Advertisement

‘ಸಾಹಿತ್ಯ, ಸಾಂಸ್ಕೃತಿಕ ಬೆಳವಣಿಗೆಗೆ ಜಿಲ್ಲೆಯ ಪತ್ರಕರ್ತರ ಕೊಡುಗೆ ಹಿರಿದು’

10:56 PM Jul 02, 2019 | sudhir |

ಬದಿಯಡ್ಕ: ಸಾಹಿತ್ಯ, ಸಾಂಸ್ಕೃತಿಕ ಬೆಳವಣಿಗೆಗಳಲ್ಲಿ ಕಾಸರಗೋಡಿನ ಪತ್ರಕರ್ತರ ಕೊಡುಗೆ ಮಹನೀಯ. ಇಲ್ಲಿನ ಕನ್ನಡ ಶಾಲೆಗಳಲ್ಲಿ ನೂರಾರು ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ತೋರುವ ಆಸಕ್ತಿ ಹಾಗೂ ಕನ್ನಡ ಪತ್ರಿಕೆಗಳ ಸಹಾಯ ಅನನ್ಯವಾಗಿದೆ. ಕಾಸರಗೋಡಿನಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಕನ್ನಡ ಪತ್ರಕರ್ತರು ಮತ್ತು ಪತ್ರಿಕೆಗಳ ಪಾತ್ರ ಹಿರಿದಾದುದು.

Advertisement

ಪ್ರತಿಯೊಂದು ಸಾಹಿತ್ಯ ಮತ್ತು ಸಾಹಿತಿಯ ಬೆಳವಣಿಗೆಯ ಹಿಂದಿನ ಶಕ್ತಿ ಪತ್ರಿಕೆಗಳು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಚುರ ಪಡಿಸುವ ಮೂಲಕ ಜನರನ್ನು ತಲುಪುವಂತೆ ಮಾಡುವಲ್ಲಿ ಹಾಗೂ ಕಾರ್ಯಕ್ರಮಗಳತ್ತ ಜನರನ್ನು ಸೆಳೆಯುವಲ್ಲಿ ಪ್ರಧಾನ ಪಾತ್ರವಹಿಸುವ ಪತ್ರಿಕಾರಂಗ ಒಂದು ಪ್ರಜ್ಞಾವಂತ ಸಮಾಜವನ್ನು ನಿರ್ಮಿಸಿ ದೇಶದ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಬ್ಲಾಕ್‌ ಪಂಚಾಯತ್‌ ಅಧ್ಯಕ್ಷೆ ಓಮನಾ ರಾಮಚಂದ್ರನ್‌ ಅಭಿಪ್ರಾಯಪಟ್ಟರು.

ಅವರು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಹಾಗೂ ಎನ್‌ಎಸ್‌ಎಸ್‌ ನೇತೃತ್ವದಲ್ಲಿ ಮುಳ್ಳೇರಿಯ ಜಿವಿಎಚ್ಎಸ್‌ಎಸ್‌ನಲ್ಲಿ ನಡೆದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಅಕಾಡೆಮಿಯ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಇ-ವಿಶನ್‌ನ ರಫೀಕ್‌ ಕೇಳ್ಳೋಟ್ ಮಾತನಾಡಿ ಶರೀರಕ್ಕೆ ಹೇಗೆ ವ್ಯಾಯಾಮ ಅಗತ್ಯವೋ ಹಾಗೆಯೇ ಮನಸ್ಸಿಗೂ ವ್ಯಾಯಾಮ ಅಗತ್ಯ. ಪತ್ರಿಕೆಗಳ ಓದು ಮನಸ್ಸಿನ ವ್ಯಾಯಾಮ. ಆದುದರಿಂದ ದಿನಪತ್ರಿಕೆ, ವಾರಪತ್ರಿಕೆ, ಪಾಕ್ಷಿಕಗಳನ್ನು ಕೊಂಡು ಓದುವ ಮೂಲಕ ಜ್ಞಾನ ಮತ್ತು ಹೊಸ ಅನುಭೂತಿಯನ್ನು ಅನುಭವಿಸಲು ಸಾಧ್ಯ. ಪತ್ರಿಕೆ ಪುಸ್ತಕಗಳನ್ನು ಓದುವ ಹವ್ಯಾಸವನ್ನು ನಾವು ಬೆಳೆಸಿಕೊಳ್ಳಬೇಕು. ಸೌಹಾರ್ದಯುತ ಮನೋಭಾವ, ವಿಸ್ತಾರವಾದ ಚಿಂತನಾಶೀಲತೆ, ಸಮಾಜದ ಅಗತ್ಯಗಳನ್ನು ಮನಗಂಡು ಸ್ಪಂಧಿಸುವಂತೆ ಮಾಡುವಲ್ಲಿ ಪತ್ರಿಕಾ ಓದು ಅತ್ಯಂತ ಪರಿಣಾಮಕಾರಿ ಎಂದರು. ಇನ್ನೋರ್ವ ಮುಖ್ಯ ಅತಿಥಿ ಪತ್ರಕರ್ತ ಸಂಘಟಕ ಜಯಮಣಿಯಂಪಾರೆ ಪತ್ರಿಕೆಗಳ ವಾಚನಕ್ಕೆ ನೀಡುವ ಪ್ರಾಮುಖ್ಯ ಹೆಚ್ಚಾದಂತೆ ಸುಸಂಸ್ಕೃತ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ನಮ್ಮ ಸುತ್ತಮುತ್ತಲ ಆಗುಹೋಗುಗಳನ್ನು ತಿಳಿಯಲು ಸಹಾಯಕವಾಗುತ್ತದೆ. ಆದುದರಿಂದ ವಿಶೇಷ ದಿನವನ್ನು ವಿಶೇಷವಾಗಿ ಆಚರಿಸಿ ಮಾದರಿಯಾದ ಅಕಾಡೆಮಿಯ ಕಾರ್ಯವನ್ನು ಶ್ಲಾಘಿಸಿದರು. ಅಕಾಡೆಮಿಯ ಉಪಾಧ್ಯಕ್ಷ ಪ್ರೊ| ಶ್ರೀನಾಥ್‌, ಪತ್ರಕರ್ತ ಪುರುಷೋತ್ತಮ ಭಟ್ ಪೆರ್ಲ, ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ, ಬ್ಲಾಕ್‌ ಪಂಚಾಯತ್‌ ಸದಸ್ಯ ವಾರಿಜಾಕ್ಷನ್‌, ಶಾಲಾ ಪ್ರಾಂಶುಪಾಲರಾದ ನಾರಾಯಣ, ರಾಮಚಂದ್ರ ಬಳ್ಳಾಲ, ಸುಭಾಷ್‌ ಶುಭಾಶಂಸನೆಗೈದರು.

ಪ್ರಸ್ತುತ ಕಾರ್ಯಕ್ರಮದಲ್ಲಿ ಮುಳ್ಳೇರಿಯದಲ್ಲಿ ಕಳೆದ 55 ವರ್ಷಗಳಿಂದ ಪತ್ರಿಕೆ ಮಾರಾಟ ಮಾಡುತ್ತಿರುವ ಹಿರಿಯ ಪತ್ರಿಕಾ ವಿತರಕ ಕೃಷ್ಣ ಭಟ್ ದಂಪತಿಯನ್ನು ಈ ಸಂದರ್ಭದಲ್ಲಿ ಸಮ್ಮಾನಿಸಲಾಯಿತು. ಸಮ್ಮಾನ ಸ್ವೀಕರಿಸಿ ಮಾತನಾಡಿದ ಕೃಷ್ಣ ಭಟ್ ತನ್ನ ಅನುಭವಗಳನ್ನು ತೆರೆದಿಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next