ದಾವಣಗೆರೆ: ಬಳ್ಳಾರಿ ಜಿಲ್ಲಾ ಆರ್ ಸಿಎಚ್ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಡಾ.ಎಂ.ಎಚ್.ರವೀಂದ್ರನಾಥ್ ಹಿರಿಯ ಐಎಎಸ್ ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಕಳೆದ ನಾಲ್ಕು ದಿನಗಳಿಂದ ದಾವಣಗೆರೆಯಲ್ಲಿ ಆಟೋ ಚಾಲಕರಾಗಿ ದುಡಿಯುತ್ತಿದ್ದಾರೆ.
ಎನ್ಎಂಎಚ್ ಯೋಜನೆಯಡಿ ಇ- ಟೆಂಡರ್ ಪ್ರಕ್ರಿಯೆಯಲ್ಲಿ ಡಾ. ರವೀಂದ್ರನಾಥ್ ತಪ್ಪು ಮಾಡಿದ್ದಾರೆ ಎಂದು ಬಳ್ಳಾರಿ ಜಿಲ್ಲಾ ಪಂಚಾಯತ್ ನ ಹಿಂದಿನ ಸಿಇಒ ನಿತಿನ್ ಅಮಾನತುಗೊಳಿಸಿದ್ದರು. ಅಮಾನತು ಆದೇಶ ಪ್ರಶ್ನಿಸಿ ಡಾ. ರವೀಂದ್ರನಾಥ್ ಕೆಎಟಿ ಮೊರೆ ಹೋಗಿದ್ದರು. ಡಾ.ರವೀಂದ್ರನಾಥ್ ತಪ್ಪು ವೆಸಗಿಲ್ಲ ಎಂದು ಕೆಎಟಿ ಆದೇಶ ನೀಡಿತ್ತು. ತದ ನಂತರ ಡಾ. ರವೀಂದ್ರನಾಥ್ ಅವರನ್ನು ಸೇಡಂ ತಾಲೂಕು ಆಸ್ಪತ್ರೆಗೆ ಹಿರಿಯ ವೈದ್ಯಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿತ್ತು.
ಜಿಲ್ಲಾ ಮಟ್ಟದ ಅಧಿಕಾರಿಯಾಗಿದ್ದ ತಮ್ಮನ್ನು ತಾಲ್ಲೂಕು ಅಧಿಕಾರಿಯಾಗಿ ವರ್ಗಾವಣೆ ಮಾಡಿದ್ದನ್ನು ಪ್ರಶ್ನಿಸಿ ಮತ್ತೆ ಕೆಎಟಿ ಮೊರೆ ಹೋಗಿದ್ದರು. ಕೆಎಟಿ ಜಿಲ್ಲಾ ಮಟ್ಟದ ಅಧಿಕಾರಿ ಹುದ್ದೆ ನೀಡುವಂತೆ ಡಾ. ರವೀಂದ್ರನಾಥ್ ಪರ ಆದೇಶ ನೀಡಿತ್ತು. ಆದರೂ ಈವರೆಗೆ ಆದೇಶ ಪಾಲನೆ ಆಗಿಲ್ಲ. ಹಣ ನೀಡಿದರೆ ಮಾತ್ರವೇ ಹುದ್ದೆ ನೀಡಲಾಗುತ್ತದೆ ಎಂದು ಕೆಲ ಅಧಿಕಾರಿಗಳು ನೇರವಾಗಿ ಹೇಳಿದ್ದಾರೆ ಎಂದು ಆರೋಪಿಸುವ ರವೀಂದ್ರನಾಥ್ ಜೀವನ ನಿರ್ವಹಣೆಗಾಗಿ ದಾವಣಗೆರೆಯಲ್ಲಿ ಆಟೋ ರಿಕ್ಷಾ ಓಡಿಸುತ್ತಿರುವುದಾಗಿ ಹೇಳುತ್ತಾರೆ.
ಇದನ್ನೂ ಓದಿ: ಶ್ರೀಮಂತರ ಮಕ್ಕಳಿಗೆ ಐಸ್ ಕ್ರೀಂ, ಹಣ್ಣಿನಲ್ಲಿ ಡ್ರಗ್ಸ್ ನೀಡುವ ಗುಮಾನಿಯಿದೆ: ಸುರೇಶ್ ಕುಮಾರ್
ಸರ್ಕಾರಿ ವ್ಯವಸ್ಥೆ ಯಲ್ಲಿನ ಲೋಪದೋಷಗಳನ್ನು ಜನರಿಗೆ ತಿಳಿಸುವ ಜೊತೆಗೆ ಏನಾದರೂ ಮಾಡಿಯೂ ಜೀವನ ನಡೆಸಬಹುದು ಎಂದು ಸಮಾಜಕ್ಕೆ ಸಂದೇಶ ನೀಡುವ ಉದ್ದೇಶದಿಂದ ಆಟೋರಿಕ್ಷಾ ಚಾಲಕನಾಗಿ ಕೆಲಸ ಮಾಡುತ್ತಿರುವುದಾಗಿ ರವೀಂದ್ರನಾಥ್ ಹೇಳುತ್ತಾರೆ.
ಒಂದೊಮ್ಮೆ ಮತ್ತೆ ಕೆಲಸಕ್ಕೆ ಕರೆ ಬಂದಾಗ ನೋಡೋಣ ಅಲ್ಲಿಯವರೆಗೆ ಕಾದು ನೋಡುವ ತಂತ್ರ ಅನುಸರಿಸುವ ಬಗ್ಗೆ ಹೇಳುತ್ತಾರೆ. ಮತ್ತೆ ಕೆಲಸಕ್ಕೆ ಹೋಗದೇ ಇದ್ದರೆ ಕೊನೆಯವರೆಗೆ ಆಟೋರಿಕ್ಷಾ ಚಾಲನೆ ಕೆಲಸ ಮುಂದುವರೆಸುವುದಾಗಿ ದೃಢವಾಗಿ ಹೇಳುತ್ತಾರೆ. ಆಟೋರಿಕ್ಷಾ ಚಾಲಕನಾಗಿ ಮಾಡುತ್ತಿರುವ ಕೆಲಸದಲ್ಲಿ ತೃಪ್ತಿ ದೊರೆಯುತ್ತಿದೆ ಎನ್ನುವ ರವೀಂದ್ರನಾಥ್ ತಮ್ಮನ್ನು ವಿನಾಕಾರಣ ಅಮಾನತು ಮಾಡಿರುವ ಅಧಿಕಾರಿಗಳಿಗೂ ಶಿಕ್ಷೆ ಆಗಬೇಕು ಎಂದು ಒತ್ತಾಯಿಸುತ್ತಾರೆ.