತೆ ಈಗ 8ನೇ ಸ್ಥಾನ ಪಡೆದಿದ್ದು, ಮುಂದಿನ ವರ್ಷ ಟಾಪ್‌ 5ನಲ್ಲಿ ಸ್ಥಾನ ಪಡೆಯುವ ನಿಟ್ಟಿನಲ್ಲಿ ರೂಪರೇಷೆ ಸಿದ್ದಪಡಿಸಲಾಗುವುದು. ಹೀಗಾಗಿ ಈ ಸಲ ಜೂನ್‌ 1ರಿಂದಲೇ ಸಕಲ ಸಿದ್ಧತೆಗಳನ್ನು ಆರಂಭಿಸಲಾಗುವುದು ಎಂದರು. ಜಿಲ್ಲೆಯ ಫಲಿತಾಂಶ ಗಮನಿಸಿದಾಗ ಪಾಸಿಂಗ್‌ ಪ್ಯಾಕೇಜ್‌ ಉತ್ತಮ ಪರಿಣಾಮ ಬೀರಿದೆ. ಮಕ್ಕಳನ್ನು ಕಲಿಕಾ ಪ್ರಗತಿಗೆ ತಕ್ಕಂತೆ ವಿಂಗಡಣೆ ಮಾಡಿ ಯಾರು ಯಾವ ವಿಷಯದಲ್ಲಿ ಹಿಂದುಳಿದ್ದಾರೆ ಎಂಬುದನ್ನು ಅರಿತು ಅವರಿಗೆ ತರಬೇತಿ ನೀಡಲಾಗಿತ್ತು.

Advertisement

ಗುಂಪು ಅಧ್ಯಯನ, ವಿಶೇಷ ತರಬೇತಿ, ಶಿಕ್ಷಕರಿಂದ ಮಕ್ಕಳನ್ನು ದತ್ತು ಪಡೆದು ವಿಶೇಷ ಕಾಳಜಿ ವಹಿಸಿದ್ದರಿಂದ ಉತ್ತಮ ಸಾಧನೆ ಮಾಡಲು ಸಾಧ್ಯವಾಯಿತು. ಇದರೊಂದಿಗೆ ವೈಶುದೀಪ ಫೌಂಡೇಶನ್‌ ಹಾಗೂ ಪ್ರೇರಣಾ ಸಮಿತಿ ಸದಸ್ಯರ ಪಾತ್ರವೂ ಸಾಕಷ್ಟಿದೆ ಎಂದರು. 

ವಾರ್ಷಿಕ ಪರೀಕ್ಷೆ ರೀತಿಯಲ್ಲಿಯೇ ಪೂರ್ವಭಾವಿ ಪರೀಕ್ಷೆ, ಸರಳ ಗಣಿತ, ಫೋನ್‌ ಇನ್‌ ಕಾರ್ಯಕ್ರಮ, ಶಾಲೆಗೆ ಬನ್ನಿ ಶನಿವಾರ ಕಲಿಕೆಗೆ ನೀಡಿ ಸಹಕಾರ ಅಂತಹ ವಿಶೇಷ ಯೋಜನೆಗಳನ್ನು ಸಹ ಈ ಸಂಸ್ಥೆಗಳು ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದ್ದಾರೆ ಎಂದರು.

ಶಿಕ್ಷಣಾಧಿಕಾರಿ ಗಿರೀಶ ಪದಕಿ ಮಾತನಾಡಿ, ಜಿಲ್ಲೆಯ ಎಲ್ಲ ಶಿಕ್ಷಕರು, ವಿದ್ಯಾರ್ಥಿಗಳು ಈ ಬಾರಿ ಉತ್ತಮ ಪ್ರಯತ್ನ ಮಾಡಿದ್ದಾರೆ. ಜೊತೆಗೆ ಹುಬ್ಬಳ್ಳಿಯ ರೋಟರಿ ಕ್ಲಬ್‌ ಸೇರಿದಂತೆ ಎಂಟಕ್ಕೂ ಹೆಚ್ಚು ಸ್ವಯಂ ಸೇವಾ ಸಂಸ್ಥೆಗಳು ಫಲಿತಾಂಶ ಏರಿಕೆಗೆ ಶ್ರಮ ವಹಿಸಿದ್ದಾರೆ. ಪ್ರಶ್ನೆ ಪತ್ರಿಕೆ ಮಾದರಿ ಬದಲಾಗಿದ್ದು, ಈ ಹಿನ್ನೆಲೆಯಲ್ಲಿ ಒಟ್ಟಾರೆ ಶೇಕಡಾವಾರು ಫಲಿತಾಂಶ ಕಡಿಮೆಯಾಗಿದೆ ಎಂದರು. 

ವೈಶುದೀಪ್‌ ಫೌಂಡೇಷನ್‌ ಕಾರ್ಯಾಧ್ಯಕ್ಷೆ ಶಿವಲೀಲಾ ಕುಲಕರ್ಣಿ ಮಾತನಾಡಿ, ಬರೀ ಎಸ್ಸೆಸ್ಸೆಲ್ಸಿ ಅಲ್ಲದೇ 8 ಹಾಗೂ 9ನೇ ತರಗತಿ ಮಕ್ಕಳ ಶಿಕ್ಷಣಕ್ಕೂ ಹೆಚ್ಚಿನ ಆದ್ಯತೆ ಕೊಡಲಾಗುತ್ತಿದೆ. ಸರಿಯಾದ ಅಕ್ಷರ ಜ್ಞಾನ ಇಲ್ಲದ ವಿದ್ಯಾರ್ಥಿಗಳಿಗೆ ಸರಿಯಾದ ತರಬೇತಿ, ಗುಂಪು ಓದು, ಶಿಕ್ಷಕರಿಗೆ ತರಬೇತಿ ನೀಡಿದ್ದರಿಂದ ಉತ್ತಮ ಫಲಿತಾಂಶ ಬಂದಿದೆ ಎಂದರು.  

Advertisement

Udayavani is now on Telegram. Click here to join our channel and stay updated with the latest news.

Next