ಮಡಿಕೇರಿ: ಕೊರೊನಾ ವೈರಸ್ ಹರಡದಂತೆ ಕರ್ನಾಟಕ ಸರ್ಕಾರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಹೊರಡಿಸಿರುವ ಆದೇಶಗಳನ್ನು ಕೊಡಗು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಪಾಲಿಸಲು ಜಿಲ್ಲಾಡಳಿತ ಮುಂದಾಗಿದ್ದು,ಜಿಲ್ಲೆಯಲ್ಲಿ ನಡೆಯಲಿರುವ ಹಲವಾರು ಜಾತ್ರೆ ಹಾಗೂ ಸಂತೆಗಳನ್ನು ರದ್ದುಪಡಿಸುವಂತೆ ಜಿಲ್ಲಾಡಳಿತ ನಿರ್ದೇಶನ ನೀಡಿದೆ. ಆದರೂ ಕೆಲವೆಡೆ ಪಂಚಾಯಥ್ ಅಧಿಕಾರಿಗಳ ಹಾಗೂ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದ ಸಂತೆಗಳು ನಡೆಯುತ್ತಿರುವುದು ಗಮನಕ್ಕೆ ಬಂದಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಅಭಿವೃದ್ಧಿ ಅಧಿಕಾರಿಗಳಿಗೆ ಪ್ರತ್ಯೇಕವಾಗಿ ನಿರ್ದೇಶ ನೀಡಿರುವ ಜಿಲ್ಲಾಡಳಿತ, ಸಂತೆ ಇತ್ಯಾದಿ ಇರುವೆಡೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ.
ಜನಸಂದಣಿಯಾಗದಂತೆ ನಿಗಾ ವಹಿಸುವುದು, ತೆರೆದಿಟ್ಟ ತಿಂಡಿ ತಿನಿಸು, ಕತ್ತರಿಸಿದ ಹಣ್ಣು ಇತ್ಯಾದಿ ಮಾರುವುದನ್ನು ಸಂಪೂರ್ಣ ನಿಷೇಧಿಸುವುದು, ಪಾನಿಪೂರಿ ಅಥವಾ ಇತರೆ ಫಾಸ್ಟ್ ಫುಡ್ ತಿನಿಸು ಮಾರುವುದನ್ನು ಸಂಪೂರ್ಣ ನಿಷೇಧಿಸುವಂತೆ ಸಲಹೆ ಮಾಡಿದೆ.ಈಗಾಗಲೇ ವಿದೇಶಿ ಪ್ರಯಾಣ ಇತಿಹಾಸ ಹೊಂದಿರುವ ವ್ಯಕ್ತಿಗಳು ಕಡ್ಡಾಯವಾಗಿ ಮನೆಯಲ್ಲಿ ಇರುವಂತೆ ಹಾಗೂ ಸಂತೆಯಲ್ಲಿ ಭಾಗವಹಿಸದಂತೆ ಮುನ್ನೆಚ್ಚರಿಕೆ ವಹಿಸುವುದು, ಆಶಾ ಸಿಬ್ಬಂದಿಗಳು, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಪಂಚಾಯತ್ ಸಿಬಂದಿ ಅಗತ್ಯ ಸುಕ್ಷಾ ಪರಿಕರಗಳೊಂದಿಗೆ ಮುಂಜಾಗ್ರತೆ ವಹಿಸುವುದು, ಮಾಂಸ ಮಳಿಗೆಗಳಲ್ಲಿ ತೆರೆದಿಟ್ಟು ಮಾರುವುದನ್ನು ನಿಷೇಧಿಸುವುದು, ಗಾಜಿನ ಪೆಟ್ಟಿಗೆ ಅಥವಾ ಇತರೆ ಸುಕ್ಷಾ ಕ್ರಮ ಅನುಸರಿಸುವುದು, ಸಂತೆಗೆ ಚಿಕ್ಕ ಮಕ್ಕಳನ್ನು ಕರೆತರದಂತೆ ಮಾಹಿತಿ ನೀಡುವುದು,ಕೊರೊನಾ ಸೋಂಕಿನ ಶಂಕೆ ಇರುವ ವ್ಯಕ್ತಿಗಳ ಕುಟುಂಬದ 3 ಜನ ಸದಸ್ಯರೂ ಸೇರಿ ಒಟ್ಟು 6 ಜನರನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿಟ್ಟು ನಿಗಾ ವಹಿಸಲಾಗಿದೆ. ಎಂದು ಜಿಲ್ಲಾಧಿಕಾರಿ ಅನೀಸ್ ಜಾಯ್ ಅವರು ಸ್ಪಷ್ಟಪಡಿಸಿದ್ದಾರೆ.
ಸಂಪೂರ್ಣ ನಿಷೇಧ
ತರಕಾರಿ ಸೇರಿದಂತೆ ಜನರಿಗೆ ಅಗತ್ಯವಾಗಿ ಬೇಕಾದ ಅವಶ್ಯ ವಸ್ತುಗಳನ್ನು ಒದಗಿಸಲು ಅನುವು ಮಾಡಿಕೊಡುವುದು, ತಟ್ಟೆ, ಲೋಟ, ಸ್ಪೂನ್ ಇತ್ಯಾದಿ ಬಳಸಿ ತಿನ್ನುವ ವಸ್ತುಗಳನ್ನು ಮಾರುವುದನ್ನು ಸಂಪೂರ್ಣ ನಿಷೇಧಿಸುವುದು, ಸಂತೆಯ ಅವಧಿಯನ್ನು ಸೀಮಿತಗೊಳಿಸುವುದು.), ಸಂತೆಯಲ್ಲಿ ಗುಂಪಿನಲ್ಲಿ ತೆರಳುವುದನ್ನು ಸಂಪೂರ್ಣ ನಿಷೇಧಿಸುವುದು, ಸಂತೆ ಮುಗಿದ ತಕ್ಷಣ ಸ್ವಚ್ಚತಾ ಕಾರ್ಯ ಕೈಗೊಳ್ಳುವುದು,ಆರೋಗ್ಯ ಇಲಾಖೆಯ ಮೊಬೈಲ್ ಯುನಿಟ್ ಸೌಲಭ್ಯ ಪಡೆಯುವುದು, ಸಂತೆಯಲ್ಲಿ ಸ್ವತ್ಛತೆ ಕಾಪಾಡುವುದು ಹಾಗೂ ಸಾಂಕ್ರಾಮಿಕ ಕಾಯಿಲೆ ಹರಡದಂತೆ ವಹಿಸಬೇಕಾದ ಕ್ರಮಗಳ ಬಗ್ಗೆ ಜಿಲ್ಲೆಯಾದ್ಯಂತ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.