Advertisement

ಜಿಲ್ಲೆ ಅಭಿವೃದ್ಧಿ -ಪ್ರವಾಸೋದ್ಯಮಕ್ಕೆ ಆದ್ಯತೆ

02:11 PM Jun 16, 2018 | Team Udayavani |

ಬೀದರ: ಗಡಿ ಜಿಲ್ಲೆಯವರಾದ ನಾವು ಸರ್ಕಾರದ ಯೋಜನೆಗಳ ಲಾಭ ಪಡೆಯಬೇಕು. ತೆಲಂಗಾಣ ಹಾಗೂ ಮಹಾರಾಷ್ಟ್ರ ರಾಜ್ಯಗಳ ಮಧ್ಯದಲ್ಲಿ ಇರುವ ಜಿಲ್ಲೆಯನ್ನು ಅಭಿವೃದ್ಧಿಗೊಳಿಸುವುದರ ಜೊತೆಗೆ ಪ್ರವಾಸೋದ್ಯಮಕ್ಕೆ ಹೆಚ್ಚು ಆದ್ಯತೆ ನೀಡಲಾಗುವುದು ಎಂದು ಸಹಕಾರ ಸಚಿವ ಬಂಡೆಪ್ಪ ಖಾಶೆಂಪುರ ಹೇಳಿದರು.

Advertisement

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಹಿತದೃಷ್ಟಿಯಿಂದ ಜಿಲ್ಲೆಯ ಆರು ಜನ ಶಾಸಕರು ಹಾಗೂ ಸಂಸದರು ಒಟ್ಟಾಗಿ ಯೋಜನೆಗಳನ್ನು ಹಾಕಿಕೊಂಡು ಕೆಲಸ ಮಾಡುವುದಾಗಿ ಹೇಳಿದರು.

2006ರಲ್ಲಿ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದ ಸಂದರ್ಭದಲ್ಲಿ ಬೀದರ ಉತ್ಸವ ಆಚರಿಸುವ ಮೂಲಕ ರಾಜ್ಯದ ಗಮನ ಸೆಳೆಯಲಾಗಿತ್ತು. ಪ್ರವಾಸೋದ್ಯಮ ಬೆಳೆಸುವ ನಿಟ್ಟಿನಲ್ಲೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮುಂದಿನ ದಿನಗಳಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಯತ್ನಿಸುವುದಾಗಿ ಹೇಳಿದರು.

ನೀರಾವರಿ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಕೆಲಸ ಮಾಡಬೇಕಾಗಿದೆ. ಜಿಲ್ಲೆಯಿಂದ ಹರಿದುಹೋಗುವ ಗೋದಾವರಿ ನದಿ ನೀರಿನಲ್ಲಿ ಜಿಲ್ಲೆಗೆ 27 ಟಿಎಂಸಿ ಅಡಿ ಬಳಸಿಕೊಳ್ಳಲು ಅವಕಾಶವಿದೆ. ಆದರೆ ಸದ್ಯ, ಕೇವಲ 11ರಿಂದ 12 ಟಿಎಂಸಿ ಅಡಿ ನೀರು ಕೂಡ ಬಳಸಿಕೊಕೊಳ್ಳುತ್ತಿಲ್ಲ ಎಂಬುದು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಗೊತ್ತಾಗಿದೆ.

ಈ ಹಿನ್ನೆಲೆಯಲ್ಲಿ ಮಾಹಿತಿ ನೀಡಿದ ಅಧಿಕಾರಿಗಳನ್ನು ಜಿಲ್ಲೆಗೆ ಕರೆಸಿ ನಮಗೆ ದೊರಕಬೇಕಾದ ನೀರನ್ನು ನಾವು
ಬಳಸುವಂತಾಗಬೇಕು. ಈ ನಿಟ್ಟಿನಲ್ಲಿ ಯೋಜನೆ ರೂಪಿಸುವಂತೆ ತಿಳಿಸಲಾಗಿದೆ ಎಂದರು.

Advertisement

ಶಿಕ್ಷಣ ಕ್ಷೇತ್ರದಲ್ಲಿ ಬೀದರ ಕೊನೆ ಸ್ಥಾನದ ಹಣೆ ಪಟ್ಟಿಯಿಂದಲೇ ಗುರುತಿಸಿಕೊಳ್ಳುತ್ತ ಬರುತ್ತಿದೆ. ಇದು ಜಿಲ್ಲೆಯ ಅಭಿವೃದ್ಧಿಗೂ ಮಾರಕವಾಗಿದ್ದು, ಈ ನಿಟ್ಟಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ  ಮೂಲಾಗ್ರ ಬದಲಾವಣೆ ಅಗತ್ಯವಾಗಿದೆ. ಈ ಹಿಂದೆ 10ನೇ ತರಗತಿ ವಿದ್ಯಾರ್ಥಿಗಳಿಗೆ ರಾತ್ರಿ ತರಬೇತಿ ನೀಡಿ ಫಲಿತಾಂಶದಲ್ಲಿ ಸುಧಾರಣೆ ತರುವ ಕೆಲಸ ಮಾಡಲಾಗಿತ್ತು.

ಮುಂದೆಯೂ ಕೂಡ ಆ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುವುದು. ಜಿಲ್ಲೆಯ ಜನರಿಗೆ ಉತ್ತಮ ಆರೋಗ್ಯ ಸೇವೆಗಳು ದೊರೆಯಬೇಕೆಂಬ ನಿಟ್ಟಿನಲ್ಲಿ ಅಧಿಕಾರಿಗಳ ಜೊತೆ ಚರ್ಚಿಸಲಾಗಿದ್ದು, ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ  ಗುಣಮಟ್ಟದ ಸೇವೆಗಳನ್ನು ನೀಡುವುದರಿಂದ ಜಿಲ್ಲೆಯ ಜನರು ಹೈದ್ರಾಬಾದ, ಸೂಲಾಪೂರ  ಆಸ್ಪತ್ರೆಗಳಿಗೆ   ಹೋಗುವುದು ತಪ್ಪಿಸಬಹುದಾಗಿದೆ. ಈ ನಿಟ್ಟಿನಲ್ಲಿ ವೈದ್ಯರು ಕೆಲಸ ಮಾಡಬೇಕಾಗಿದೆ ಎಂದರು.

ಬೀದರ ಸಹಕಾರ ಸಕ್ಕರೆ ಕಾರ್ಖಾನೆ ಪುನಶ್ಚೇತನ ಸಂಬಂಧ ಈಗಾಗಲೇ ಬೆಂಗಳೂರಿನಲ್ಲಿ ಅಧಿಕಾರಿಗಳ
ಜೊತೆ ಸಭೆ ನಡೆಸಿದ್ದು, ಈ ಕುರಿತು ಕಾರ್ಯ ಯೋಜನೆ ತಯಾರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಹುಮನಾಬಾದ ಶಾಸಕ ರಾಜಶೇಖರ ಪಾಟೀಲ ಕೂಡ ಸಚಿವರಿದ್ದು, ಅವರ ಜೊತೆಯಲ್ಲೂ ಮಾತುಕತೆ
ನಡೆಸಿದ್ದೇನೆ. ಎಲ್ಲರೂ ಸೇರಿ ಕಾರ್ಖಾನೆ ಪ್ರಾರಂಭಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಹೇಳಿದರು.

ಸದ್ಯ ಕಾರ್ಖಾನೆ ಪ್ರಾರಂಭಿಸಲು ಸುಮಾರು 40 ಕೋಟಿ ರೂ. ಹಣಕಾಸಿನ ಅಗತ್ಯವಿದೆ. ಕಾರ್ಖಾನೆಯಲ್ಲಿ ಯಾವುದೇ ರೀತಿಯ ಅಕ್ರಮ ಸಹಿಸುವುದಿಲ್ಲ. ಈಗಾಗಲೇ ಬಿಡುಗಡೆಗೊಂಡ 10 ಕೋಟಿ ರೂ. ಹಣದಲ್ಲಿ ಅವ್ಯವಹಾರ ನಡೆದಿದ್ದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವುದಾಗಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next